ಉಡುಪಿ: ಮುಸ್ಲಿಂ ಬಾಂಧವ್ಯ ವೇದಿಕೆ ಅಸ್ತಿತ್ವಕ್ಕೆ

0
257

ಸನ್ಮಾರ್ಗ ವಾರ್ತೆ

ಉಡುಪಿ: “ಸಮುದಾಯ ಸೇತು” ಎಂಬ ಶಿರೋನಾಮೆಯೊಂದಿಗೆ ಕಾಲಕಾಲಕ್ಕೆ ರಾಜಕೀಯ ಕಾರಣಗಳಿಂದ ಬರಬಹುದಾದ ಸಮುದಾಯಗಳ ನಡುವಿನ ವೈಮನಸ್ಸು, ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಚಿತವಾದ ನಾಡಿನಾದ್ಯಂತವಿರುವ ಮುಸ್ಲಿಂ ಲೇಖಕರು ಚಿಂತಕರು, ಶಿಕ್ಷಣ ತಜ್ಞರು, ಸಾಹಿತಿಗಳ ವೇದಿಕೆ “ಮುಸ್ಲಿಂ ಬಾಂಧವ್ಯ ವೇದಿಕೆ”ಯ ಮೊದಲ ಸಭೆ ಉಡುಪಿಯ ಮಣಿಪಾಲ್ ಇನ್ ಹೋಟೆಲಿನಲ್ಲಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮುಸ್ಲಿಂ ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರು ಸಭೆಯಲ್ಲಿ ಹಾಜರಿದ್ದು, ನಿರಂತರ ರಾಜಕೀಯ ದಬ್ಬಾಳಿಕೆಗೆ ಒಳಗಾಗುತ್ತಿರುವ ಮುಸ್ಲಿಂ ಸಮುದಾಯದ ಅಗತ್ಯತೆಗಳಿಗೆ ಸ್ಪಂದಿಸುವ, ಬಹುಸಂಖ್ಯಾತ ಹಿಂದೂ ಸಮುದಾಯವೂ ಸೇರಿದಂತೆ ಸಹಸಮುದಾಯಗಳೊಂದಿಗೆ ಸೇರಿ ಸೌಹಾರ್ದ ವಾತಾವರಣ ನಿರ್ಮಿಸುವ ಮತ್ತು ಸಮುದಾಯದ ಸದ್ಭಾವನೆಯ ಧ್ವನಿಯಾಗಿ ಕಾರ್ಯನಿರ್ವಹಿಸುವ ಅಗತ್ಯತೆಯ ಬಗ್ಗೆ ಚರ್ಚಿಸಲಾಯಿತು.

ಭವಿಷ್ಯದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಭೂಮಿಕೆಗಳಿಗೆ ಮುಸ್ಲಿಂ ಸಮುದಾಯದಿಂದ ಸಮುದಾಯ ಮತ್ತು ಸಮಾಜಕ್ಕೆ ಹೀಗೊಂದು ಸಂಘಟನೆಯ ಅಗತ್ಯತೆಯನ್ನು ಸಭೆಯಲ್ಲಿರುವ ಸರ್ವರೂ ಅನುಮೋದಿಸಿದರು. ಸಭೆಯಲ್ಲಿ ವೇದಿಕೆಯ ಪದಾಧಿಕಾರಿಗಳನ್ನು ನೇಮಿಸಲಾಯಿತು. ಗೌರವಾಧ್ಯಕ್ಷರಾಗಿ ಚಿಂತಕರಾದ ಡಾ. ರಿಜ್ವಾನ್ ಆಹಮದ್ ಕಾರ್ಕಳ, ಅಧ್ಯಕ್ಷರಾಗಿ ಚಿಂತಕ ಹಾಗೂ ಉದ್ಯಮಿ ಯಾಸೀನ್ ಶಿರೂರ್ ಸರ್ವಾನುಮತದಿಂದ ಆಯ್ಕೆಯಾದರು.ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹ್ಮದ್ ಗುಡ್ಡೆಯಂಗಡಿ, ಉಪಾಧ್ಯಕ್ಷರಾಗಿ ಯಾಹ್ಯಾ ನಖ್ವಾ, ಜೊತೆ ಕಾರ್ಯದರ್ಶಿಗಳಾಗಿ ಉಮರ್ ಕುಂಞ ಸಾಲೆತ್ತೂರು, ಸೈಫ್ ಬಜ್ಪೆ, ಸಂಘಟನಾ ಕಾರ್ಯದರ್ಶಿಗಳಾಗಿ ಹಾಶಿರ್ ಪೆರಿಮಾರ್, ಅಸ್ಲಮ್ ಹೈಕಾಡಿ ಆಯ್ಕೆಯಾದರು. ವೇದಿಕೆಯ ಮಾಧ್ಯಮ ವಿಭಾಗವನ್ನು ರಶೀದ್ ಉಬರ್, ರಫೀಕ್ ಐವತ್ತೋಕ್ಲು,ಮುಬಾರಕ್ ಗುಲ್ವಾಡಿ,ಅಶ್ರಫ್ ಕುಂದಾಪುರ ,ಇಖ್ಬಾಲ್ ಹಾಲಾಡಿ , ಖಲಂದರ್ ಷಾ ಮೋಂಟುಗೂಳಿ, ಲೇಖಕ ಮುಷ್ತಾಕ್ ಹೆನ್ನಾಬೈಲ್ ನಿಭಾಯಿಸಲಿದ್ದಾರೆ. ಸಲಹಾ ಸಮಿತಿಗೆ ಶೇಖ್ ನಝೀರ್ ಬೆಳುವಾಯಿ,ಹಬೀಬ್ ಖಾದರ್, ರಝಾ ಮಾನ್ವಿ, ಶರ್ಫುದ್ದೀನ್ ಕಾಪು, ಇರ್ಷಾದ್ ನೇಜಾರ್ ಅಯ್ಕೆಯಾದರು.