ತುಳು ಭಾಷೆಗೆ ಅಧಿಕೃತ ದ್ವಿತೀಯ ಭಾಷೆ ಸ್ಥಾನ: ತುಳುನಾಡಿಗೆ ಸೆ.18 ವಿಶೇಷ ದಿನ – ಪದ್ಮರಾಜ್

0
107

ಸನ್ಮಾರ್ಗ ವಾರ್ತೆ

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ದ್ವಿತೀಯ ಭಾಷೆಯಾಗಿ ಘೋಷಿಸಿರುವ ಸೆಪ್ಟೆಂಬರ್ 18 ತುಳುನಾಡಿಗೆ ವಿಶೇಷ ದಿನವಾಗಿದೆ. ತುಳು ಜನರ ಭಾವನೆಗಳಿಗೆ ರಾಜ್ಯ ಸರ್ಕಾರ ಗೌರವ ನೀಡಿರುವುದು ಸಂತಸದ ವಿಚಾರ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರಾವಳಿಯ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಲಾಗಿದೆ. ಜಿಲ್ಲೆಯ ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಯಾಮಾರಿಸುತ್ತಿದ್ದವರಿಗೆ ಕಾಂಗ್ರೆಸ್ ಸರ್ಕಾರ ನಿನ್ನೆಯ ಸಚಿವ ಸಂಪುಟದ ಮಹತ್ವದ ನಿರ್ಣಯಗಳ ಮೂಲಕ ಉತ್ತರ ನೀಡಿದೆ,” ಎಂದರು.

ತುಳು ಭಾಷೆ ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ನೆಲೆಸಿರುವ ತುಳುವರು ತಮ್ಮದೇ ಆದ ಕೊಡುಗೆಗಳ ಮೂಲಕ ತುಳು ಭಾಷೆಗೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ. ಇದೀಗ ತುಳುವರ ದಶಕಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಮನ್ನಣೆ ನೀಡಿದೆ ಎಂದು ಪದ್ಮರಾಜ್ ಹೇಳಿದರು.

ಸಚಿವ ಸಂಪುಟದ ಮಹತ್ವದ ನಿರ್ಣಯಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಂದು ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶ್ರಾಂತಿಯಿಲ್ಲದೆ ವಿವಿಧೆಡೆ ಸಂಚರಿಸಿ ಜನರ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.

“ಮುಖ್ಯಮಂತ್ರಿಯವರು ಇಂದು ಬೆಳಗ್ಗೆ ಮೀನುಗಾರಿಕಾ ಧಕ್ಕೆಗೆ ತೆರಳಿ ಸುಮಾರು ಎರಡು ಗಂಟೆಗಳ ಕಾಲ ಮೀನುಗಾರರೊಂದಿಗೆ ಇದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನೂ ನೀಡಿದ್ದಾರೆ,” ಎಂದರು.

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ವಿಚಾರದಲ್ಲಿಯೂ ಸಾರ್ವಜನಿಕ ಅಭಿಪ್ರಾಯ ಪಡೆಯಲು ಒತ್ತು ನೀಡಲಾಗಿದೆ. ಕರಾವಳಿಯ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಆಧಾರವಾಗಿಟ್ಟುಕೊಂಡು ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಪದ್ಮರಾಜ್ ಹೇಳಿದರು.

“ತುಳು ಭಾಷೆಗೆ ಸಿಕ್ಕಿರುವ ಮಾನ್ಯತೆ ತುಳುವರ ದಶಕಗಳ ಹೋರಾಟಕ್ಕೆ ದೊರೆತ ಗೌರವವಾಗಿದೆ. ಕರಾವಳಿಯ ಅಭಿವೃದ್ಧಿ, ತುಳು ಭಾಷೆ–ಸಂಸ್ಕೃತಿಯ ಸಂರಕ್ಷಣೆ ಹಾಗೂ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿಯೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದೆ,” ಎಂದು ಅವರು ಹೇಳಿದರು.