ಪ್ರವಾದಿ ಮುಹಮ್ಮದ್(ಸ)ರ ಸಚ್ಚಾರಿತ್ರ್ಯ ಹಾಗೂ ಮದೀನದ ಕಪಟ ವಿಶ್ವಾಸಿಗಳು ಭಾಗ-1

0
1342

ಪ್ರವಾದಿ ಮುಹಮ್ಮದ್(ಸ)ರ ಸಚ್ಚಾರಿತ್ರ್ಯ ಹಾಗೂ ಮದೀನದ ಕಪಟ ವಿಶ್ವಾಸಿಗಳು ಭಾಗ-1

✒ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ

ನುಬುವ್ವತ್(ಪ್ರವಾದಿತ್ವ)ನ ಪ್ರಕಾಶ ಹಿರಾ ಗುಹೆಯ ಪ್ರವೇಶದಿಂದ ಆರಂಭಗೊಂಡಿತು. ಮೊತ್ತ ಮೊದಲನೆಯದಾಗಿ ಇದರ ಪ್ರತಿಬಿಂಬವು ಮಕ್ಕಾ ನಗರ ವಾಸಿಗಳ ಸಂಸ್ಕೃತಿಯ ಮೇಲೆ ಬಿತ್ತು. ಒಂದು ಮಾತಂತೂ ತಿಳಿದಿರಬೇಕು. ಸ್ವತಃ ಪ್ರವಾದಿಯವರು(ಸ) ಮಕ್ಕಾದ ಅತೀ ಶ್ರೇಷ್ಠ ಗೋತ್ರವನ್ನು ಹೊಂದಿದವರಾಗಿದ್ದರು. ಈ ಪ್ರಕಾರ ಇಸ್ಲಾಮ್‍ನ ಉಗಮದ ಬಗ್ಗೆ ಮಕ್ಕಾದ ಶ್ರೇಷ್ಠ ವ್ಯಕ್ತಿಗಳಿಗೆ ಹಾಗೂ ಜನಸಾಮಾನ್ಯರಿಗೆ ಅರಿವಾಯಿತು. ಈ ಬಗ್ಗೆ ಜನರು ಅಲ್ಲಲ್ಲಿ ಚರ್ಚೆ ಗಳನ್ನು ಮಾಡಲು ಪ್ರಾರಂಭಿಸಿದರು. ಆ ಕಾಲದಲ್ಲಿ ಮಕ್ಕಾವಾಸಿಗಳಲ್ಲಿ ಎರಡು ತರಹದ ಕುಟುಂಬಗಳಿದ್ದವು.

1) ಕಾಫಿರ್(ಸತ್ಯನಿಷೇಧಿಗಳು)ಗಳು. ಇವರು ಇಸ್ಲಾಮಿನ ಬದ್ಧ ವೈರಿಗಳಾಗಿದ್ದರು.

2) ತೀರಾ ಸಂಕಷ್ಟದ ಬದುಕನ್ನು ಎದುರಿಸುತ್ತಿರುವ ದುರ್ಬಲ ರಾದ ಮುಸ್ಲಿಮರು.

ಈ ನಡುವೆ ಪ್ರವಾದಿಯವರ(ಸ) ಕರೆಗೆ ಓಗೊಟ್ಟು ಮೊತ್ತ ಮೊದಲು ಇಸ್ಲಾಮನ್ನು ಸ್ವೀಕರಿಸಿದ ಮಹಿಳೆ ಪ್ರವಾದಿರವರ(ಸ) ಪತ್ನಿ- ಹಝ್ರತ್ ಖದೀಜಾ(ರ)ರವರಾಗಿದ್ದಾ. ಪುರುಷರಲ್ಲಿ ಹಝ್ರತ್ ಅಬೂಬಕರ್ ಸಿದ್ದೀಕ್(ರ), ಮಕ್ಕಳಲ್ಲಿ ಹಝ್ರತ್ ಅಲೀ ಬಿನ್ ಅಬೂ ತಾಲಿಬ್(ರ) ಹಾಗೂ ಗುಲಾಮರಲ್ಲಿ ಹಝ್ರತ್ ಝೈದ್ ಬಿನ್ ಸಾಬಿತ್(ರ)ರವರಾಗಿದ್ದಾರೆ. ಪುನಃ ಇಸ್ಲಾಮ್ ಸ್ವೀಕಾರದ ಈ ಪರಂಪರೆ ಮುಂದುವರಿಯುತ್ತಾ ಹೋಯಿತು.

ಮಕ್ಕಾದಲ್ಲಿ ಹಝ್ರತ್ ಇಬ್ರಾಹೀಮ್(ಅ)ರವರ ದೀನನ್ನು ವಿರೂಪಗೊಳಿಸಿದ ಒಂದು ನಕ್ಷೆ ಹಾಗೂ ಮೂರ್ತಿಪೂಜೆ ನಡೆಯುತ್ತಿತ್ತು. ಇದಕ್ಕೆ ಹೊರತಾಗಿ ಪವಿತ್ರ ಮದೀನಾ ಮುನವ್ವರದ ವಾತಾವರಣ ನಾನಾ ವಿಷಯಗಳಲ್ಲಿ ಭಿನ್ನತೆಯನ್ನು ಹೊಂದಿತ್ತು. ಮಕ್ಕಾದಲ್ಲಿ ಮುನಾಫಿಕ್ (ಕಪಟ ವಿಶ್ವಾಸಿ)ಗಳಿರಲಿಲ್ಲ ಎಂದು ಹೇಳಲಾಗುತ್ತದೆ. ಒಂದೋ ಸತ್ಯನಿಷೇಧಿಗಳು (ಕಾಫಿರ್) ಅಥವಾ ಸತ್ಯವಿಶ್ವಾಸಿ(ಮುಅ್ ಮಿನ್)ಗಳಾಗಿದ್ದರು ಎನ್ನಲಾಗುತ್ತದೆ.

ಮದೀನಾದಲ್ಲಿ ಮುನಾಫಿಕ್‍ಗಳ ಬಹುದೊಡ್ಡ ಸಮೂಹವೇ ಇತ್ತು. ಈ ಸಮೂಹವು ಶ್ರೀಮಂತರು, ಗೌರವಾನ್ವಿತ ವ್ಯಕ್ತಿಗಳನ್ನು ಹೊಂದಿತ್ತು. ಇವರು ಪವಿತ್ರ ಇಸ್ಲಾಮನ್ನು ನಾಶಗೊಳಿಸಲು ಒಳಗಿಂದೊಳಗೇ ನಾನಾ ಸಂಚಿನ ಮೂಲಕ ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸುತ್ತಿದ್ದರು. ಪ್ರವಾದಿಯವರ(ಸ) ಕೊಲೆಯೂ ಈ ಸಂಚಿನ ಒಂದು ಭಾಗವಾಗಿತ್ತು.

ಆದರೆ ಪ್ರವಾದಿಯವರ(ಸ) ರಕ್ಷಣೆಯ ಹೊಣೆ ಯನ್ನು ಸ್ವತಃ ಅಲ್ಲಾಹನೇ ವಹಿಸಿಕೊಂಡಿದ್ದರಿಂದ ಯಾವನೇ ವ್ಯಕ್ತಿಯು ತನ್ನ ಈ ದುರುದ್ದೇಶದಲ್ಲಿ ಸಫಲಗೊಳ್ಳಲು ಸಾಧ್ಯವಾಗಲಿಲ್ಲ. ಸೂಕ್ತ ಅನ್ನಹ್ಲ್‍ನಲ್ಲಿ ಅಲ್ಲಾಹನು ಹೇಳುತ್ತಾನೆ: ಪ್ರವಾದಿ ಯವರೇ(ಸ), ಅಲ್ಲಾಹನು ಜನರಿಂದ ನಿಮಗೆ ಸಂರಕ್ಷಣೆಯನ್ನು ನೀಡುವನು. ಅಲ್ಲಾಹನು ಇಷ್ಟೊಂದು ಸುಸ್ಪಷ್ಟವಾಗಿ ರಕ್ಷಣೆಯ ಭರವಸೆಯನ್ನು ನೀಡಿದ ನಂತರ ಪ್ರವಾದಿಯವರು(ಸ) ತನ್ನ ಭದ್ರತಾ ಸಿಬ್ಬಂದಿಗಳನ್ನು ಭದ್ರತೆಗೆ ನಿರಾಕರಿಸಿದರು. ಇನ್ನು ನಿಮ್ಮ ಭದ್ರತೆಯ ನನಗೆ ಅಗತ್ಯವಿಲ್ಲ. ನೀವು ನಿಮ್ಮ ಕೆಲಸಗಳಲ್ಲಿ ಮಗ್ನರಾಗಿ. ನನ್ನ ಭದ್ರತೆಯ ಹೊಣೆಯನ್ನು ಸ್ವತಃ ಅಲ್ಲಾಹನೇ ವಹಿಸಿದ್ದಾನೆ ಎಂದರು.

ಮುನಾಫಿಕ್(ಕಪಟ ವಿಶ್ವಾಸಿ)ಗಳಲ್ಲಿ ಮೊದಲನೆಯ ಸ್ಥಾನದಲ್ಲಿ ಅಬ್ದುಲ್ಲಾ ಬಿನ್ ಉಬೈ ಸಲೂಲ್‍ನ ಹೆಸರು ಕುಖ್ಯಾತಿಯನ್ನು ಪಡೆದಿದೆ. ಔಸ್ ಹಾಗೂ ಖಝ್ರಜ್ ಎಂಬ ಎರಡು ಗೋತ್ರಗಳು ಅಲ್ಲಿದ್ದವು. ಅವು ಯಮನ್‍ನಿಂದ ಬಂದಂತಹ ಗೋತ್ರಗಳಾಗಿತ್ತು. ಯಮನೀ ಹಾಗೂ ಮುಝರೀ ಎಂಬ ಎರಡು ಗೋತ್ರಗಳಲ್ಲಿ ಅತ್ಯಂತ ತೀವ್ರತರವಾದ ಭಿನ್ನಾಭಿಪ್ರಾಯಗಳೂ, ಜಗಳಗಳೂ ನಡೆಯುತ್ತಿದ್ದವು. ವಿಚಿತ್ರವೆಂದರೆ ಈ ಯಮನೀ ಗೋತ್ರಗಳಿಂದಲೇ ಇಸ್ಲಾಮಿನ ಕೈಗಳು ಬಲಗೊಂಡವು. ಇದೇ ಕಾರಣದಿಂದಾಗಿ ಪ್ರವಾದಿ ಮುಹಮ್ಮದ್(ಸ)ರವರ ಹಾಗೂ ನಾಲ್ಕು ಖಲೀಫಾಗಳ ಕಾಲದಲ್ಲಿ ಯಮನೀ, ಮುಝರೀ ಈ ಎರಡು ಗೋತ್ರಗಳ ನಡುವೆ ಯಾವುದೇ ಕಲಹಗಳು ನಡೆಯಲಿಲ್ಲ. ಮದೀನಾದ ಅನ್ಸಾರ್ (ಮಕ್ಕಾದಿಂದ ಹಿಜರಾ ಹೋದವರ ಸೇವೆಯನ್ನು ಮಾಡಿದವರು)ಗಳು ಯಮನೀಗಳಾಗಿದ್ದರು. ಪ್ರವಾದಿಯವರು(ಸ) ಮುಝರೀ ಗೋತ್ರದವರಾಗಿದ್ದರು. ಈ ಎರಡು ವಿಷಯಗಳು ಇಸ್ಲಾಮಿನ ಚರಿತ್ರೆಯನ್ನು ಅರಿಯಲಿಕ್ಕೆ ತೀರಾ ಅಗತ್ಯವಾಗಿದೆ.

ಈ ಸಂಘರ್ಷವು ಉನ್ದುಲುಸ್(ಸ್ಪೈನ್)ನಲ್ಲಿ ಮುಸ್ಲಿಮರ ಸೋಲಿಗೆ ಕಾರಣವಾಯಿತು. ಅಧಿಕಾರವು ನುಚ್ಚು ನೂರಾಯಿತು. ಈ ಸೋಲಿನಲ್ಲಿ ಯಮನೀ ಮತ್ತು ಮುಝರೀ ಈ ಎರಡು ಗೋತ್ರ ಗಳ ಪ್ರಧಾನ ಪಾತ್ರವಿದೆ. ಪ್ರವಾದಿ ಮುಹಮ್ಮದ್(ಸ) ರವರು ತನ್ನ ನುಬುವ್ವತ್(ಪ್ರವಾದಿ ತ್ವ)ನ ದೂರ ದೃಷ್ಟಿಯಿಂದ ಇವರೀರ್ವರ ನಡುವಿನ ಸಂಘರ್ಷಕ್ಕೆ ಕೊನೆಯನ್ನು ಹಾಡಿದರು. ಮುಂದುವರಿದು ಪ್ರವಾದಿ ಯವರು(ಸ) ಹೇ ಳಿದರು, ಈಮಾನ್ (ಸತ್ಯ ವಿಶ್ವಾಸ) ಅಂತೂ ಯಮನಿಯವರದ್ದಾಗಿದೆ. ಇವರ ಹೃದಯ ಗಳು ಅತ್ಯಂತ ಕೋಮಲವಾಗಿರುತ್ತವೆ. ಸತ್ಯದ ವಿಷಯಗಳಲ್ಲಿ ಇವರು ತೆರೆದ ಹೃದಯದವರಾಗಿದ್ದಾರೆ.

ವರ್ಷಾನುಗಟ್ಟಲೆಯ ಪರಸ್ಪರ ಭಿನ್ನಾಭಿಪ್ರಾಯ ಗಳಿಗೆ ಒಂದು ತಾರ್ಕಿಕ ಅಂತ್ಯ ನೀಡಲಾಯಿತು. ಇದರಿಂದ ಪ್ರವಾದಿಯವರ(ಸ) ದೂರದೃಷ್ಟಿಯುಳ್ಳ ಜ್ಞಾನದ ಅರಿವಾಗುತ್ತದೆ. ಒಂದು ಕಡೆ ಕಾಲಾನು ಕಾಲದಿಂದ ಎರಡು ಗೋತ್ರಗಳ ನಡುವೆ ನಡೆದು ಬಂದ ದಾರಿ, ಇನ್ನೊಂದು ಕಡೆ ಔಸ್ ಹಾಗೂ ಖಝ್ರಜ್‍ಗಳ ನಡುವೆ ನೂರಾರು ವರ್ಷಗಳಿಂದ ಸಾಗುತ್ತಿರುವ ಸಂಘರ್ಷಗಳಿಗೆ ತಣ್ಣೀರನ್ನು ಸುರಿಸಿ ಬೆಂಕಿಯನ್ನು ತಣ್ಣಾಗಾಗಿಸುವಲ್ಲಿ ಯಶಸ್ವಿಯಾದರು.

ಪ್ರವಾದಿಯವರು(ಸ) ಬುಆಸ್ ಯುದ್ಧದ ಜ್ವಾಲೆಗಳನ್ನು ಶಾಶ್ವತವಾಗಿ ಮುಕ್ತಾಯ ಗೊಳಿಸಿದರು. ಔಸ್ ಹಾಗೂ ಖಝ್ರಜ್ ಎರಡು ಗೋತ್ರಗಳ ನಡುವೆ ಸಂಭವಿಸಿದಂತಹ ಕೊನೆಯ ಮಹಾ ಯುದ್ಧಕ್ಕೆ, ಬುಆಸ್ ಯುಧ್ದ ಎಂದು ಹೇಳಲಾಗುತ್ತದೆ. ಇದರಲ್ಲಿ ಇತ್ತಂಡಗಳ ಸಾವಿರಾರು ಜನರ ಮಾರಣಹೋಮ ನಡೆದಿದೆ. ಇದಕ್ಕೆ ಪ್ರಧಾನ ಕಾರಣ ಪ್ರತಿಯೊಬ್ಬರ ಬಗ್ಗೆ ನಾನಾ ರೀತಿಯ ಪೂರ್ವಾ ಗ್ರಹಗಳಾಗಿದ್ದವು. ಒಂದು ಬಾರಿ ಔಸ್ ಹಾಗೂ ಖಝ್ರಜ್‍ನ ಎರಡೂ ಕಡೆಯವರು ಒಂದು ಸ್ಥಳದಲ್ಲಿ ಜಮಾಗೊಂಡಿದ್ದರು. ಪರಸ್ಪರ ಪ್ರೀತಿ, ವಿಶ್ವಾಸದ ಮಾತುಗಳನ್ನಾಡುತ್ತಿದ್ದರು.

ಅಷ್ಟರಲ್ಲಿ ಜದ್ದ್ ಬಿನ್ ಶಮಾಸ್ ಎಂಬ ಯಹೂದಿಯು ಆ ಸ್ಥಳದಿಂದ ಹಾದು ಹೋಗುತ್ತಿದ್ದ. ಪವಿತ್ರ ಇಸ್ಲಾಮ್‍ನಿಂದಾಗಿ ಇವರ ನಡುವೆ ಪ್ರೀತಿ, ಶಾಂತಿ ಏರ್ಪಟ್ಟದ್ದನ್ನು ಕಂಡು ಅವನಿಂದ ಸಹಿಸಲಾಗಲಿಲ್ಲ. ದ್ವೇಷ ಉಕ್ಕಿ ಬಂತು. ಇದಕ್ಕೆ ಪ್ರತೀಕಾರವನ್ನು ಸಲ್ಲಿಸಲಿಕ್ಕಾಗಿ ಒಬ್ಬ ಹದಿಹರೆಯದ ಯಹೂದಿ ಯುವಕನನ್ನು ತಂದನು. ಅವನಿಗೆ ಬುಆಸ್ ಯುಧ್ದದಲ್ಲಿ ಔಸ್ ಹಾಗೂ ಖಝ್ರಜ್ ಗೋತ್ರಗಳ ಕವಿಗಳು ಹಾಡಿದ ಪ್ರತೀಕಾರದ ರೂಪದಲ್ಲಿರುವ ಹಾಡುಗಳನ್ನು ಕಲಿಸಿದನು. ಈ ಕವನಗಳನ್ನು ಈ ಎರಡು ಗೋತ್ರಗಳ ನಡುವೆ ಹೋಗಿ ಹಾಡು ಎಂದು ಹೇ ಳಿದನು. ಈ ಹಾಡುಗಳನ್ನು ಕೇಳಿದಾಕ್ಷಣ ಮುರುಟಿ ಹೋದ ದ್ವೇಷಗಳು ಉಕ್ಕಿ ಬಂದವು. ಇತ್ತಂಡಗಳು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದವು. ಆಯುಧಗಳು ಹೊರ ಬಂದವು. ಯುದ್ಧಕ್ಕಾಗಿ ಮೈದಾನದಲ್ಲಿ ಜಮಾವಣೆಗೊಂಡರು.

ಪ್ರವಾದಿ ಮುಹಮ್ಮದ್(ಸ)ರಿಗೆ ಈ ವಿಷಯದ ಅರಿವಾದಾಗ ತಕ್ಷಣ ಯುದ್ಧಭೂಮಿಯಲ್ಲಿ ಹಾಜರಾದರು. ಎರಡೂ ಕಡೆಯವರನ್ನು ಹತ್ತಿರ ಕರೆಸಿ, ನಾನು ನಿಮ್ಮ ನಡುವೆ ಜೀವಂತವಿದ್ದಾನೆ. ಆದರೆ ನೀವು ಅಜ್ಞಾನದ ಯುಧ್ದವನ್ನು ಮಾಡಲು ಹೊರಟಿದ್ದೀರಿ. ಪ್ರವಾದಿ(ಸ)ರವರ ತಕ್ಷಣದ ಉಪದೇಶದಿಂದ ಇತ್ತಂಡಗಳು ಸಮಾಧಾನಗೊಂಡವು. ಇದು ನಿಜವಾಗಿ ಶೈತಾನನ ಕುಯುಕ್ತಿ ಹಾಗೂ ಯಹೂದಿಯ ತಂತ್ರಗಾರಿಕೆಯಾಗಿತ್ತು. ಕೂಡಲೇ ಎರಡೂ ಕಡೆಯವರು ತೌಬಾ (ಪಶ್ಚಾತ್ತಾಪ) ಮಾಡಿದರು. ಪರಸ್ಪರರು ಆಲಂಗಿಸಿ ಪ್ರವಾದಿ ಮುಹಮ್ಮದ್(ಸ)ರವರ ಜೊತೆಗೂಡಿ ಮುಂದೆ ಸಾಗಿದರು.

[ಮುಂದುವರಿಯುವುದು]