ಸಂಸತ್ತಿನಲ್ಲಿ ಸುದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ ‘ಅದಾನಿ’ ವಿಷಯದಲ್ಲಿ ಮೌನ!

0
149

ಸನ್ಮಾರ್ಗ ವಾರ್ತೆ

ನವದೆಹಲಿ: ಸಂಸತ್ತಿನಲ್ಲಿ ಅದಾನಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಮೋದಿ ಜೊತೆಗಿನ ಗೌತಮ್ ಅದಾನಿ ಅವರ ಹಳಿತಪ್ಪಿದ ಸಂಬಂಧವನ್ನು ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಹಲವು ದಿನಗಳಿಂದ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ರಾಷ್ಟ್ರಪತಿಗಳಿಗೆ ಕೃತಜ್ಞತಾ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯನ್ನು ಮುಗಿಸಿದ ಬಳಿಕ ಲೋಕಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಪ್ರಧಾನಿಯವರು, ಎಲ್ಲಿಯೂ ಅದಾನಿ ಹೆಸರನ್ನೂ ಪ್ರಸ್ತಾಪಿಸಲಿಲ್ಲ.

ಮೋದಿ ಮತ್ತು ಅದಾನಿ ನಡುವಿನ ಹಳಿತಪ್ಪಿದ ಸಂಬಂಧವನ್ನು ಬಯಲಿಗೆಳೆದು ಹಲವು ಪ್ರಶ್ನೆಗಳನ್ನು ರಾಹುಲ್ ಗಾಂಧಿ ಲೋಕಸಭೆಯ ಮುಂದಿಟ್ಟಿದ್ದರು. ಈ ಸಂದರ್ಭದಲ್ಲಿ, ಅದಾನಿ ಕಂಪನಿಗಳಿಗೆ ಲಭಿಸುತ್ತಿರುವ ಹಣದ ಒಳಹರಿವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಅದಾನಿ ಕಂಪನಿಗಳ ಕುಸಿತದ ಕೋಲಾಹಲದಲ್ಲಿ ಸಂಸತ್ತು ಹಲವು ದಿನಗಳ ಕಾಲ ಸ್ಥಗಿತಗೊಂಡಿತ್ತು.

ಆದರೆ, ಒಂದೂವರೆ ಗಂಟೆಗಳ ಕಾಲ ಪ್ರಧಾನಿಯವರು ಮಾಡಿದ ಭಾಷಣದಲ್ಲಿ ಎಂದಿನಂತೆ ಕಾಂಗ್ರೆಸ್ ಹಾಗೂ ಹಿಂದಿನ ಸರ್ಕಾರಗಳನ್ನು ತೀವ್ರವಾಗಿ ಟೀಕಿಸಿದ್ದನ್ನು ಬಿಟ್ಟರೆ ಅದಾನಿ ಬಗ್ಗೆ ಏನನ್ನೂ ಹೇಳಿಲ್ಲ ಎಂಬ ಅಂಶವನ್ನು ಹಲವು ವಿರೋಧ ಪಕ್ಷದ ಸದಸ್ಯರು ಬೊಟ್ಟು ಮಾಡಿದರು.

ಭಾಷಣದ ವೇಳೆ, “ಜನರಿಗೆ ತನ್ನ ಮೇಲೆ ನಂಬಿಕೆ ಇರುವುದು ಪತ್ರಿಕೆಗಳ ಮುಖ್ಯಾಂಶಗಳು ಅಥವಾ ಟಿವಿ ಶೋಗಳಿಂದಾಗಿ ಅಲ್ಲ, ಬದಲಾಗಿ ನಾನು ಜನಸೇವೆಯಿಂದಾಗಿ ನಂಬಿಕೆಯನ್ನು ಗಳಿಸಿಕೊಂಡಿದ್ದೇನೆ. ನಾನು ನನ್ನ ಜೀವನವನ್ನು ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

“ಅವರ ಭಾಷಣದಿಂದ ತೃಪ್ತಿಕರ ಉತ್ತರ ಲಭ್ಯವಾಗಿಲ್ಲ‌. ಅದಾನಿ ವಿಷಯದಲ್ಲಿ ತನಿಖೆ ನಡೆಸಲು ಬಯಸದ ಅವರ ನಡೆಯು ನಾನು ಪ್ರಸ್ತಾಪಿಸಿದ ವಿಷಯಗಳೆಲ್ಲವೂ ಸತ್ಯ ಎಂಬುದನ್ನು ಬಹಿರಂಗ ಪಡಿಸಿವೆ. ನಾನು ಎತ್ತಿದ ವಿಷಯಗಳಿಂದ ಮೋದಿಯವರಿಗೆ ಗರಬಡಿದು ಹೋದಂತಾಗಿದೆ. ಆದ್ದರಿಂದ ಅವರು ಈಗ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ” ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.