ನಾನು ಭೇಟಿಯಾದದ್ದು ನಮ್ಮ ಪ್ರಧಾನಿಯನ್ನು, ಪಾಕ್ ನ ನವಾಝ್ ಶರೀಫ್‍ರನ್ನಲ್ಲ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

0
671

ಸನ್ಮಾರ್ಗ ವಾರ್ತೆ

ನವದೆಹಲಿ: ನಾನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದೇನೆಯೇ ಹೊರತು ನವಾಝ್ ಶರೀಫ್ ರನ್ನಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊರೊನಾ ಸಂಕಷ್ಟದ ನಡುವೆ ಇಂದು ಪ್ರಧಾನಿಗಳನ್ನು ಭೇಟಿಯಾದ ಬಳಿಕ ದಿಢೀರ್ ಭೇಟಿಗೆ ಕಾರಣ ಏನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರ ನೀಡಿದ್ದಾರೆ.

ಪ್ರಧಾನಿ ಮೋದಿಯವರನ್ನು ಇಂದು ಭೇಟಿ ಮಾಡಿದ ಬಳಿಕ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಾಧ್ಯಮದವರ ಜೊತೆಗೆ ಮಾತನಾಡಲು ಬಂದಾಗ ನಿಮ್ಮ ಈ ದಿಢೀರ್ ಭೇಟಿಗೆ ಕಾರಣ ಏನು ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಠಾಕ್ರೆ, ನಾನು ನಮ್ಮ ಪ್ರಧಾನಿಗಳನ್ನ ಭೇಟಿಯಾಗಿದ್ದೇನೆಯೇ ಹೊರತು ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಝ್ಶರೀಫ್ ಅವರನ್ನಲ್ಲ ಎಂದು ಉತ್ತರಿಸಿದರು.

ರಾಜಕೀಯ ಭಿನ್ನ್ನಾಭಿಪ್ರಾಯಗಳ ಹೊರತಾಗಿಯೂ ಪ್ರಧಾನಿಗಳ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ನಾನು ಖಾಸಗಿಯಾಗಿ ಪ್ರಧಾನಿಗಳನ್ನ ಭೇಟಿಯಾದ್ರೆ ಏನು ತಪ್ಪು. ರಾಜ್ಯದ ಎಲ್ಲ ಜನತೆಗೆ ಲಸಿಕೆ ನೀಡುವ ಅಭಿಯಾನಕ್ಕೆ ವೇಗ ನೀಡಬೇಕಿದೆ. ಕೇಂದ್ರವೇ ಉಚಿತ ಲಸಿಕೆ ನೀಡಲು ಮುಂದಾಗಿರೋದನ್ನ ಸ್ವಾಗತಿಸುತ್ತೇವೆ. ಈ ಮೊದಲು ರಾಜ್ಯಗಳಿಗೆ ಈ ಜವಾಬ್ದಾರಿ ನೀಡಿದ್ದಾಗ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಹಾರಾಷ್ಟ್ರದಲ್ಲಿ 18 ರಿಂದ 44 ವರ್ಷದೊಳಗಿರುವ ಜನರ ಸಂಖ್ಯೆ 6 ಕೋಟಿಗೂ ಹೆಚ್ಚಿದೆ. ನಮಗೆ ಸದ್ಯ 12 ಕೋಟಿ ಡೋಸ್ ಬೇಕಿದ್ದು, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯ ಬೆಂಬಲದೊಂದಿಗೆ ಶಿವಸೇನೆ ಸರಕಾರ ರಚನೆ ಮಾಡಿದಾಗ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ವಾಕ್ಸಮರ ಉಂಟಾಗಿತ್ತು. ಕೇಂದ್ರದ ಹಲವಾರು ನಿರ್ಧಾರಗಳನ್ನು ಪ್ರಶ್ನಿಸಿ ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ ದಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿ, ಟೀಕಿಸಿತ್ತು.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭೇಟಿಯಾದ ಫೋಟೋವನ್ನು PMOIndia ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವರ್, ಕ್ಯಾಬಿನೆಟ್ ಸಚಿವ ಅಶೋಕ್ ಚವಾಣ್ ಉಪಸ್ಥಿತರಿದ್ದರು.