ಸನ್ಮಾರ್ಗ ವಾರ್ತೆ
ಬೆಂಗಳೂರು: ಮುಂಬರುವ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುವುದು ಎಂಬ ಶಿಕ್ಷಣ ಸಚಿವರ ಹೇಳಿಕೆ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಕೊರೋನದಿಂದಾಗಿ ಈಗಾಗಲೇ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದು ಮತ್ತು ಅವರಲ್ಲಿ ಗ್ರಹಿಕೆಯ ಶಕ್ತಿ ಕಡಿಮೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಸ ಶಿಕ್ಷಣ ನೀತಿಯ ಅನ್ವಯ ಸಿದ್ಧ ಪಡಿಸಲಾಗುವ ಪಠ್ಯ ಕ್ರಮವನ್ನು ಮಕ್ಕಳಿಗೆ ಕಲಿಸುವುದು ಮತ್ತು ಅದರ ಪ್ರಕಾರ ವಿಧ್ಯಾರ್ಥಿಗಳು ತಮ್ಮನ್ನು ರೂಪಿಸಿಕೊಳ್ಳುವ ಸಂಗತಿ ಈಗಾಗಲೇ ಶಾಲೆಯಿಂದ ದೂರವಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಅಷ್ಟು ಸುಲಭದ ಕೆಲಸವಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಶಿಕ್ಷಣ ವಿಭಾಗದ ಮುಹಮ್ಮದ್ ಅಸ್ಲಮ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಈ ನೂತನ ಶಿಕ್ಷಣ ಕಾಯಿದೆಯಲ್ಲಿ ಸಾಕಷ್ಟು ಗೊಂದಲಗಳಿದ್ದು ಇದರ ನಿವಾರಣೆಗಾಗಿ ಈ “ಹೊಸ ಶಿಕ್ಷಣ ನೀತಿ 2020” ವಿಧಾನ ಸೌಧದ ಅಧಿವೇಶನದಲ್ಲಿ ಅಧಿಕೃತವಾಗಿ ಚರ್ಚೆಗೆ ತಂದು ಅದನ್ನು ಶಾಸಕಾಂಗದಿಂದ ಅನುಮೋದನೆ ಪಡೆದ ಬಳಿಕವಷ್ಟೇ ಜಾರಿಗೊಳಿಸಬೇಕು. ಇದಲ್ಲದೆ ಈ ಹೊಸ ಶಿಕ್ಷಣ ಕಾಯಿದೆಯು ವಿವಾದಾತ್ಮಕ ನೀತಿಯಾಗಿದ್ದು, ಇದಕ್ಕೆ ಹಲವು ಶಿಕ್ಷಣ ತಜ್ಞರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸರಕಾರ ಅದನ್ನು ಕಡೆಗಣಿಸಿ ಕೊರೊನ ಸಮಯದಲ್ಲಿ ಜಾರಿಗೊಳಿಸಲು ತಯಾರಿ ನಡೆಸಿರುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದ್ದಾರೆ.
ಎನ್.ಇ.ಪಿ ಕುರಿತು ಶಿಕ್ಷಣ ಹಕ್ಕುದಾರರಾದ ಪೋಷಕ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಎಸ್.ಡಿ.ಎಂ.ಸಿ, ಶಿಕ್ಷಣ ಸಂಘಟನೆ, ಸ್ಥಳೀಯ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಸರಕಾರ ಮುಂದಾಗಬೇಕು. ನಮ್ಮ ಸಂವಿಧಾನವು ಹೇಳಿರುವ ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಸತ್ತಾತ್ಮಕ ಜಾತ್ಯಾತೀತ, ಸಮಾಜವಾದಿ ಗಣತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಶಿಕ್ಷಣ ನಮಗೆ ಬೇಕಿದೆ. ಈ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರಬೇಕಾದರೆ ಅದಕ್ಕೆ ಸರಿಯಾದ ಪ್ರಾಯೋಗಿಕವಾಗಿ ವಾಸ್ತವಕ್ಕೆ ಪೂರಕವಾದ ಯೋಜನೆ ಸರಕಾರದ ಬಳಿ ಇರಬೇಕು.
ವಿಪರ್ಯಾಸವೆಂದರೆ ಶಿಕ್ಷಣ ಸಚಿವರ ಹೇಳಿಕೆಯ ಪ್ರಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಿಕ್ಕೆ ಬೇಕಾಗುವ ಹಣದ ವೆಚ್ಚಕ್ಕೆ ಮತ್ತೆ ಬಜೆಟ್ನಲ್ಲಿ ರಾಜ್ಯ ಸರಕಾರ ಶಿಕ್ಷಣ ಇಲಾಖೆಗೆ ಮೀಸಲಿಟ್ಟ ಹಣದ ನಡುವೆ ಅಜಗಜಾಂತರವಾದ ವ್ಯತ್ಯಾಸವಿದೆ. ಶಿಕ್ಷಣ ಕ್ಷೇತ್ರಕ್ಕೆ ಸರಿಯಾದ ಬಜೆಟ್ ಬಿಡುಗಡೆ ಮಾಡದೆ ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮುಂದಾಗಿರುವ ಸರಕಾರದ ನಡೆ ಅವೈಜ್ಞಾನಿಕವಾಗಿದೆ. ಆದುದರಿಂದ ಸರಕಾರದ ಈ ಆತುರಾತುರದ ನಿರ್ಧಾರದಿಂದಾಗಿ ಈಗಾಗಲೇ ಹದಗಟ್ಟಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳು ಬೀರಬಹುದು. ಆದ್ದರಿಂದ ಶಿಕ್ಷಣ ಸಚಿವರು ತಮ್ಮ ಈ ಹೇಳಿಕೆಯನ್ನು ಪುನರ್ ಪರಿಶಿಲಿಸಬೇಕಾಗಿ ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಶಿಕ್ಷಣ ವಿಭಾಗದ ಮುಹಮ್ಮದ್ ಅಸ್ಲಮ್ ಆಗ್ರಹಿಸಿದ್ದಾರೆ.












