ಸಿಜೆಪಿ ಮೇಲಿನ ನಿಗ್ರಹದ ಹಿಂದೆ ಅಕ್ಟೋಬರ್ 4 ರ ಸಭೆ: ನೋಟೀಸ್ ನೀಡಿ, ವಶಕ್ಕೆ ಪಡೆಯಿರಿ, ಧನಸಹಾಯ ತನಿಖೆ ನಡೆಸಿ ಎಂದು ರಾಜ್ಯಗಳಿಗೆ ಸೂಚನೆ

0
209

ಸನ್ಮಾರ್ಗ ವಾರ್ತೆ

ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ನಡೆಸುವುದಕ್ಕೆ ಆರು ದಿನಗಳ ಮುನ್ನ, ಕೇಂದ್ರ ಗೃಹ ಕಾರ್ಯದರ್ಶಿಯವರು ಹಲವಾರು ರಾಜ್ಯಗಳ ಡಿಜಿಪಿಗಳು ಮತ್ತು ಆಯ್ದ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ಈ ಹಿಂದೆ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸಿದವರು ದೆಹಲಿಗೆ ತೆರಳಲು ತಮ್ಮ ತವರೂರನ್ನು ತೊರೆಯದಂತೆ ನೋಡಿಕೊಳ್ಳಲು ಸೂಚಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಅಕ್ಟೋಬರ್ 4 ರ ಸಭೆಯಲ್ಲಿ ನೋಟೀಸ್ ನೀಡಲು, ಅಗತ್ಯವಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲು ಮತ್ತು ಪ್ರತಿಭಟನಾಕಾರರ “ಧನಸಹಾಯದ ಮೂಲಗಳನ್ನು” ಪತ್ತೆಹಚ್ಚಲು ನಿರ್ದೇಶನಗಳನ್ನು ನೀಡಲಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ. ಸಿದ್ಧತೆಯನ್ನು ಪರಿಶೀಲಿಸಲು ಅಕ್ಟೋಬರ್ 8 ರಂದು ಕೇಂದ್ರ ಗೃಹ ಸಚಿವಾಲಯವು ಎರಡನೇ ಸಭೆಯನ್ನು ನಡೆಸಿತ್ತು.

ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರ ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ, ಈ ಸಭೆಯ ನಂತರ ಅದೇ ದಿನ ಡಿಜಿಪಿ ಕಚೇರಿಯಿಂದ ರಾಜ್ಯಾದ್ಯಂತ ಪೊಲೀಸ್ ಯುನಿಟ್‌ಗಳಿಗೆ “ಗೌಪ್ಯ ಪತ್ರ” ರವಾನೆಯಾಗಿತ್ತು. ಅಂದಿನಿಂದ ಪ್ರತಿಭಟನೆಯಲ್ಲಿ ಭಾಗವಹಿಸಲು ಬಯಸುವವರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಶುಕ್ರವಾರ ಮುಂಬೈ ಪೊಲೀಸರು 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ 4 ರ ಸಭೆಯ ನಿರ್ದೇಶನಗಳು ಕೆಲವು ಸಂಘಟನೆಗಳಿಗೆ ಸೇರಿದವರನ್ನು ಸಹ ಒಳಗೊಂಡಿದ್ದವು, ಹಿಂದಿನ ಪ್ರತಿಭಟನಾಕಾರರ ಜೊತೆಗೆ ಅವರನ್ನು ದೆಹಲಿಗೆ ಪ್ರಯಾಣಿಸದಂತೆ ತಡೆಯಬೇಕಾಗಿತ್ತು. ಅದೇ ದಿನ, ಮಹಾರಾಷ್ಟ್ರ ಡಿಜಿಪಿ ಕಚೇರಿಯಿಂದ ಹಲವಾರು ಪೊಲೀಸ್ ಕಮಿಷನರೇಟ್‌ಗಳು ಮತ್ತು ಜಿಲ್ಲೆಗಳಿಗೆ ಇದೇ ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಗೌಪ್ಯ ಪತ್ರವೊಂದು ರವಾನೆಯಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಿದೆ.

ಮಹಾರಾಷ್ಟ್ರ ಪೊಲೀಸರು ನೋಟೀಸ್ ಜಾರಿ ಮಾಡಿದರೆ, ಮುಂಬೈ ಪೊಲೀಸರು ಮತ್ತಷ್ಟು ಮುಂದೆ ಹೋಗಿದ್ದಾರೆ. ಶನಿವಾರದ ಪ್ರತಿಭಟನೆಗೆ ದೆಹಲಿಗೆ ತೆರಳದಂತೆ ನಗರದ ವಿವಿಧ ಭಾಗಗಳಿಂದ ಶುಕ್ರವಾರ 200 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.