ಬಿಹಾರ| ರಾಜ್ಯಪಾಲರನ್ನು ಭೇಟಿಯಾದ ನಿತೀಶ್, ತೇಜಸ್ವಿ: ನಾಳೆ ನೂತನ ಸರಕಾರದಿಂದ ಪ್ರಮಾಣ ವಚನ ಸಾಧ್ಯತೆ

0
296

ಸನ್ಮಾರ್ಗ ವಾರ್ತೆ

ಪಾಟ್ನ: ಬಿಹಾರದಲ್ಲಿ ಎನ್‍ಡಿಎ ಸಖ್ಯ ತೊರೆದು ರಾಜೀನಾಮೆ ನೀಡಿದ ಬೆನ್ನಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ರಾಜಪಾಲರನ್ನು ಭೇಟಿಯಾಗಿ ಹೊಸ ಸರಕಾರ ರಚಿಸುವ ಹಕ್ಕು ಮಂಡಿಸಿದರು. ಆರ್‌ಜೆಡಿ ನಾಯಕ ತೇಜಸ್ವಿಯವರೊಂದಿಗೆ ನಿತೀಶ್ ಕುಮಾರ್ ಮಂಗಳವಾರ ಸಂಜೆ ರಾಜ್ಯಪಾಲ ಫಾಗು ಚೌಹಾಣ್‌ರನ್ನು ಭೇಟಿಯಾಗಿದ್ದಾರೆ.

ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಜೆಡಿಯು-ಆರ್‍ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟ್‍ಬಂಧನ್ ಸರಕಾರ ಪ್ರಮಾಣ ವಚನ ಮಾಡಿ ಅಧಿಕಾರಕ್ಕೆ ಬರಲಿದೆ ಎಂದು ಸೂಚನೆ ಲಭಿಸಿದೆ. ನಿತೀಶ್ ಕುಮಾರ್‌ರವರೇ ಹೊಸ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. 160 ಶಾಸಕರ ಬೆಂಬಲ ಹೊಸ ಸರಕಾರಕ್ಕಿದೆ ಎಂಬುದಾಗಿ ವರದಿಯಾಗಿದೆ.

ಏಳು ಪಾರ್ಟಿಗಳು ಒಬ್ಬರು ಪಕ್ಷೇತರ ಶಾಸಕರ ಬೆಂಬಲ ತನಗಿದೆ ಎಂದು ನಿತೀಶ್ ಕುಮಾರ್ ಹೇಳಿದರು. ಬೆಂಬಲ ಪತ್ರದಲ್ಲಿ ಎಲ್ಲರೂ ಸಹಿಹಾಕಿರುವುದಾಗಿ ರಾಜ್ಯಪಾಲರನ್ನು ಭೇಟಿಯಾದ ನಂತರ ಮಾಧ್ಯಮಗಳಿಗೆ ನಿತೀಶ್ ಕುಮಾರ್ ಹೇಳಿದರು. ಹೊಸ ರಕಾರದಲ್ಲಿ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ ಆಗಲಿದ್ದಾರೆ. ಕಾಂಗ್ರೆಸ್‍ಗೆ ಸ್ಪೀಕರ್ ಸ್ಥಾನ ಸಿಗಲಿದೆ.

ಆರ್‌ಜೆಡಿ ಬೆಂಬಲ ಘೋಷಿಸಿದ ಪತ್ರವನ್ನು ತೇಜಸ್ವಿ ಮೊದಲೇ ನಿತೀಶ್ ಕುಮಾರ್‌ರಿಗೆ ನೀಡಿದ್ದರು. ಎರಡು ವರ್ಷದಿಂದ ಜೆಡಿಯು ಬಿಜೆಪಿ ಸರಕಾರವಿತ್ತು. ನಿತೀಶ್ ಕುಮಾರ್ ರಾಜೀನಾಮೆಯೊಂದಿಗೆ ಎನ್‍ಡಿಎ ನೇತೃತ್ವದ ಸರಕಾರ ಉರುಳಿ ಬಿದ್ದಿದೆ. ಈ ಪ್ರಕ್ರಿಯೆಯು ಬಿಹಾರದಲ್ಲಿ ಬಿಜೆಪಿಗೆ ದೊಡ್ಡ ತಿರುಗೇಟು ನೀಡಿದಂತಾಗಿದೆ.