ಸಿಎಎಯಿಂದ ಗಾಂಧೀಜಿಯ ಬಯಕೆ ಈಡೇರಿದೆ- ರಾಷ್ಟ್ರಪತಿ ಕೋವಿಂದ್

0
882

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 31: ಪೌರತ್ವ ತಿದ್ದುಪಡಿ ಕಾನೂನು(ಸಿಎಎ) ಜಾರಿಗೊಳಿಸುವ ಮೂಲಕ ಮಹಾತ್ಮ ಗಾಂಧಿಯ ಬಯಕೆ ಪೂರ್ಣವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು. ಪಾರ್ಲಿಮೆಂಟಿನ ಜಂಟಿ ಅಧಿವೇಶನ ಸಿಎಎಯನ್ನು ಪಾಸು ಮಾಡಿದ್ದರಿಂದ ತಾನು ತೃಪ್ತನಾಗಿರುವೆ ಎಂದು ಅವರು ಹೇಳಿದರು. ಅವರು ಬಜೆಟ್ ಅಧಿವೇಶನದ ನೀತಿ ಘೋಷಣಾ ಭಾಷಣ ಮಾಡುತ್ತಿದ್ದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಆರ್ಟಿಕಲ್ 370, ಆರ್ಟಿಕಲ್ 35ಎಯನ್ನು ಪಾರ್ಲಿಮೆಂಟಿನ ಎರಡು ಸಭೆಗಳು ಬಹುಮತದಿಂದ ರದ್ದುಪಡಿಸಿದ್ದು ಐತಿಹಾಸಿಕ ತೀರ್ಮಾನವಾಗಿದೆ. ಜಮ್ಮು ಕಾಶ್ಮೀರ ಮತ್ತು ಲಡಾಕ್‍ನ ಸಮಾನ ಅಭಿವೃದ್ಧಿಗೆ ಅದು ದಾರಿ ಮಾಡಿಕೊಡಲಿದೆ ಎಂದರು.

ಬಾಬರಿ ಮಸೀದಿ ಜಮೀನು ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟಿನ ತೀರ್ಪಿಗೆ ಪ್ರಜೆಗಳ ಪಕ್ವ ವರ್ತನೆ ಪ್ರಶಂಸನೀಯವಾಗಿದೆ. ಪರಸ್ಪರ ಚರ್ಚೆ ಸಂವಾದಗಳು ಪ್ರಜಾಪ್ರಭುತ್ವವನ್ನು ಹೆಚ್ಚು ಬಲಪಡಿಸುತ್ತದೆ. ಈ ದೃಷ್ಟಿಕೋನ ಸರಕಾರಕ್ಕಿದೆ ಎಂದು ಹೇಳಿದ ರಾಷ್ಟ್ರಪತಿ ಸಿಎಎಯ ಹೆಸರಲ್ಲಿ ನಡೆಯುವ ಯಾವುದೇ ರೀತಿಯ ಅಕ್ರಮವೂ ದೇಶವನ್ನು ದುರ್ಬಲಗೊಳಿಸಲಿದೆ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ವಿಶೇಷ ಮನವಿ ಪ್ರಕಾರ ಸೌದಿ ಅರೇಬಿಯ ಅಭೂತಪೂರ್ವವಾಗಿ ಹಜ್ ಕೋಟಾ ಹೆಚ್ಚಿಸಿದೆ. ಭಾರತದ ಎರಡು ಲಕ್ಷ ಮುಸ್ಲಿಮರಿಗೆ ಈ ಬಾರಿ ಹಜ್ ನಿರ್ವಹಿಸಲು ಸಾಧ್ಯವಾಗಿದೆ. ಹಜ್‍ನ ಎಲ್ಲ ಪ್ರಕ್ರಿಯೆಗಳು ಡಿಜಿಟಲಾಗಿ ಮತ್ತು ಆನ್‍ಲೈನಾಗಿ ನಡೆಸಿದ ಮೊದಲ ದೇಶ ಭಾರತ ಎಂದು ರಾಷ್ಟ್ರಪತಿ ಹೇಳಿದರು. ಬೊಡೊ ಒಪ್ಪಂದ ಸಾಕ್ಷಾತ್ಕಾರವಾಗಿದ್ದು ಈ ಸರಕಾರದ ಸಾಧನೆಯೆಂದು ರಾಷ್ಟ್ರಪತಿ ಹೇಳಿದರು.