ನೇಹಾ ಹತ್ಯೆ – ಮುಸ್ಲಿಂ ಬಾಂಧವ್ಯ ವೇದಿಕೆ ಖಂಡನೆ..

0
291

ಸನ್ಮಾರ್ಗ ವಾರ್ತೆ

ಅತ್ಯಾಚಾರವಾಗಿ ಭೀಕರವಾಗಿ ಹತ್ಯೆಯಾದ ಸೌಜನ್ಯ ಹತ್ಯೆ, ನೇಜಾರು ಸಾಮೂಹಿಕ ಹತ್ಯೆ, ರುಕ್ಸಾನ ಹತ್ಯೆ ಮತ್ತು ನಿರಂತರ ಸಂಭವಿಸುವ ನೂರಾರು ಇಂತಹ ಹತ್ಯೆಗಳ ತನಿಖೆ ಮತ್ತು ಶಿಕ್ಷೆಯ ವಿಳಂಬದಿಂದಾಗಿ ಅತ್ಯಾಚಾರ ಕೊಲೆ ನಡೆಸುವ ಅಪರಾಧಿಗಳಿಗೆ ಭಯವಿಲ್ಲದಾಗಿದೆ.

ಹೆಣ್ಣು ಮಕ್ಕಳ ಮೇಲೆ ನಡೆಯುವ ಇಂತಹ ಘೋರ ಅಪರಾಧಗಳನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶಿಕ್ಷಿಸಲು ವಿಫಲವಾಗಿರುವುದೇ ಅತ್ಯಾಚಾರ ಕೊಲೆಗಳು ನಿರಂತರವಾಗಿ ಸಂಭವಿಸಲು ಮುಖ್ಯ ಕಾರಣವಾಗಿದೆ.

ಇಂತಹ ಹತ್ಯೆಗಳು ಸಂಭವಿಸಿದಾಗ ಕೆಲವು ರಾಜಕಾರಣಿಗಳು ಇದನ್ನು ತಮ್ಮ ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಾರೆ ಬಿಟ್ಟರೆ ಇಂತಹ ಘಟನೆಗಳು ಮರುಕಳಿಸದಂತೆ ಶಾಸನ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿಲ್ಲ. ಹೀಗಾಗಿ ಅತ್ಯಾಚಾರ ಕೊಲೆಗಳು ನಿತ್ಯ ನಿರಂತರವಾಗಿ ಸಂಭವಿಸುತ್ತಿವೆ.

ಆಘಾತಕಾರಿ ವಿಷಯವೆಂದರೆ, ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕೆ ಸಹಾಯವಾಗುವ ಹತ್ಯೆಗಳಿಗೆ ಮಾತ್ರ ಆದ್ಯತೆಯನ್ನು ಕೊಟ್ಟು, ಅದಕ್ಕೆ ಮಾತ್ರ ಕೋಮು ಬಣ್ಣ ಬಳಿದು, ತೋರಿಕೆಯ ಪ್ರತಿಭಟನೆಗಳನ್ನು ನಡೆಸಿ ಸಮಾಜವನ್ನು ಒಡೆಯುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಎಂಬ ಅಮಾಯಕ ಹೆಣ್ಣು ಮಗಳ ಹತ್ಯೆಯಲ್ಲಿ ಕೂಡ ಅಪರಾಧಿಗೆ ಶೀಘ್ರ ಶಿಕ್ಷೆಯನ್ನು ನೀಡಬೇಕೆಂಬ ಆಗ್ರಹಕ್ಕಿಂತ, ರಾಜಕೀಯವಾಗಿ ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ದುರಾಲೋಚನೆಯನ್ನೇ ಕೆಲವು ವಿಘ್ನ ಸಂತೋಷಿ ರಾಜಕಾರಣಿಗಳಿಂದ ಕಾಣುತ್ತಿದ್ದೇವೆ. ಇದು ಕೊಲೆಯಷ್ಟೇ ಹೇಯ. ಜಾತಿ ಧರ್ಮಗಳನ್ನು ನೋಡದೆ ಹತ್ಯೆ ಮಾಡಿದ ಅಪರಾಧಿಗೆ ಶೀಘ್ರ ಶಿಕ್ಷೆಯಾಗುವುದೇ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮಾಡುತ್ತವೆ.

ನೇಹಾ ಹಿರೇಮಠ್ ಹತ್ಯೆಯನ್ನು ಖಂಡಿಸುತ್ತೇವೆ ಮಾತ್ರವಲ್ಲ, ಹತ್ಯೆಗೈದ ಆರೋಪಿಗೆ ತ್ವರಿತಗತೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶೀಘ್ರ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತೇವೆ ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ಅಧ್ಯಕ್ಷರಾದ ಅನೀಸ್ ಪಾಷಾ ಮತ್ತು ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here