ಮಣಿಪುರದ ಪ್ರಗತಿಗೆ ಶಾಂತಿ ಅವಶ್ಯಕ, ಸರಕಾರ ನಿಮ್ಮ ಜೊತೆಗಿದೆ; ಪ್ರಧಾನಿ ನರೇಂದ್ರ ಮೋದಿ

0
418

ಸನ್ಮಾರ್ಗ ವಾರ್ತೆ

ಇಂಫಾಲ: ಮಣಿಪುರ ಗಲಭೆ ಸಂತ್ರಸ್ತರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದು, ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಕರೆ ನೀಡಿದರು. ರಾಜ್ಯದ ಪ್ರಗತಿಗೆ ಶಾಂತಿಯು ಅವಶ್ಯಕವೆಂದು ಒತ್ತಿ ಹೇಳಿದ ಅವರು, ಎಲ್ಲಾ ವಿಷಯಗಳಲ್ಲಿ ಕೇಂದ್ರ ಸರ್ಕಾರವು ಮಣಿಪುರದ ಜನರೊಂದಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಚುರಾನಂದಪುರದಲ್ಲಿ ಕುಕಿ ಸಮುದಾಯದ ಸಂತ್ರಸ್ತರನ್ನು ಭೇಟಿ ಮಾಡಿದ ನಂತರ, 7,300 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಇದು ಬುಡಕಟ್ಟು ಸಮುದಾಯಗಳಿಗೆ ಈ ಯೋಜನೆಗಳು ವಿಶೇಷ ಪ್ರಯೋಜನ ತರುತ್ತವೆ ಎಂದು ಪ್ರಧಾನಿ ಹೇಳಿದರು.

ಆದರೆ, ಪ್ರಧಾನಿಯವರ ಭೇಟಿಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಟೀಕಿಸಿದೆ. ಈ ಭೇಟಿ ಕೇವಲ ಒಂದು ಪ್ರಹಸನವಾಗಿದ್ದು, ಪರಿಹಾರ ಶಿಬಿರಗಳ ನೋವಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾತ್ರ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. 2023ರಲ್ಲಿ ಮಣಿಪುರ ಗಲಭೆ ಆರಂಭವಾದ ಬಳಿಕ ಪ್ರಧಾನಿ 46 ವಿದೇಶ ಪ್ರವಾಸ ಕೈಗೊಂಡಿದ್ದರೂ, ದೇಶೀಯ ಸಮಸ್ಯೆಗಳ ಬಗ್ಗೆ ಅವರು ಸಹಾನುಭೂತಿ ತೋರಲಿಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಮಣಿಪುರದಲ್ಲಿ ಮೇಟಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಸಂಘರ್ಷದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಲಭೆ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿಯವರು ಮಣಿಪುರಕ್ಕೆ ಭೇಟಿ ನೀಡದಿರುವುದಕ್ಕೆ ಈ ಹಿಂದೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.