ಸಬರ್ಮತಿ ರಿಪೋರ್ಟ್ ಸಿನಿಮಾವನ್ನು ವೀಕ್ಷಿಸಿದ ಪ್ರಧಾನಿ ಮತ್ತು ಸಚಿವ ಸಂಪುಟ: ಬಿಜೆಪಿ ವಾದವನ್ನು ಸಮರ್ಥಿಸುವ ಸಿನಿಮಾ?

0
417

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಸಂಪುಟದ ಇತರ ಸಚಿವರಿಗೆ ಪಾರ್ಲಿಮೆಂಟ್ ಆವರಣದಲ್ಲಿ ಸಬರ್ಮತಿ ರಿಪೋರ್ಟ್ ಎಂಬ ಸಿನಿಮಾವನ್ನು ಪ್ರದರ್ಶಿಸಲಾಗಿದೆ. ಪಾರ್ಲಿಮೆಂಟಿನ ಎರಡೂ ಸದನಗಳ ಸಭೆ ಮುಗಿದ ಬಳಿಕ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. 2002ರ ಗುಜರಾತ್ ಹತ್ಯಾಕಾಂಡಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಗೋದ್ರಾ ಸಬರಮತಿ ರೈಲು ಬೆಂಕಿಗಾಹುತಿಯಾದ ವಿಷಯದಲ್ಲಿ ಬಿಜೆಪಿಯ ನಿಲುವನ್ನು ಈ ಸಿನಿಮಾ ಸಮರ್ಥಿಸುತ್ತದೆ ಎಂದು ಹೇಳಲಾಗಿದೆ.

ಈ ಮೊದಲು ಈ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಮೆಚ್ಚಿಕೊಂಡು ಮಾತಾಡಿದ್ದರು. ಧೀರಜ್ ಸರ್ನ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ ಮತ್ತು ಬಾಲಿವುಡ್ ನಟ ವಿಕ್ರಾಂತ್ ಮಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 29ರಂದು ಈ ಸಿನಿಮಾ ಬಿಡುಗಡೆಗೊಂಡಿತ್ತು.

2002ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿ ಆಗಿದ್ದಾಗ ಗೋಧ್ರಾದಲ್ಲಿ ರೈಲು ಬೆಂಕಿಗಾಹುತಿಯಾಗಿತ್ತು. ಅಯೋಧ್ಯೆಯಿಂದ ಗುಜರಾತಿಗೆ ಮರಳುತ್ತಿದ್ದ 60ರಷ್ಟು ಕರಸೇವಕರು ಈ ರೈಲು ದುರ್ಘಟನೆಯಲ್ಲಿ ಸಾವಿಗೀಡಾಗಿದ್ದರು. ಮುಸ್ಲಿಮರು ಈ ರೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ವಾದಿಸಿದ್ದರು. ಆದರೆ ಅಪಘಾತದಿಂದಾಗಿ ರೈಲಿಗೆ ಬೆಂಕಿ ಹಚ್ಚಿಕೊಂಡಿದೆ ಎಂಬ ವಾದವೂ ಇತ್ತು. ಮನಮೋಹನ್ ಸಿಂಗ್ ಸರಕಾರ ನೇಮಿಸಿದ್ದ ತನಿಖಾ ಸಮಿತಿಯು ಅಪಘಾತದಿಂದಾಗಿ ರೈಲಿಗೆ ಬೆಂಕಿ ಹತ್ತಿಕೊಂಡಿದೆ ಎಂಬ ವಾದವನ್ನು ಸಮರ್ಥಿಸಿತ್ತು.