ದೇಶಾದ್ಯಂತ ಸಿಖ್ ಕೈದಿಗಳ ಬಿಡುಗಡೆ ಆಗ್ರಹಿಸಿ ಭಾರೀ ಸಂಘರ್ಷ: 30 ಪೊಲೀಸರು ಸೇರಿದಂತೆ ಹಲವರಿಗೆ ಗಾಯ

0
276

ಸನ್ಮಾರ್ಗ ವಾರ್ತೆ

ಚಂಡೀಗಢ: ದೇಶಾದ್ಯಂತ ವಿವಿಧ ಜೈಲುಗಳಲ್ಲಿರುವ ಸಿಖ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷ ನಡೆಸಿದ ಘಟನೆ ಪಂಜಾಬ್‌ನ ಮೊಹಾಲಿ ಮತ್ತು ಚಂಡೀಗಢ ಗಡಿಯಲ್ಲಿ ನಡೆದಿದೆ. ಘಟನೆಯಲ್ಲಿ 30 ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಧಿಕೃತ ನಿವಾಸದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಭೇದಿಸಲು ಪ್ರಯತ್ನಿಸುತ್ತಿದ್ದಂತೆ ಚಂಡೀಗಢ ಪೊಲೀಸರು ಜಲಫಿರಂಗಿಗಳನ್ನು ಹಾರಿಸಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಭಟನಾಕಾರರು ಜಲಫಿರಂಗಿ ವಾಹನ, ಗಲಭೆ ನಿಗ್ರಹ ದಳದ ‘ವಜ್ರ’ ವಾಹನ, ಎರಡು ಪೊಲೀಸ್ ಜೀಪ್ ಮತ್ತು ಅಗ್ನಿಶಾಮಕ ದಳದ ವಾಹನವನ್ನು ಧ್ವಂಸಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರು ಕ್ವಾಮಿ ಇನ್ಸಾಫ್ ಮೋರ್ಚಾದ ಬ್ಯಾನರ್‌ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಶಿಕ್ಷಾ ಅವಧಿ ಮುಗಿದಿದ್ದರೂ ದೇಶಾದ್ಯಂತ ವಿವಿಧ ಜೈಲುಗಳಲ್ಲಿರುವ ಸಿಖ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಪಂಜಾಬ್‌ನ ವಿವಿಧ ಭಾಗಗಳ ಜನರು ಜನವರಿ 7ರಿಂದ ವೈಪಿಎಸ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರೊಂದಿಗೆ ಕೆಲವರು ಕತ್ತಿ, ಕೋಲು ಹಿಡಿದು ಜಮಾಯಿಸಿದ್ದರು ಎಂಬುದಾಗಿ ವರದಿಯಾಗಿದೆ.