ರಾಷ್ಟ್ರಪತಿ ಅಭ್ಯರ್ಥಿಯಾಗಲಾರೆ: ವದಂತಿಗಳಿಗೆ ತೆರೆ ಎಳೆದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್

0
492

ಸನ್ಮಾರ್ಗ ವಾರ್ತೆ

ಮುಂಬೈ: ಶರದ್ ಪವಾರ್ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣದಲ್ಲಿರುತ್ತಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ. 2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಡಿತ್ತು. ಎನ್‍ಸಿಪಿ ಮೂಲಗಳು ಈ ಸಾಧ್ಯತೆಯನ್ನು ನಿರಾಕರಿಸಿ ಪ್ರತಿಕ್ರಿಯಿಸಿದ್ದು ಪಾರ್ಲಿಮೆಂಟಿನಲ್ಲಿ ಬಿಜೆಪಿಗೆ 300ಕ್ಕಿಂತ ಹೆಚ್ಚು ಸದಸ್ಯರಿರುವಾಗ ಸ್ಪರ್ಧಿಸಿದರೆ ಆಗುವ ಪರಿಣಾಮ ಮೊದಲೇ ತಿಳಿದಿದೆ. ಹೀಗಿರುವಾಗ ಈ ಸಾಧ್ಯತೆಯಿಲ್ಲ ಎಂದು ನಿಕಟ ಮೂಲಗಳು ತಿಳಿಸಿವೆ.

ಕಳೆದ ದಿವಸ ಚುನಾವಣಾ ನೀತಿಜ್ಞ ಪ್ರಶಾಂತ್ ಕಿಶೋರ್ ರವರು ಶರದ್‍ ಪವಾರ್ ರವರನ್ನು ಎರಡು ಸಲ ಭೇಟಿಯಾಗಿದ್ದರು. ಅಲ್ಲದೆ ಕಿಶೋರ್ ಕಾಂಗ್ರೆಸ್ ನಾಯಕಿ ಸೋನಿಯ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿದ್ದರು. ಇದರೊಂದಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ರಾಷ್ಟ್ರಪತಿ ಅಭ್ಯರ್ಥಿಗಳಾಗಲಿದ್ದಾರೆ ಎಂಬ ಊಹಾಪೋಹ ಹರಡಿಕೊಂಡಿತ್ತು.

ಇದೊಂದು ಸುಳ್ಳು ಸುದ್ದಿ. ತಾನು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಪವಾರ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ರಾಷ್ಟ್ರಪತಿ ಚುನಾವಣೆ ಕುರಿತು ಮಾತನಾಡುತ್ತಿಲ್ಲ. 2024ರ ಪಾರ್ಲಿಮೆಂಟ್ ಚುನಾವಣೆಗೆ ಸಂಬಂಧಿಸಿ ಚರ್ಚೆ ನಡೆಸಿದರೆಂದು ಅವರು ತಿಳಿಸಿದ್ದರು.