IT ದಾಳಿಗಳಿಗೆ ಹೆದರುವುದಿಲ್ಲ; ಬಿಜೆಪಿಯದ್ದು ಬೆದರಿಕೆಯ ರಾಜಕೀಯ- ಕಮಲ್ ಹಾಸನ್

0
1098

ಸನ್ಮಾರ್ಗ ವಾರ್ತೆ

ಚೆನ್ನೈ: ಆದಾಯ ತೆರಿಗೆ ಇಲಾಖೆಯ ದಾಳಿಗಳ ಮೂಲಕ ಬಿಜೆಪಿ ಬೆದರಿಸುವ ರಾಜಕೀಯ ಆಡುತ್ತಿದ್ದು ಇದಕ್ಕೆ ನಾನು ಹೆದರುವುದಿಲ್ಲ ಎಂದು ನಟ, ಮಕ್ಕಳ್ ನೀದಿಮಯ್ಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ.

ನನ್ನ ಮನೆಗೆ ದಾಳಿ ಮಾಡಿದರೆ ಅವರಿಗೆ ಏನೂ ಸಿಗುವುದಿಲ್ಲ. ಜನರ ಧ್ವನಿಯಾಗಲು ಮಕ್ಕಳ್ ನೀದಿಮಯ್ಯಂ ಶ್ರಮಿಸುತ್ತಿದೆ. ಕೇಂದ್ರ ಸರಕಾರದ ಬೆದರಿಕೆಯ ಕುರಿತು ಕೇರಳದ ಜನರಿಗೆ ಹೇಳಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಆಹಾರ ಸಹಿತ ವಿಷಯಗಳಲ್ಲಿ ತಮಿಳ್ನಾಡು ಸರಕಾರ ಜನರಿಗಾಗಿ ಏನೂ ಮಾಡಿಲ್ಲ. ಎಲ್ಲದ್ದಕ್ಕೂ ಕಮಿಶನ್ ತೆಗೆದುಕೊಳ್ಳುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಬೇರೆ ಕ್ಷೇತ್ರಕ್ಕೆ ಹಾಕುತ್ತಿದ್ದಾರೆ. ಜನರಿಗಾಗಿ ಸರಕಾರ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗ್ತಾ ಇದೆ. ಉತ್ಕೃಷ್ಟ ಗೆಲುವು ತಮ್ಮದಾಗಲಿದೆ ಎಂದು ಕಮಲ್ ಹಾಸನ್ ಹೇಳಿದರು.

ತಾನು ಅರ್ಧ ಕೇರಳೀಯ ಎನ್ನುವುದು ಸತ್ಯ. ಆ ರೀತಿಯಲ್ಲಿ ನಂಬುವ ಧಾರಾಳ ಮಲೆಯಾಳಿಗರು ಕೇರಳದಲ್ಲಿದ್ದಾರೆ ಎಂದು ಮೀಡಿಯಾ ಒನ್‍ಗೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್ ಹೇಳಿದರು. ತಮಿಳ್ನಾಡಿನಲ್ಲಿ ಚುನಾವಣಾ ಪ್ರಚಾರ ಕಾವೇರುತ್ತಿದ್ದು ಇದೇ ವೇಳೆ ಬುಧವಾರ ಮಕ್ಕಳ್ ನೀದಿ ಮಯ್ಯಂ ಸಹಿತ ಪ್ರತಿಪಕ್ಷ ರಾಜಕೀಯ ಪಾರ್ಟಿಗಳ ನಾಯಕರ ಮನೆಗೆ ಆದಾಯ ತೆರಿಗೆ ದಾಳಿ ಮಾಡಿತ್ತು. ಮಕ್ಕಳ್ ನೀದಿ ಮಯ್ಯಂ ಖಚಾಂಚಿ ಅನಿತಾ ಶೇಖರ್‌ರ ತಿರುಪ್ಪೂರ್ ಲಕ್ಷ್ಮಿನಗರ್, ಬ್ರಿಡಜ್ ವೇ ಕಾಲನಿಗಳ ಅನಿತಾ ಟೆಕ್ಸ್‌ಕೋಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮತ್ತು ಮನೆಗಳಲ್ಲಿ ಹಾಗೂ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು.

ಇದೇ ವೇಳೆ ಧಾರಾಪುರದಲ್ಲಿ ಎಂಡಿಎಂಕೆ ತಿರುಪ್ಪೂರ್ ಜಿಲ್ಲಾ ಜಂಟಿ ಕಾರ್ಯದರ್ಶಿ ಕವಿನ್ ನಾಗರಾಜ್, ಡಿಎಂಕೆ ನಗರ ಕಾರ್ಯದರ್ಶಿ ಧನ ಶೇಖರ್‌ರ ಮನೆಗಳಿಗೂ ಐಟಿ ದಾಳಿ ನಡೆದಿತ್ತು. ಹಲವು ದಾಖಲೆಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರ ದೊರಕಿದೆ.