ಹದಿಹರೆಯದ ಮಕ್ಕಳ ಪಾಲನೆ

0
579

ಲೇಖಕಿ: ಖದೀಜ ನುಸ್ರತ್

ಆಧುನಿಕ ಕಾಲದಲ್ಲಿ ಹದಿಹರೆಯದ ಮಕ್ಕಳನ್ನು ಪ್ರೀತಿಯಿಂದ ಬೆಳೆಸುವುದು ಒಂದು ಅದ್ಭುತ ಕಲೆಯಾಗಿದೆ. ಅವರು ಓದುವಂತಹ ಪುಸ್ತಕಗಳು, ನೋಡುವಂತಹ ವೀಡಿಯೋಗಳು, ಕೇಳುವಂತಹ ವಾರ್ತೆಗಳು, ವಾಸಿಸುವಂತಹ ಪ್ರದೇಶದ ಸಂಸ್ಕೃತಿ, ಆಪ್ತ ಸ್ನೇಹಿತರ ಅಭಿರುಚಿಗಳು, ಕಲಿಯುವಂತಹ ಮೌಲ್ಯಾಧಾರಿತ ವಿದ್ಯಾಭ್ಯಾಸಗಳು, ಮನೆಯಲ್ಲಿರುವ ಧಾರ್ಮಿಕ ಆಚರಣೆಗಳು, ಅವರ ಮನಸ್ಸಿನಲ್ಲಿರುವ ಭವಿಷ್ಯದ ಬಗ್ಗೆಯಿರುವ ಕನಸುಗಳು, ಮನೆಯಲ್ಲಿ ಅನುಭವಿಸುವ ಸಮಸ್ಯೆಗಳು, ಶಿಕ್ಷಕರಿಂದ ಕಲಿಯುವ ಮಾನವೀಯ ಮೌಲ್ಯಗಳು ಮತ್ತು ಆಧುನಿಕ ಸಾಮಾಜಿಕ ಜಾಲತಾಣಗಳ ಬಳಕೆಯ ರೀತಿ ನೀತಿಗಳು ಜೀವನದಲ್ಲಿ ಭಾರೀ ಪರಿಣಾಮವನ್ನು ಬೀರುತ್ತದೆ. ಮಕ್ಕಳನ್ನು ಒಳ್ಳೆಯ ವ್ಯಕ್ತಿಯಾಗಿ ಅಥವಾ ಕೆಟ್ಟ ವ್ಯಕ್ತಿಯಾಗಿ ಮಾರ್ಪಡಿಸುವುದರಲ್ಲಿ ಮಾತಾಪಿತರು ಹಾಗೂ ಅವರು ಬೆಳೆಯುವ ಪರಿಸರವು ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳ ಪಾಲನೆ ಎಂಬುದು ಕೆಲವು ಕಟ್ಟು ನಿಟ್ಟಿನ ಆದೇಶ, ಕರ್ಕಶವಾದ ಕಾನೂನು, ನೀತಿ ನಿಯಮಗಳ ಗದರಿಕೆ ಬೆದರಿಕೆಗಳಿಂದ ಸಾಧ್ಯವಿಲ್ಲ. ಮಕ್ಕಳು ಮಾತಾಪಿತರಿಂದ ಸಿಗುವಂತಹ ಪ್ರೀತಿ, ವಿಶ್ವಾಸ, ಗೌರವ, ಸತ್ಚಾರಿತ್ರ್ಯ, ದೇವವಿಶ್ವಾಸ, ಸದ್ವರ್ತನೆಗಳ ವೀಕ್ಷಣೆಯಿಂದ ಮತ್ತು ಅನುಕರಣೆಯಿಂದ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ಆದುದರಿಂದ ತಮ್ಮ ಸತ್ಚಾರಿತ್ರ್ಯ, ನಡವಳಿಕೆ ಹಾಗೂ ಸ್ವಭಾವದಲ್ಲಿ ಹೆತ್ತವರು ಅತ್ಯುತ್ತಮ ಮಾದರಿಯಾಗಬೇಕು.

“ನಿಮ್ಮ ತಂದೆತಾಯಿಯರು ನಿಮ್ಮನ್ನು ಬೆಳೆಸಿದಂತೆ ನಿಮ್ಮ ಮಕ್ಕಳನ್ನು ಬೆಳೆಸಲು ಪ್ರಯತ್ನಿಸಬೇಡಿರಿ. ನಿಮ್ಮ ಜನನ, ಕಾಲ, ಯುಗವು ಅವರ ಜನನ, ಕಾಲ, ಯುಗಕ್ಕಿಂತ ಭಿನ್ನವಾಗಿರುತ್ತರೆ.” – ಅಲೀ(ರ)

ವಿವಿಧ ಕಾಲಗಳಲ್ಲಿ ಮಕ್ಕಳನ್ನು ಬೆಳೆಸುವ ರೀತಿ ಬೇರೆ ಬೇರೆಯಾಗಿರುತ್ತದೆ ಮತ್ತು ಒಂದೇ ತಾಯಿಯ ಮಕ್ಕಳನ್ನು ಬೆಳೆಸುವ ರೀತಿಯು ಮಕ್ಕಳಿಂದ ಮಕ್ಕಳಿಗೆ ವಿಭಿನ್ನವಾಗಿರುತ್ತದೆ. ನಿಮ್ಮ ಒಂದು ಮಕ್ಕಳನ್ನು ಬೆಳೆಸಲು ಸಫಲವಾದ ರೀತಿ ನೀತಿ ನಿಯಮಗಳು ಇನ್ನೊಂದು ಮಕ್ಕಳನ್ನು ಬೆಳೆಸುವಾಗ ಸಫಲವಾಗಬೇಕೆಂದಿಲ್ಲ. ಮಗುವಿನ ಮೊದಲ ಏಳು ವರ್ಷ ಸಣ್ಣ ಪುಟ್ಟ ಹೆಜ್ಜೆಗಳನ್ನಿಟ್ಟು ಸುಂದರವಾಗಿ ಆಟವಾಡುವ ಮತ್ತು ತುಂಟಾಟದ ಮಾತನಾಡುವ ಸಮಯವಾಗಿರುತ್ತದೆ. ನಂತರದ ಏಳು ವರ್ಷ ಶಿಕ್ಷಣ, ಸಂಸ್ಕಾರ, ಶಿಸ್ತನ್ನು ಕಲಿಸುವ ಹಾಗೂ ಮುಂದಿನ ಏಳು ವರ್ಷ ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಸುವ ಹಂತವಾಗಿರುತ್ತದೆ.

“ಯಾವ ತಂದೆಯೂ ತನ್ನ ಮಕ್ಕಳಿಗೆ ಶಿಷ್ಟ ಸಂಸ್ಕಾರಕ್ಕಿಂತ ಶ್ರೇಷ್ಠ ಉಡುಗೊರೆಯನ್ನು ಕೊಟ್ಟಿಲ್ಲ.” -ಪ್ರವಾದಿ ಮುಹಮ್ಮದ್(ಸ)

ಇಸ್ಲಾಮ್ ಧರ್ಮದ ದೃಷ್ಟಿಕೋನದಲ್ಲಿ ಹದಿಹರೆಯ ಪ್ರಾಯದವರು ಎಂಬ ವಿಷಯವಿಲ್ಲ. ಆದುದರಿಂದ ಹದಿಹರೆಯದ ಪ್ರಾಯದವರನ್ನು ಮಕ್ಕಳೆಂದು ಪರಿಗಣಿಸಬೇಡಿರಿ. ಒಮ್ಮೆ ಪ್ರೌಢರಾದ ಬಳಿಕ ಅವರ ಎಲ್ಲಾ ಕೃತ್ಯಗಳಿಗೆ ಅಲ್ಲಾಹನ ಎದುರು ಜವಾಬ್ದಾರರಾಗಿರುತ್ತಾರೆ. ಅವರನ್ನು ಹೆತ್ತವರನ್ನು ಹೆದರುವ, ಹೆತ್ತವರಿಗಾಗಿ ಆರಾಧನೆ ಮಾಡುವ ಮಕ್ಕಳಾಗಿ ಬೆಳೆಸಬೇಡಿರಿ. ಜೀವನದ ಸಕಲ ರಂಗಗಳಲ್ಲಿಯೂ ಅಲ್ಲಾಹನನ್ನು ಭಯಪಡುವ ಅತ್ಯುತ್ತಮ ದೇವಭಕ್ತರನ್ನಾಗಿ ಬೆಳೆಸಲು ಪ್ರಯತ್ನಿಸಿರಿ. ಮಕ್ಕಳಿಗೆ ಏನಾದರೂ ಆದೇಶ ನೀಡುವುದಕ್ಕಿಂತಲೂ ಹೆತ್ತವರು ಆ ಕೆಲಸವನ್ನು ಒಟ್ಟಿಗೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಹೆತ್ತವರು ಮಕ್ಕಳೊಂದಿಗೆ ಶಾಂತವಾಗಿ ವರ್ತಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಹದಿಹರೆಯದ ಮಕ್ಕಳಿಗೆ ಹೆತ್ತವರು ಅತಿಯಾಗಿ ಉಪದೇಶಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಎಲ್ಲಾ ಉಪದೇಶ ಪರಿಣಾಮಕಾರಿಯಾಗುವುದಿಲ್ಲ. ಈ ಪ್ರಾಯದಲ್ಲಿ ಮಕ್ಕಳಿಗೆ ಅತಿಯಾದ ಉಪದೇಶವು ಕಿರಿಕಿರಿ ಎನಿಸುತ್ತದೆ. ಅವರಿಗೆ ಅವರದ್ದೇ ಅಭಿಪ್ರಾಯ, ಆಲೋಚನೆ, ಭಾವನೆ, ಯೋಜನೆಗಳಿರುತ್ತದೆ. ಆದುದರಿಂದ ಮಕ್ಕಳು ಹೇಳುವುದನ್ನು ಕೇಳಲು ತಯಾರಿರಬೇಕು. ನಿಮ್ಮ ಎಲ್ಲ ಆದೇಶಗಳನ್ನು ಚಾಚುತಪ್ಪದೇ ಪಾಲಿಸುವಂತಹ, ನಿಲ್ಲು ಹೇಳಿದಾಗ ನಿಂತುಕೊಳ್ಳುವ, ಕುಳಿತುಕೊ ಎಂದು ಹೇಳಿದಾಗ ಕುಳಿತುಕೊಳ್ಳುವ ಮಕ್ಕಳಾಗಿ ಪರಿವರ್ತಿಸುವ ಅಧಿಕೃತ ಪೋಷಕರಾಗಲು ಪ್ರಯತ್ನಿಸಬೇಡಿರಿ. ಮಕ್ಕಳಿಂದ ಸದ್ವರ್ತನೆಯನ್ನು ಮಾತ್ರ ನಿರೀಕ್ಷಿಸಿರಿ. ಪವಿತ್ರ ಕುರ್ ಆನ್ ನಲ್ಲಿ ಮಾತಾಪಿತರೊಂದಿಗೆ ಸದ್ವರ್ತನೆ ತೋರಲು ಆಜ್ಞಾಪಿಸಲಾಗಿದೆ. ಮಕ್ಕಳು ಎದುರಿಸುತ್ತಿರುವ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳಿಗೆ ಸ್ವತಃ ಅವರೊಂದಿಗೆ ಕುಳಿತು ಆಲೋಚನೆ ಮಾಡಿ ತೀರ್ಮಾನ ಕೈಗೊಳ್ಳಲು ಮಾರ್ಗದರ್ಶನ ನೀಡಿರಿ. ಅವರು ಸ್ವತಃ ಅನ್ವೇಷಣೆ ನಡೆಸಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಪ್ರೊತ್ಸಾಹವನ್ನು ನೀಡಿರಿ. ಇಬ್ರಾಹೀಮ್(ಅ) ರಿಗೆ ಅಲ್ಲಾಹನು ಪುತ್ರನನ್ನು ಬಲಿ ಅರ್ಪಿಸಲು ಆದೇಶ ನೀಡಿದಾಗ ಅವರು ಪುತ್ರನ ಅಭಿಪ್ರಾಯ ಕೇಳುತ್ತಾರೆ. ತಂದೆ ಮತ್ತು ಮಗನ ನಡುವಿನ ಸಂಭಾಷಣೆ, ಸಮಾಲೋಚನೆಯ ಉತ್ತಮ ಉದಾಹರಣೆಯಾಗಿದೆ.

“ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲಪಿದಾಗ (ಒಂದು ದಿನ) ಇಬ್ರಾಹೀಮರು ಅವನೊಡನೆ, “ಮಗೂ, ನಾನು (ಬಲಿಯರ್ಪಿಸಲಿಕ್ಕಾಗಿ) ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕನಸಿನಲ್ಲಿ ಕಂಡೆನು. ಈಗ ನಿನ್ನ ಅಭಿಪ್ರಾಯವೇನೆಂದು ಹೇಳು” ಎಂದರು. ಆಗ ಅವನು, “ಅಪ್ಪಾ, ತಮಗೆ ಆಜ್ಞಾಪಿಸಲಾಗಿರುವುದನ್ನು ಮಾಡಿಬಿಡಿರಿ, ಅಲ್ಲಾಹನಿಚ್ಛಿಸಿದರೆ ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ” ಎಂದನು.” (ಪವಿತ್ರ ಕುರ್ ಆನ್ 37: 102)

ಮಕ್ಕಳನ್ನು ಅತ್ಯುತ್ತಮವಾಗಿ ಬೆಳೆಸಬೇಕೆಂಬ ಭಾವನೆ ಎಲ್ಲ ಮನುಷ್ಯರಲ್ಲೂ ಇರುತ್ತದೆ. ಮಕ್ಕಳನ್ನು ಪ್ರೀತಿಸುವುದು ಮನುಷ್ಯನ ಹೃದಯದಲ್ಲಿರುವ ಕಾರುಣ್ಯದ ಲಕ್ಷಣವಾಗಿದೆ. ಮಕ್ಕಳಿಂದ ಹಲವಾರು ಪಾಠಗಳನ್ನು ಕಲಿಯಲು ಅವಕಾಶ ಸಿಗುತ್ತದೆ. ಕೆಲವೊಮ್ಮೆ ಮಕ್ಕಳ ಉಪದೇಶವನ್ನು ಸ್ವೀಕರಿಸುವ ಸಂದರ್ಭ ಬರಬಹುದು. ಅವರ ಉಪದೇಶವು ಹೆಚ್ಚು ಪರಿಣಾಮಕಾರಿಯಾಗಬಹುದು. ಹೆತ್ತವರಿಗೆ ತಮ್ಮ ಹದಿಹರೆಯದ ಪ್ರಾಯದ ಮಕ್ಕಳಿಗೆ ಎಲ್ಲಾ ವಿಷಯಗಳನ್ನು ಕಲಿಸಲು ಸಾಧ್ಯವಿಲ್ಲ. ಆಧುನಿಕ ಕಾಲದಲ್ಲಿ ಮೂರನೆಯ ವ್ಯಕ್ತಿಯಿಂದ ಅವರಿಗೆ ಮಾರ್ಗದರ್ಶನ, ನಿರ್ದೇಶನ, ತರಬೇತಿ ಪಡೆಯುವಂತಹ ಅನುಕೂಲವನ್ನುಂಟು ಮಾಡಿರಿ. ಸಮುದಾಯದ ನಾಯಕರು, ವಾಗ್ಮಿ, ಆದರ್ಶ ವ್ಯಕ್ತಿ, ಮಾರ್ಗದರ್ಶಕ, ತರಬೇತುದಾರರು (ಕೋಚ್, ಮೆನ್ಟರ್) ಹೇಳುವ ಮಾತು ಹೆತ್ತವರಿಗಿಂತಲೂ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ. ಧಾರ್ಮಿಕ ವಿಷಯಗಳನ್ನು ಸ್ವತಂತ್ರವಾಗಿ ಕಲಿಯುವಂತಹ ಅವಕಾಶಮಾಡಿ ಕೊಡಿರಿ. ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿರಿ. ಅವರಿಗೆ ಮಾರ್ಗದರ್ಶನ ತೋರಲು, ಸಮಾಜದ ಕೆಡುಕು, ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಮತ್ತು ಅವರ ಇಹಪರ ವಿಜಯಕ್ಕಾಗಿ ನಿರಂತರ ಪ್ರಾರ್ಥಿಸಿರಿ.