ಕಲಬುರ್ಗಿ ರೈಲ್ವೆ ವಲಯ ರದ್ದು: ಕೇಂದ್ರ ಸರಕಾರದ ವಿರುದ್ಧ ವೆಲ್ಫೇರ್ ಪಾರ್ಟಿ ಆಕ್ರೋಶ

0
654

ಸನ್ಮಾರ್ಗ ವಾರ್ತೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ ರೈಲ್ವೆ ವಲಯವನ್ನು ರದ್ದು ಮಾಡಿರುವ ಕೇಂದ್ರ ಸರಕಾರದ ರೈಲ್ವೆ ಇಲಾಖೆಯ ಮೋಸದ ನೀತಿಯನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಮುಜಾಹಿದ್ ಪಾಷಾ ಕುರೇಶಿ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಸರಿನ್ ಕಮೀಟಿ ವರದಿ ಅನ್ವಯ 2014ರಲ್ಲಿಯೇ ಕಲಬುರಗಿಯಲ್ಲಿ ಸ್ಥಾಪಿಸಲಾಗಿದ್ದ ರೈಲ್ವೆ ವಲಯ ಕಚೇರಿಯನ್ನು ರದ್ದು ಮಾಡಿ ಕಲ್ಯಾಣ ಕರ್ನಾಟಕಕ್ಕೆ ಮೋಸ ಮಾಡಿರುವ ಕೇಂದ್ರ ರೈಲ್ವೆ ಇಲಾಖೆಯ ಮೋಸದ ನೀತಿ ಖಂಡನೀಯ.

ಸೊಲ್ಲಾಪೂರ ಮ್ತತು ಸಿಕಂದರಾಬಾದ್ ರೈಲ್ವೆ ವಲಯಗಳಲ್ಲಿ
ಹಂಚಿ ಹೋಗಿರುವ ಕಲಬುರಗಿ ವಿಭಾಗ ಈ ಎರಡೂ ವಲಯಗಳಿಗೆ ಹೆಚ್ಚು ಆದಾಯ ತಂದುಕೊಡುವ ಕೇಂದ್ರ ಸ್ಥಾನವೂ ಆಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ನಗರಿಯಾದ ಕಲಬುರಗಿಗೆ ತನ್ನದೇ ಆದ ಇತಿಹಾಸವಿದೆ. ತೊಗರಿ ಖಣಜವಾಗಿರುವ ಈ ಪ್ರದೇಶ ಸಿಮೆಂಟ್ ಸೇರಿ ಪ್ರಮುಖ ವಾಣಿಜ್ಯ ವ್ಯಾಪಾರದ ಮಾರುಕಟ್ಟೆಯಾಗಿದೆ. 371 ಕಲಂ ಜಾರಿಯಾಗಿದ್ದರೂ
ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನದ ಹಂತದಲ್ಲಿಯೇ ಇದೆ.  ಹಿಂದುಳಿದ ಹಣೆಪಟ್ಟಿ ತೆಗೆದುಹಾಕುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿವೆ. ಕೂಡಲೇ ರದ್ದಾಗಿರುವ ರೈಲ್ವೆ ವಲಯವನ್ನು ಮಂಜೂರು ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದರು.