‘ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಗೆ ಅನಿವಾಸಿ ಭಾರತೀಯ ಅಬ್ದುಲ್ಲಾ ಮದುಮೂಲೆ ಆಯ್ಕೆ

0
344

ಸನ್ಮಾರ್ಗ ವಾರ್ತೆ

ಕಾಸರಗೋಡು: ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯುಎಇಯಲ್ಲಿರುವ ಹಿರಿಯ ಅರ್ಥಿಕ ತಜ್ಞ, ಅನಿವಾಸಿ ಭಾರತೀಯ ಅಬ್ದುಲ್ಲಾ ಮದುಮೂಲೆಯವರನ್ನು ಆಯ್ಕೆ ಮಾಡಲಾಗಿದೆ. ಕೇರಳದ ಕನ್ನಡಪರ ಸಂಘಟನೆಗಳ ಒಕ್ಕೂಟವಾದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಈ ಪ್ರಶಸ್ತಿ ನೀಡುತ್ತಿದೆ.

ಕನ್ನಡ ಭಾಷೆ ಸಂಸ್ಕೃತಿ, ಕಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಇಂತಹದ್ದೇ ಸೇವೆಯಲ್ಲಿ ಇರುವ ಗಡಿನಾಡ ಕನ್ನಡಿಗರನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ. ಈ ಬಾರಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯುಎಇಯಲ್ಲಿ ಇರುವ ಹಿರಿಯ ಅರ್ಥಿಕ ತಜ್ಞ ಅಬ್ದುಲ್ಲಾ ಮದುಮೂಲೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 5ರಂದು 11 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿ ಇರುವ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಕೇರಳ ಮತ್ತು ಕನಾಟಕದ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಗಡಿ ಪ್ರದೇಶದ ಕಾಸರಗೋಡು ಜಿಲ್ಲೆಯ ಮದುಮೂಲೆಯವರಾದ ಹಿರಿಯ ಅರ್ಥಿಕ ತಜ್ಞ ಅಬ್ದುಲ್ಲಾ ಮಾದುಮೂಲೆ, ಕಳೆದ ಹಲವಾರು ವರ್ಷಗಳಿಂದ ಯುಎಇಯಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಲಾಕ್‌ಡೌನ್ ಸಮಯದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡಿದ್ದ ಇವರು, ಬಡವರು, ವಿದ್ಯಾರ್ಥಿಗಳು ಮತ್ತು ನಿರ್ಗತಿಕರಿಗೆ ನಿರಂತರ ಸಹಾಯ ಮಾಡುತ್ತಾ ಬಂದಿದ್ದಾರೆ. ಕನ್ನಡ ಭಾಷೆ ಸಂಸ್ಕೃತಿ, ಕಲೆಯ ಕಾರ್ಯಕ್ರಮ ಸಂಘಟನೆಗೆ ಸಹಾಯವನ್ನೂ ಮಾಡುತ್ತಿರುತ್ತಾರೆ. ಇವರ ಈ ಸೇವೆಯನ್ನು ಗುರುತಿಸಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.