ಸನ್ಮಾರ್ಗ ವಾರ್ತೆ
ನವದೆಹಲಿ ಏಪ್ರಿಲ್ 27- ಅಝಾನ್ ಕರೆಗೆ ನಿರ್ಬಂಧ ವಿಧಿಸಲಾಗಿಲ್ಲ ಎಂದು ಉತ್ತರಪ್ರದೇಶ ಮತ್ತು ದೆಹಲಿ ಸರಕಾರಗಳು ಸ್ಪಷ್ಟೀಕರಣ ನೀಡಿದ ಬಳಿಕವೂ ಹರಿಯಾಣದಿಂದ ಅಝಾನ್ ಕರೆಯನ್ನು ನಿರ್ಬಂಧಿಸಿದ ಆರೋಪ ಕೇಳಿಬಂದಿದೆ.
ಹರಿಯಾಣದ ಫರೀದಾಬಾದ್ ಜಿಲ್ಲೆಯ ಸೂರಜ್ ಕುಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪೌಂಡಿ ಗ್ರಾಮದ ಮಲಿಕ್ ಎಂಬವರು ಈ ಕುರಿತಂತೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪೊಲೀಸರು ಗ್ರಾಮಕ್ಕೆ ಬಂದು ಆಝಾನ್ ಕೊಡದಂತೆ ನಿರ್ಬಂಧಿಸಿದ್ದಾರೆ ಮತ್ತು ಒಂದು ವೇಳೆ ಉಲ್ಲಂಘಿಸಿದರೆ ಮಸೀದಿಯ ಆಡಳಿತ ಸಮಿತಿಯ ಮೇಲೆ ಕ್ರಮಗಳನ್ನು ಜರುಗಿಸುವುದಾಗಿ ಬೆದರಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿರುವುದು ದಾಖಲಾಗಿದೆ.
ಈ ಮಾಹಿತಿಯನ್ನು http://www.indiatomorrow.net/ ವರದಿ ಮಾಡಿದೆ.
ಈ ಕುರಿತಂತೆ ಬರಹದ ಮೂಲಕ ಆದೇಶದವನ್ನು ನೀಡಿ ಎಂದು ತಾನು ಹೇಳಿದರೂ ಪೊಲೀಸರು ನೀಡಲು ನಿರಾಕರಿಸಿದರು. ಬಳಿಕ ತಾನು ಸೂರಜ್ ಕುಂಡ್ ಠಾಣೆಗೆ ಭೇಟಿಕೊಟ್ಟು ಬರಹದ ಮೂಲಕ ಆದೇಶವನ್ನು ಕೊಡುವಂತೆ ವಿನಂತಿಸಿದೆ. ಆದರೆ, ಅವರೂ ಅದಕ್ಕೆ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಇಂಡಿಯಾ ಟುಮಾರೋ ಈ ಕುರಿತಾದ ವಿಡಿಯೋವನ್ನು ಕೂಡ ಹಂಚಿಕೊಂಡಿದೆ.
ಮಲಿಕ್ ಅವರು ಡೆಪ್ಯೂಟಿ ಕಮಿಷನರ್ ಅವರನ್ನು ಕೂಡ ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದು ಅವರು ಕೂಡ ಬರಹದ ಮೂಲಕ ಆದೇಶವನ್ನು ಕೊಡಲು ನಿರಾಕರಿಸಿದರು ಎಂದು ಹೇಳಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ಪೊಲೀಸರು ಇದೇ ರೀತಿ ನಡೆದುಕೊಂಡಿದ್ದು, ನಾಗರಿಕರು ಪ್ರತಿಭಟಿಸಿದ ಬಳಿಕ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.











