ಸನ್ಮಾರ್ಗ ವಾರ್ತೆ
ಹೈದರಾಬಾದ್: ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ ಸೈನ್ಯದ ಅತಿಕ್ರಮಣ ಮತ್ತು ಭಾರತೀಯ ಗಸ್ತು ತಿರುಗುವಿಕೆಯ ಮೇಲೆ ನಿರ್ಬಂಧಗಳಿರುವ ವರದಿಗಳ ಕುರಿತು ಕೇಂದ್ರ ಸರ್ಕಾರದಿಂದ ವಿವರಣೆಯನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಒತ್ತಾಯಿಸಿದ್ದಾರೆ. ಈ ವಿಷಯದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕರು ಇದನ್ನು ದೃಢಪಡಿಸಿದ್ದಾರೆ ಎಂಬ ವರದಿಗಳು ಗಂಭೀರವಾಗಿವೆ ಎಂದು ಒವೈಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಡಿಯಲ್ಲಿನ ಬೆಳವಣಿಗೆಗಳ ಬಗ್ಗೆ ಕೇಂದ್ರವು ದೇಶವನ್ನು ಕತ್ತಲಲ್ಲಿಡುತ್ತಿದೆ ಎಂದು ಅವರು ಆರೋಪಿಸಿದ್ದು, ತಾವು ಹಿಂದೆ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ ಎಂದಿದ್ದಾರೆ.
ಚೀನಾ ಸೈನ್ಯವು ಅರುಣಾಚಲ ಪ್ರದೇಶಕ್ಕೆ ಯಾವೆಲ್ಲಾ ಸ್ಥಳಗಳಲ್ಲಿ ಪ್ರವೇಶಿಸಿದೆ ಎಂದು ಒವೈಸಿ ಪ್ರಶ್ನಿಸಿದ್ದಾರೆ. ಭಾರತೀಯ ಸೈನಿಕರು ಗಸ್ತು ತಿರುಗುವುದಕ್ಕೆ ಮತ್ತು ನಾಗರಿಕರ ಚಲನವಲನಗಳಿಗೆ ಅಡ್ಡಿಪಡಿಸಿದ ಹಾಗೂ ಹಿಂದೆ ಸರಿಯಲು ನಿರಾಕರಿಸಿದ ಘಟನೆಗಳು ಎಲ್ಲಿ ನಡೆದಿವೆ ಮತ್ತು ಈ ಪರಿಸ್ಥಿತಿಯು ಎಷ್ಟು ಕಾಲದಿಂದ ಮುಂದುವರಿದಿದೆ ಎಂಬುದರ ಕುರಿತು ವಿವರಣೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಈ ಅವಧಿಯಲ್ಲಿ ಚೀನಾ ವಿಷಯದಲ್ಲಿ ಕೇಂದ್ರ ಸರ್ಕಾರವು ಅನುಸರಿಸಿದ ವಿಧಾನವನ್ನೂ ಒವೈಸಿ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯದಿರುವುದನ್ನು ಒವೈಸಿ ಟೀಕಿಸಿದ್ದಾರೆ. ಜೂನ್ 2020 ರಲ್ಲಿ ಭಾರತೀಯ ಭೂಪ್ರದೇಶದಲ್ಲಿ ಚೀನಾ ಸೈನ್ಯದ ಉಪಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯನ್ನು ಅವರು ಎತ್ತಿ ತೋರಿಸಿದ್ದಾರೆ. ನಂತರದ ಬೆಳವಣಿಗೆಗಳ ಬೆಳಕಿನಲ್ಲಿ ಆ ಹೇಳಿಕೆಯ ನಿಖರತೆಯನ್ನು ಒವೈಸಿ ಪ್ರಶ್ನಿಸಿದ್ದಾರೆ.
ಚೀನಾ ಗಡಿಯ ಪರಿಸ್ಥಿತಿಯ ಕುರಿತು ಸಮಗ್ರ ಮತ್ತು ಸ್ವತಂತ್ರ ವರದಿಯನ್ನೂ ಅವರು ಒತ್ತಾಯಿಸಿದ್ದಾರೆ. ದೇಶದ ಗಡಿಯ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ನೇರವಾಗಿ ಪರಿಣಾಮ ಬೀರುವ ವಿಷಯಗಳಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ರಾಜಕೀಯ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒವೈಸಿ ಹೇಳಿದ್ದಾರೆ.
ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೊಂದಿಗೆ ಘರ್ಷಣೆಗಳು ಮುಂದುವರಿದಿವೆ ಎಂದು ಐಟಿಬಿಪಿ ಮುಖ್ಯಸ್ಥ ಶತ್ರುಜೀತ್ ಕಪೂರ್ ಘೋಷಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಂತರ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸಿತು.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರರು ಮಾತನಾಡಿ, ಘಟನೆಗಳ ವಿವರಗಳಿಗಾಗಿ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಬೇಕು ಎಂದರು. ಚೀನಾ ಸೈನ್ಯವು ಸಾಮಾನ್ಯ ಗಸ್ತು ಮಾದರಿಗಳಿಂದ ವಿಚಲನಗೊಂಡಾಗ ಗಡಿ ಪ್ರದೇಶಗಳಲ್ಲಿ ಕೆಲವೊಮ್ಮೆ ಉದ್ವಿಗ್ನತೆ ಉಂಟಾಗುತ್ತದೆ ಎಂದು ಅವರು ಹೇಳಿದರು.
ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಇರುವ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತಪ್ಪು ತಿಳುವಳಿಕೆ ಹಾಗೂ ತಪ್ಪು ಲೆಕ್ಕಾಚಾರಗಳನ್ನು ತಪ್ಪಿಸಲು ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ವ್ಯವಸ್ಥೆಗಳ ಮೂಲಕ ಮಾತುಕತೆಯನ್ನು ಮುಂದುವರಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಗಡಿ ನಿಯಂತ್ರಣವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಎಲ್ಎಸಿ ಕುರಿತು ತಿಳುವಳಿಕೆಯನ್ನು ಸುಧಾರಿಸುವ ಮಾರ್ಗಗಳನ್ನು ಚರ್ಚಿಸಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ವಕ್ತಾರರು ಹೇಳಿದರು.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಪ್ರಗತಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ಅತ್ಯಶ್ಯಕ ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.












