ಸನ್ಮಾರ್ಗ ವಾರ್ತೆ
ಧಾರವಾಡ; ಮಾ. 17- ಖ್ಯಾತ ಸಾಹಿತಿ ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರವನ್ನು ನೋಡಲು (ಮಾರ್ಚ್-) ಬಂದವರೆಲ್ಲರೂ ಪಾರ್ಥಿವ ಶರೀರದ ಬಳಿಯೇ ಇದ್ದ ಸೈಯದ್ ಅಲಿ ಖಾದರ್ ಸಾಬ್ ನರೇಗಲ್ ಅವರಿಗೆ ಸಾಂತ್ವನ ಹೇಳದೆ ಹೋಗುತ್ತಿರಲಿಲ್ಲ. ಈ ಖಾದರ್ ಸಾಹೇಬರು ಕಳೆದ 20 ವರ್ಷಗಳಿಂದ ಪಾಟೀಲ ಪುಟ್ಟಪ್ಪ ಅವರ ಸೇವೆ ಮಾಡುತ್ತಿದ್ದರು. ವಿಶೇಷವಾಗಿ ಪಾಟೀಲ ಪುಟ್ಟಪ್ಪ ರು ಗಾಲಿಕುರ್ಚಿಗೆ ಸೀಮಿತವಾದ ಬಳಿಕದ ಸಮಯದಿಂದಂತೂ ಖಾದರ್ ಸಾಬ್ ಅವರ ಸೇವೆ ಅನನ್ಯವಾಗಿತ್ತು.
ಹಾವೇರಿ ಜಿಲ್ಲೆಯ ಕರಜಗಿಯವರಾದ ಖಾದರ್ ಸಾಹೇಬರು, ಪಾಟೀಲ ಪುಟ್ಟಪ್ಪ ಅವರು ಬೆಳಗ್ಗೆ ಏಳುವಲ್ಲಿಂದ ಹಿಡಿದು ರಾತ್ರಿ ಮಲಗುವವರೆಗೆ ಅವರ ಜೊತೆಗಿದ್ದು ಸೇವೆ ಮಾಡುತ್ತಿದ್ದರು. 2996 ರಲ್ಲಿ ಡ್ರೈವರ್ ಆಗಿ ಸಾಹೇಬರು ಪುಟ್ಟಪ್ಪ ಅವರ ಬಳಿ ತಮ್ಮ ಕೆಲಸವನ್ನು ಆರಂಭಿಸಿದರು. ಬಳಿಕ ಅವರು ಪುಟ್ಟಪ್ಪ ಅವರ ಕುಟುಂಬದ ಸದಸ್ಯರಲ್ಲಿ ಓರ್ವರಂತಾದರು. ಈತ ನನ್ನ ದತ್ತುಪುತ್ರ ಎಂದು ಪುಟ್ಟಪ್ಪ ಹೇಳುತ್ತಿದ್ದರು. ಅದೇ ರೀತಿ ನಾನು ಖಾದರ್ ನ ಕೈಯಲ್ಲಿ ಪಾಪು ಆಗಿದ್ದೇನೆ ಎಂದು ಕೂಡ ಪಾಟೀಲ ಪುಟ್ಟಪ್ಪ ತಮಾಷೆಯಾಗಿ ಹೇಳುತ್ತಿದ್ದರು. ಅಂದರೆ ಆ ಮಟ್ಟದಲ್ಲಿ ತನ್ನನ್ನು ಸೇವೆ ಮಾಡುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಪಾಟೀಲ ಪುಟ್ಟಪ್ಪ ಅವರ ಸಾಂಗತ್ಯ ದಿಂದಾಗಿ ಖಾದರ್ ಸಾಹೇಬರು ಕನ್ನಡದ ರಾಯಭಾರಿಯಂತೆ ಪರಿವರ್ತನೆಗೊಂಡಿದ್ದರು. ಪುಟ್ಟಪ್ಪನವರ ಮನೆಗೆ ಬರುವವರ ಜೊತೆ ಅವರು ಕನ್ನಡದ ಉಳಿವಿನ ಬಗ್ಗೆ ಮಾತಾಡುತ್ತಿದ್ದರು. ವಿಶೇಷವಾಗಿ ಇಂಗ್ಲಿಷ್ ನಲ್ಲಿ ಯಾರಾದರೂ ಆಮಂತ್ರಣ ಪತ್ರಿಕೆಯನ್ನು ತಂದರೆ ಕನ್ನಡದಲ್ಲಿ ಬರೆಯುವಂತೆ ವಿನಂತಿಸುತ್ತಿದ್ದರು. ಕಳೆದ ಕೆಲವು ಸಮಯದಿಂದ ಪುಟ್ಟಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಮಯದಿಂದ ಹಿಡಿದು ಅವರ ಕೊನೆಯುಸಿರಿನವರೆಗೂ ಖಾದರ್ ಸಾಹೇಬ್ ರು ಅವರ ಜೊತೆಗಿದ್ದರು.












