ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್: ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಅಧಿವೇಶನಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನ್ಯೂಯಾರ್ಕ್ಗೆ ಭೇಟಿ ನೀಡಿದರೆ ಅವರನ್ನು ಬಂಧಿಸುವ ಸಾಧ್ಯತೆಯ ಕುರಿತು ನಗರದ ಕಾನೂನು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವುದಾಗಿ ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ತಿಳಿಸಿದ್ದಾರೆ.
‘ದಿ ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ, ನೆತನ್ಯಾಹು ನ್ಯಾಯದ ಕಟಕಟೆಯನ್ನು ಎದುರಿಸಬೇಕು ಎಂಬ ತಮ್ಮ ನಿಲುವನ್ನು ಮಮ್ದಾನಿ ಪುನರುಚ್ಚರಿಸಿದ್ದಾರೆ. ಗಾಝಾದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಇಸ್ರೇಲ್ ನಾಯಕನ ವಿರುದ್ಧ ಜಾರಿಗೊಳಿಸಲಾದ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಬಂಧನ ವಾರೆಂಟ್ ಅನ್ನು ಅವರು ಉಲ್ಲೇಖಿಸಿದ್ದಾರೆ. ಪ್ರಧಾನಿ ನೆತನ್ಯಾಹು ಹೇಗ್ನಲ್ಲಿ(ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಮತ್ತು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ICC) ನೆದರ್ಲ್ಯಾಂಡ್ನ ಹೇಗ್ನಲ್ಲಿದೆ) ಇರಬೇಕು ಎಂದು ನಾನು ನಂಬುತ್ತೇನೆ ಎಂದು ಮಮ್ದಾನಿ ಹೇಳಿದ್ದು, ಗಾಝಾದಲ್ಲಿ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗಳ ಪರಿಣಾಮದಿಂದಾಗಿ ಅನೇಕ ಜನರು ತನ್ನ ಅಭಿಪ್ರಾಯವನ್ನೇ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಮೇಯರ್ ಚುನಾವಣಾ ಪ್ರಚಾರದ ಸಮಯದಲ್ಲಿ, ನೆತನ್ಯಾಹು ನ್ಯೂಯಾರ್ಕ್ ನಗರಕ್ಕೆ ಪ್ರವೇಶಿಸಿದರೆ ಅವರನ್ನು ಬಂಧಿಸುವುದಾಗಿ ಮಮ್ದಾನಿ ಭರವಸೆ ನೀಡಿದ್ದರು. ಈ ಭರವಸೆಯು ನಗರದ ಮೇಯರ್ಗೆ ಅಂತಹ ಅಧಿಕಾರವಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಲಭ್ಯವಿರುವ ಕಾನೂನು ಅಧಿಕಾರಗಳನ್ನು ನಿರ್ಧರಿಸಲು ನಗರದ ಕಾನೂನು ಇಲಾಖೆಯೊಂದಿಗೆ ತಾವು ಸಕ್ರಿಯ ಚರ್ಚೆಯಲ್ಲಿ ಮುಂದುವರಿದಿರುವುದಾಗಿ ಮಮ್ದಾನಿ ಹೇಳಿದ್ದು, ತಮ್ಮ ಆಡಳಿತವು ಕಾನೂನಿನ ಮಿತಿಯೊಳಗೆ ಕಾರ್ಯನಿರ್ವಹಿಸುತ್ತದೆಯೇ ಹೊರತು ಹೊಸ ಕಾನೂನು ಅಧಿಕಾರಗಳನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿದರು.
ರೇಡಿಯೋ ನಿರೂಪಕ ಸಿಡ್ ರೋಸೆನ್ಬರ್ಗ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ನೆತನ್ಯಾಹು ಅವರು ಮಮ್ದಾನಿ ಅವರ ಹೇಳಿಕೆಗಳನ್ನು ತಳ್ಳಿಹಾಕಿದ್ದು, ನ್ಯೂಯಾರ್ಕ್ ಮೇಯರ್ ರಹಸ್ಯವಾಗಿ ಅಮೆರಿಕವನ್ನು ದ್ವೇಷಿಸುತ್ತಾರೆ ಎಂದು ನಂಬುವುದಾಗಿ ತಿಳಿಸಿದ್ದಾರೆ. ಇಸ್ರೇಲ್ನ ವಿಶ್ವಸಂಸ್ಥೆಯ ರಾಯಭಾರಿ ಡ್ಯಾನಿ ಡ್ಯಾನನ್, ಬಂಧನದ ಕರೆಗಳ ನಡುವೆಯೂ ನೆತನ್ಯಾಹು ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಅಧಿವೇಶನಕ್ಕೆ ಹಾಜರಾಗಲು ಯೋಜಿಸಿದ್ದಾರೆ ಎಂದು ಹೇಳಿದ್ದಾರೆ.
ಫೆಲೆಸ್ತೀನ್ ಪರ ಹೋರಾಟದ ಬಹಿರಂಗ ಬೆಂಬಲಿಗರಾಗಿರುವ ಮಮ್ದಾನಿ, ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಪುನರಾವರ್ತಿತ ಇಸ್ಲಾಮೋಫೋಬಿಕ್ ದಾಳಿಗಳನ್ನು ಎದುರಿಸಬೇಕಾಯಿತು. ರೋಸೆನ್ಬರ್ಗ್ ಈ ಹಿಂದೆ ಅವರನ್ನು ಜಿರಳೆ ಎಂದು ಕರೆದ ನಂತರ ಕ್ಷಮೆ ಯಾಚಿಸಿದ್ದರು.
ಇದಲ್ಲದೆ ಡೆಮಾಕ್ರಟಿಕ್ ಮತದಾರರ ನಡುವಿನ ಬದಲಾಗುತ್ತಿರುವ ರಾಜಕೀಯ ಮನೋಭಾವವನ್ನು ವರದಿಯು ಎತ್ತಿ ತೋರಿಸಿದೆ. ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ, ಮೂರು ವರ್ಷಗಳ ಹಿಂದೆ ಶೇಕಡಾ 45 ರಷ್ಟಿದ್ದವರು ಅಮೆರಿಕದ ನೀತಿಯನ್ನು ವಿರೋಧಿಸಿದ್ದರೆ, ಪ್ರಸ್ತುತ ಸುಮಾರು ಮೂರನೇ ಎರಡರಷ್ಟು ಮಂದಿ ಇಸ್ರೇಲ್ಗೆ ಅಮೆರಿಕದ ನೆರವನ್ನು ವಿರೋಧಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಸುಮಾರು ಅರ್ಧಾಂಶದಷ್ಟು ಜನರು ತಮ್ಮ ಪಕ್ಷವು ಇಸ್ರೇಲ್ಗೆ ಅತಿಯಾದ ಬೆಂಬಲವನ್ನು ತೋರಿಸಿದೆ ಎಂದು ತಿಳಿಸಿದ್ದಾರೆ. ಡೆಮಾಕ್ರಟಿಕ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸುಮಾರು ಅರ್ಧಾಂಶದಷ್ಟು ಸದಸ್ಯರು ಈ ವಾರದ ಆರಂಭದಲ್ಲಿ ಇಸ್ರೇಲ್ಗೆ ಅಮೆರಿಕದ ನೆರವನ್ನು ಕೊನೆಗೊಳಿಸಲು ಮತ ಹಾಕಿದ್ದಾರೆ ಮತ್ತು ಇದು ಪಕ್ಷದೊಳಗಿನ ಬೆಳೆಯುತ್ತಿರುವ ಚರ್ಚೆಯನ್ನು ಪ್ರತಿಬಿಂಬಿಸುತ್ತದೆ ಎಂದು ವರದಿಯು ಗಮನಿಸಿದೆ.












