ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.10: ಪಂಜಾಬಿನ ಫಿರೋಝ್ಪುರ ಜಿಲ್ಲೆಯಲ್ಲಿ ಪುನಃ ಪಾಕಿಸ್ತಾನದ ಡ್ರೋನ್ಗಳು ಕಂಡು ಬಂದಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಕಳೆದ ಹದಿಮೂರು ದಿವಸಗಳಲ್ಲಿ ಎರಡನೇ ಬಾರಿ ಪಂಜಾಬ್ ಗಡಿಯಲ್ಲಿ ಡ್ರೋನ್ ಕಂಡು ಬಂದಿದೆ. ಬೆಳಗ್ಗೆ 7.20ಕ್ಕೆ ಹಝಾರ್ ಸಿಂಗ್ ಗ್ರಾಮದಲ್ಲಿ 10.10ಕ್ಕೆ ತೆಂಡಿವಾಲ ಗ್ರಾಮದಲ್ಲಿ ಡ್ರೋನ್ ಕಂಡು ಬಂದಿದೆ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.
ಸೋಮವಾರ ರಾತ್ರೆ ಗಡಿಗೆ ಸೇರಿಕೊಂಡ ಪ್ರದೇಶದಲ್ಲಿ ಮೂರು ಬಾರಿ ಪಾಕಿಸ್ತಾನದ ಡ್ರೋನ್ ಹಾರಾಟ ನಡೆಸಿದೆ ಎಂದು ಬಿಎಸ್ಎಫ್ ವರದಿ ಮಾಡಿದೆ. ಪುನಃ ಇದೇ ದಿಕ್ಕಿನಲ್ಲಿ ಡ್ರೋನ್ ಕಂಡು ಬಂದಿದೆ. ಘಟನೆಯ ಕುರಿತು ತನಿಖೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ವಿವರ ತಿಳಿಯಲು ಬಿಎಸ್ಎಫ್ನೊಂದಿಗೆ ಸಂಪರ್ಕಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ಸುಪರಿಡೆಂಟ್ ಸುಖ್ವೀಂದರ್ ಸಿಂಗ್ ಹೇಳಿದರು.
ಕಳೆದ ತಿಂಗಳು ಪಂಜಾಬ್ ಗಡಿಯಲ್ಲಿ ಪಾಕ್ ಡ್ರೋನ್ ಕೆಳಮಟ್ಟದಲ್ಲಿ ಹಾರಾಟ ನಡೆಸಿತ್ತು. ಅದು ಎಕೆ 47, ಗ್ರೆನೆಡ್, ಸ್ಯಾಟಲೈಟ್ ಫೋನ್ ಕೆಳಗೆ ಹಾಕಲು ಶ್ರಮಿಸಿದೆ ಎಂದು ಪೊಲೀಸರು ಹೇಳಿದ್ದರು. ಡ್ರೋಣ್ಗಳು ಐದು ಕೆಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿವೆ.












