ನೇಜಾರು ಕೊಲೆ ಪ್ರಕರಣ: ಮಹಜರಿನ ವೇಳೆ ಆಕ್ರೋಶಿತ ಜನರಿಂದ ಆರೋಪಿಯ ಮೇಲೆ ದಾಳಿಗೆ ಯತ್ನ; ಪೊಲೀಸರಿಂದ ಲಘು ಲಾಠಿ ಚಾರ್ಜ್

0
494

ಸನ್ಮಾರ್ಗ ವಾರ್ತೆ

ಉಡುಪಿಯ ನೇಜಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಪ್ರವೀಣ್ ಅರುಣ್ ಚೌಗಲೆ(39)ಯನ್ನು ನ್ಯಾಯಾಲಯವು ನಿನ್ನೆ ನ.28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಉಡುಪಿ ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಇಂದು( ಗುರುವಾರ) ಮಹಜರಿಗೆ ಕರೆತರಲಾಗಿತ್ತು. ಈ ಮಾಹಿತಿಯನ್ನರಿತ ಸ್ಥಳೀಯರು ಗುಂಪು ಸೇರಿದ್ದರು. ಅಲ್ಲದೇ, ಕೆಲವರು ಆಕ್ರೋಶಿತಗೊಂಡು ಪ್ರತಿಭಟನೆ ಕೂಡ ನಡೆಸಿದರು.

ಪರಿಸ್ಥಿತಿ ಕೈ ಮೀರುವುದನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು, ಲಘು ಲಾಠಿ ಚಾರ್ಜ್ ನಡೆಸಿ ಆಕ್ರೋಶಿತ ಗುಂಪನ್ನು ಚದುರಿಸಿದರು. ಇದರಿಂದ ಮತ್ತೆ ಆಕ್ರೋಶಿತರಾದ ಜನರು ಆರೋಪಿಯನ್ನು ಗಲ್ಲಿಗೇರಿಸಿ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಉಡುಪಿ ಡಿವೈಎಸ್ಪಿ ದಿನಕರ ನೇತೃತ್ವದ ಪೊಲೀಸರ ತಂಡ ಸ್ಥಳ ಮಹಜರಿಗೆ ಆರೋಪಿಯನ್ನು ಕರೆದುಕೊಂಡು ಬಂದಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.

ಬೆಳಗಿನಿಂದ ಕಾಯುತ್ತಿದ್ದ ಆಕ್ರೋಶಿತ ಗುಂಪು ಆರೋಪಿಯ ಮೇಲೆ ದಾಳಿಗೆ ಯತ್ನ ನಡೆಸಿದಾಗ ಲಘು ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿರುವುದಾಗಿ ವರದಿಯಾಗಿದೆ.

ಲಾಠಿ ಚಾರ್ಜ್‌ನಿಂದ ಆಕ್ರೋಶಿತರಾಗಿರುವ ಜನ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವಂತೆ ಒತ್ತಾಯಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬೆರಳೆಣಿಕೆಯ ಪೊಲೀಸ್ ಸಿಬ್ಬಂದಿ ಮಾತ್ರ ಇರುವುದಾಗಿ ವರದಿಯಾಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.