ಕಾಶ್ಮೀರಿ ವಿದ್ಯಾರ್ಥಿಗಳ ಪಾಕ್ ಜಿಂದಾಬಾದ್ ಪ್ರಕರಣ: ಹುಬ್ಬಳ್ಳಿ ಬಾರ್ ಅಸೋಸಿಯೇಷನ್ ಪ್ರಸ್ತಾವ ತಪ್ಪು- ಹೈಕೋರ್ಟ್

0
674

ಸನ್ಮಾರ್ಗ ವಾರ್ತೆ

ಬೆಂಗಳೂರು; ಮಾ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದ್ದಾರೆಂಬ ಆರೋಪದಲ್ಲಿ ಬಂಧಿಸಲಾಗಿರುವ ಹುಬ್ಬಳ್ಳಿ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಮತ್ತು ಅತ್ಯಂತ ಗಂಭೀರ ಅಪರಾಧ ಎಸಗಿದವರು ಎಂಬ ಪ್ರಸ್ತಾಪವನ್ನು ಪಾಸು ಮಾಡಿದ್ದ ಹುಬ್ಬಳ್ಳಿ ಬಾರ್ ಅಸೋಸಿಯೇಷನ್ ನ ಕ್ರಮವನ್ನು ರಾಜ್ಯ ಹೈಕೋರ್ಟು ತೀವ್ರ ತರಾಟೆಗೆ ತೆಗೆದುಕೊಂಡಿದೆ ಮತ್ತು ಕೋರ್ಟ್ ನಲ್ಲಿ ಸಾಬೀತಾಗುವ ಮೊದಲೇ ಇಂಥದ್ದೊಂದು ಪ್ರಸ್ತಾವ ಪಾಸು ಮಾಡುವುದು ತಪ್ಪು ಎಂದು ಟೀಕಿಸಿದೆ. ಈ ದೇಶದಲ್ಲಿರುವ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಕಾಡಿನ ನ್ಯಾಯವ್ಯವಸ್ಥೆಯಲ್ಲ ಕ್ರಿಮಿನಲ್ ಕೃತ್ಯ ಎಸಗಿದ ವಿದೇಶಿಯರಿಗೂ ಪಕ್ಷಪಾತ ರಹಿತ ನ್ಯಾಯವನ್ನು ನೀಡುವ ವ್ಯವಸ್ಥೆ ಇಲ್ಲಿದೆ ಎಂದು ಕೋರ್ಟು ನೆನಪಿಸಿದೆ.

ಆದ್ದರಿಂದ ತಿಳುವಳಿಕೆಯಿರುವ ಬಾರ್ ಅಸೋಸಿಯೇಷನ್ ನ ಸದಸ್ಯರು ನ್ಯಾಯ ತೀರ್ಮಾನಕ್ಕಿಂತ ಮೊದಲೇ ವಿದ್ಯಾರ್ಥಿಗಳನ್ನು ಕ್ರಿಮಿನಲ್ ಗಳು ಎಂದು ಕರೆದಿರುವುದು ತಪ್ಪು ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ ಕಿನಗಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಬಾರ್ ಅಸೋಸಿಯೇಷನ್ ನ ಪ್ರಸ್ತಾವದ ಕುರಿತು ಬೆಂಗಳೂರಿನ 24 ವಕೀಲರ ಗುಂಪು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವುದರ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕೋರ್ಟ್ ಹೀಗೆ ಹೇಳಿದೆ. ಕಳೆದ ಫೆಬ್ರವರಿ 15ರಂದು ಹುಬ್ಬಳ್ಳಿ ಬಾರ್ ಅಸೋಸಿಯೇಷನ್ ಒಂದು ಪ್ರಸ್ತಾಪವನ್ನು ಪಾಸು ಮಾಡಿದ್ದು, ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಹೇಳಲಾದ ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ಯಾವ ವಕೀಲರೂ ಕೋರ್ಟ್ ನಲ್ಲಿ ಹಾಜರಾಗಬಾರದೆಂದು ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿಗಳ ಪ್ರಕರಣವನ್ನು ಎತ್ತಿಕೊಳ್ಳಲು ಯಾವ ವಕೀಲರು ಮುಂದೆ ಬಂದಿರಲಿಲ್ಲ. ಈ ಪ್ರಸ್ತಾವವನ್ನು ಬೆಂಗಳೂರಿನ 24 ವಕೀಲರ ಗುಂಪು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.