✍️ ಸಮೀನಾ ಅಫ್ಶಾನ್
ಪ್ರಧಾನ ಸಂಪಾದಕರು, ಔರಾ ಇಂಗ್ಲಿಷ್ ಆನ್ಲೈನ್ ಮ್ಯಾಗಝೀನ್
“ಪ್ರೀತಿಯ ಪ್ರತಿಸ್ಪರ್ಧಿ ದ್ವೇಷವಲ್ಲ, ತಾತ್ಸಾರ.” ಎಲಿ ವೀಸೆಲ್ ಅವರ ಈ ನುಡಿಯು, ಅತ್ಯಂತ ಆಳವಾದ ಮಾನವ ಸಂಬಂಧಗಳು ಪಾರಮ್ಯ ಅಥವಾ ಪೈಪೋಟಿಯಿಂದ ಉಳಿಯುವುದಿಲ್ಲ, ಬದಲಿಗೆ ಸಹಾನುಭೂತಿ ಹಾಗೂ ಪರಸ್ಪರ ಕಾಳಜಿಯಿಂದ ಉಳಿಯುತ್ತವೆ ಎಂದು ನಮಗೆ ನೆನಪಿಸುತ್ತದೆ. ಬಹುಶಃ ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧದ ಕುರಿತಾಗಿಯೂ ಇದೇ ಮಾತು ಅನ್ವಯಿಸುತ್ತದೆ. ಇದು ಸ್ಪರ್ಧೆಯೂ ಅಲ್ಲ ಅಥವಾ ರಾಜಿ ಮಾಡಿಕೊಳ್ಳುವುದೂ ಅಲ್ಲ, ಬದಲಿಗೆ ನಮ್ಮ ಹಂಚಿಕೊಂಡ ಮಾನವೀಯತೆಯಲ್ಲಿ ಬೇರೂರಿದ ಸಹಕಾರವಾಗಿದೆ.
ನಾವು ಗಮನಾರ್ಹ ವಿರೋಧಾಭಾಸಗಳ ಯುಗದಲ್ಲಿ ಜೀವಿಸುತ್ತಿದ್ದೇವೆ. ಹಿಂದೆಂದೂ ಇಲ್ಲದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ತಿಳುವಳಿಕೆ ಗಳಿಸುತ್ತಿದ್ದಾರೆ, ವಿವಿಧ ವೃತ್ತಿಗಳಲ್ಲಿ ಸಹಕರಿಸುತ್ತಿದ್ದಾರೆ ಅಥವಾ ಸಾರ್ವಜನಿಕ ಜೀವನವನ್ನು ರೂಪಿಸುವಲ್ಲಿ ವ್ಯಾಪಕವಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಹಿಳೆಯರು ರಾಷ್ಟ್ರಗಳನ್ನು ಮುನ್ನಡೆಸುತ್ತಿದ್ದಾರೆ, ಕಾರ್ಪೊರೇಟ್ಗಳ ಮುಖ್ಯಸ್ಥರಾಗಿದ್ದಾರೆ, ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ ಮತ್ತು ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಪುರುಷರೂ ಸಹ ಹಿಂದೆ ಸಾಂಪ್ರದಾಯಿಕ ನಿರೀಕ್ಷೆಗಳ ವ್ಯಾಪ್ತಿಯಿಂದ ಹೊರಗಿವೆ ಎಂದು ಪರಿಗಣಿಸಲ್ಪಟ್ಟಿದ್ದ ಪಾತ್ರಗಳನ್ನು ಸ್ವೀಕರಿಸುತ್ತಿದ್ದಾರೆ; ತಂದೆಯಾಗಿ ಹೆಚ್ಚು ತೊಡಗಿಸುಕೊಳ್ಳುತ್ತಿದ್ದಾರೆ, ಆರೈಕೆ ಮಾಡುತ್ತಾರೆ ಮತ್ತು ಕುಟುಂಬ ಜೀವನದಲ್ಲಿ ಪಾಲುದಾರರಾಗುತ್ತಿದ್ದಾರೆ.
ಈ ಪ್ರೋತ್ಸಾಹಕ ಬೆಳವಣಿಗೆಗಳ ಹೊರತಾಗಿಯೂ, ಲಿಂಗದ ಕುರಿತಾದ ಸಂವಾದಗಳು ಹೆಚ್ಚು ವಿವಾದಾತ್ಮಕವಾಗಿವೆ. ಸಾರ್ವಜನಿಕ ಚರ್ಚೆಯು ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರನ್ನು ಮನ್ನಣೆ, ಹಕ್ಕುಗಳು ಮತ್ತು ಪ್ರಭಾವಕ್ಕಾಗಿ ಅಂತ್ಯವಿಲ್ಲದ ಹೋರಾಟದಲ್ಲಿ ತೊಡಗಿರುವ ವಿರೋಧಿಗಳೆಂದು ಚಿತ್ರಿಸುತ್ತದೆ. ಯಾರಿಗೆ ಹೆಚ್ಚಿನ ಪ್ರಭಾವ, ಹೆಚ್ಚಿನ ಸ್ವಾತಂತ್ರ್ಯ ಅಥವಾ ಹೆಚ್ಚಿನ ಅಧಿಕಾರವಿದೆ ಎಂಬುದರ ಮೂಲಕ ಯಶಸ್ಸನ್ನು ಪದೇ ಪದೇ ಅಳೆಯಲಾಗುತ್ತದೆ. ಇದು ನಂಬಿಕೆಯ ಬದಲಿಗೆ ಸಂಶಯವು ಆವರಿಸಿಕೊಳ್ಳುವ ಮತ್ತು ಸಹಕಾರವನ್ನು ಪೈಪೋಟಿಯು ಮರೆಮಾಚುವ ವಾತಾವರಣವನ್ನು ಸೃಷ್ಟಿಸುತ್ತದೆ.
ವಿಶೇಷವಾಗಿ ಅನೇಕ ಯುವತಿಯರಿಗೆ, ಈ ಸಂವಾದಗಳನ್ನು ನಿರ್ವಹಿಸುವುದು ಸುಲಭವಲ್ಲ. ಶಿಕ್ಷಣ, ನಾಯಕತ್ವ ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಮುಂದುವರಿಸಲು ಅವರನ್ನು ಉತ್ತೇಜಿಸಲಾಗುತ್ತದೆ; ವಾಸ್ತವವಾಗಿ ಇವುಗಳು ಇಸ್ಲಾಮ್ ಧರ್ಮವು ಸಂಪೂರ್ಣವಾಗಿ ಬೆಂಬಲಿಸುವ ಆಕಾಂಕ್ಷೆಗಳಾಗಿವೆ. ಆದರೂ ಸ್ತ್ರೀತ್ವವೇ ಪ್ರಶ್ನಾರ್ಹವಾದದ್ದು ಅಥವಾ ಮೀರಿ ನಿಲ್ಲಬೇಕಾದದ್ದು ಎಂದು ಅವರಿಗೆ ಪದೇ ಪದೇ ಹೇಳಲಾಗುತ್ತದೆ. ಸಾಂಪ್ರದಾಯಿಕವಾಗಿ ಪುರುಷರಿಗೆ ಆರೋಪಿಸಲಾದ ಗುಣಗಳನ್ನು ಅಳವಡಿಸಿಕೊಳ್ಳುವುದನ್ನು ಬಲವೆಂದು ಸಮೀಕರಿಸಲಾಗುತ್ತದೆ. ಅಲ್ಲದೇ, ಪೋಷಣೆ, ಸೌಮ್ಯತೆ ಮತ್ತು ಭಾವನಾತ್ಮಕ ವಿವೇಕದಂತಹ ಗುಣಗಳನ್ನು ದೌರ್ಬಲ್ಯದ ಚಿಹ್ನೆಗಳೆಂದು ತಳ್ಳಿಹಾಕಲಾಗುತ್ತದೆ. ಪರಿಣಾಮವಾಗಿ, ಅನೇಕ ಮಹಿಳೆಯರು ಯಶಸ್ಸು ಮತ್ತು ಸ್ತ್ರೀತ್ವದ ನಡುವೆ, ಸಮಾಜಕ್ಕೆ ಕೊಡುಗೆ ನೀಡುವುದು ಮತ್ತು ತಮ್ಮ ಸಹಜ ಅಸ್ಮಿತೆಯನ್ನು ಸ್ವೀಕರಿಸುವುದರ ನಡುವೆ ಯಾವುದಾದರೊಂದು ಆರಿಸಿಕೊಳ್ಳಬೇಕಾದ ಒತ್ತಡವನ್ನು ಅನುಭವಿಸುತ್ತಾರೆ.
ಇಸ್ಲಾಮ್ ಧರ್ಮವು ಸಂಪೂರ್ಣವಾಗಿ ಭಿನ್ನವಾದ ದೃಷ್ಟಿಕೋನವನ್ನು ನೀಡುತ್ತದೆ; ಇದು ಇತಿಹಾಸದುದ್ದಕ್ಕೂ ಮಹಿಳೆಯರು ಎದುರಿಸಿದ ನ್ಯಾಯಸಮ್ಮತ ಹೋರಾಟಗಳನ್ನು ನಿರಾಕರಿಸುವುದಿಲ್ಲ ಅಥವಾ ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧವನ್ನು ಸರ್ವಶ್ರೇಷ್ಠತೆಗಾಗಿ ನಡೆಯುವ ಯುದ್ಧವಾಗಿ ಕುಗ್ಗಿಸುವುದಿಲ್ಲ. ಬದಲಿಗೆ ನ್ಯಾಯ, ಘನತೆ, ಪರಸ್ಪರ ಗೌರವ ಮತ್ತು ಸದುದ್ದೇಶದ ಸಹಭಾಗಿತ್ವದಲ್ಲಿ ಬೇರೂರಿದ ಚೌಕಟ್ಟನ್ನು ಪ್ರಸ್ತುತಪಡಿಸುತ್ತದೆ. ಇಸ್ಲಾಮ್ ಧರ್ಮವು ಯಾರು ಶ್ರೇಷ್ಠರು? ಎಂದು ಕೇಳುವ ಬದಲು, ಹೆಚ್ಚು ಅರ್ಥಪೂರ್ಣವಾದ ಪ್ರಶ್ನೆಯನ್ನು ಕೇಳಲು ನಮ್ಮನ್ನು ಆಹ್ವಾನಿಸುತ್ತದೆ: ಅಲ್ಲಾಹನು ತಮ್ಮನ್ನು ಸೃಷ್ಟಿಸಿರುವ ಉದ್ದೇಶವನ್ನು ಈಡೇರಿಸಲು ಪುರುಷರು ಮತ್ತು ಮಹಿಳೆಯರು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು? ಹೀಗಾಗಿ, ಪೈಪೋಟಿಯಿಂದ ಸಹಕಾರದ ಕಡೆಗಿನ ಈ ಬದಲಾವಣೆಯು ಕೇವಲ ಭಾಷೆಯ ಬದಲಾವಣೆಯಲ್ಲ. ಇದು ವಿಶ್ವದೃಷ್ಟಿಕೋನದಲ್ಲಿ ನಿಜವಾದ ರೂಪಾಂತರವಾಗಿದೆ.
ಏಕರೂಪತೆಯಿಲ್ಲದ ಸಮಾನತೆ
ಸಮಕಾಲೀನ ಲಿಂಗ ಚರ್ಚೆಯಲ್ಲಿನ ಅತಿ ದೊಡ್ಡ ತಪ್ಪುಗ್ರಹಿಕೆಗಳಲ್ಲಿ ಒಂದೆಂದರೆ, ಸಮಾನತೆ ಎಂದರೆ ಸರ್ವತ್ರ ಏಕರೂಪವಾಗಿರಬೇಕು ಎಂಬ ಊಹೆ. ಇಬ್ಬರು ವ್ಯಕ್ತಿಗಳು ಸಮಾನರು ಎಂದರೆ, ಅವರು ಒಂದೇ ರೀತಿ ಯೋಚಿಸಬೇಕು, ಒಂದೇ ರೀತಿ ವರ್ತಿಸಬೇಕು ಮತ್ತು ಒಂದೇ ರೀತಿಯ ಜವಾಬ್ದಾರಿಗಳನ್ನು ಹೊಂದಿರಬೇಕು ಎಂಬ ಕಲ್ಪನೆ ಇದರಲ್ಲಿದೆ. ಯಾವುದೇ ವ್ಯತ್ಯಾಸವಿದ್ದರೂ ಅದನ್ನು ತಕ್ಷಣವೇ ತಾರತಮ್ಯವೆಂದು ವ್ಯಾಖ್ಯಾನಿಸಲಾಗುತ್ತದೆ.
ಕುರ್ಆನ್ ಈ ಊಹೆಯನ್ನು ಹೀಗೆ ಸವಾಲು ಮಾಡುತ್ತದೆ: “ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ.” (49:13)
ಈ ವಚನದಲ್ಲಿ ಮಾನವನ ಘನತೆಯು ಲಿಂಗದಿಂದ ಅಥವಾ ಬೇರೆ ಯಾವುದರಿಂದಲೂ ನಿರ್ಧಾರವಾಗುವುದಿಲ್ಲ. ಬದಲಿಗೆ ದೇವನಿಷ್ಠೆ ಹಾಗೂ ಸಚ್ಚಾರಿತ್ರ್ಯದಿಂದ ನಿರ್ಧಾರವಾಗುತ್ತದೆ. ಪುರುಷರು ಮತ್ತು ಮಹಿಳೆಯರು ತಮ್ಮ ಆಧ್ಯಾತ್ಮಿಕ ಮೌಲ್ಯ, ನೈತಿಕ ಜವಾಬ್ದಾರಿ ಮತ್ತು ಸಂಪ್ರೀತಿಯನ್ನು ಗಳಿಸುವ ಅವಕಾಶದಲ್ಲಿ ತಮ್ಮ ಸೃಷ್ಟಿಕರ್ತನ ಮುಂದೆ ಸಮಾನರಾಗಿ ನಿಲ್ಲುತ್ತಾರೆ.
ಸಮಾನತೆಯು ಎಂದಿಗೂ ವ್ಯತ್ಯಾಸವನ್ನು ಅಳಿಸುವುದಿಲ್ಲ. ದೇವರು ಇಡೀ ವಿಶ್ವದಲ್ಲಿ ವೈವಿಧ್ಯತೆಯನ್ನು ಸೃಷ್ಟಿಸಿದ್ದಾನೆ. ರಾತ್ರಿ ಮತ್ತು ಹಗಲು ಭಿನ್ನವಾಗಿವೆ, ಆದರೂ ಎರಡೂ ಅತ್ಯಾವಶ್ಯಕವಾಗಿವೆ. ಸೂರ್ಯ ಮತ್ತು ಚಂದ್ರರು ಭಿನ್ನ ಪಾತ್ರಗಳನ್ನು ಹೊಂದಿದ್ದಾರೆ, ಆದರೂ ಒಟ್ಟಾಗಿ ಅವು ಜೀವವನ್ನು ಉಳಿಸುತ್ತವೆ. ಅದೇ ರೀತಿಯಲ್ಲಿ, ಪುರುಷರು ಮತ್ತು ಮಹಿಳೆಯರು ಭಿನ್ನವಾದ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಈ ವ್ಯತ್ಯಾಸಗಳು ಸರಿಪಡಿಸಬೇಕಾದ ದೋಷಗಳಲ್ಲ, ಬದಲಿಗೆ ದೈವಿಕ ಯುಕ್ತಿಯ ದೃಷ್ಟಾಂತಗಳಾಗಿವೆ.
ಆದ್ದರಿಂದ ಇಸ್ಲಾಮ್ ಧರ್ಮವು ಎರಡೂ ವಿಪರೀತ ವಾದಗಳನ್ನು ತಿರಸ್ಕರಿಸುತ್ತದೆ: ಮೊದಲನೇಯದು, ಒಂದು ಲಿಂಗಕ್ಕೆ ಮತ್ತೊಂದಕ್ಕಿಂತ ಶ್ರೇಷ್ಠತೆಯನ್ನು ನೀಡುವ ನಿಲುವು; ಇನ್ನೊಂದು, ಇವೆರಡೂ ಒಂದೇ ರೀತಿಯಲ್ಲಿ ಗುರುತಿಸಲಾಗದಂತೆ ಒಂದೇ ಆಗಿರಬೇಕು ಎಂದು ಒತ್ತಾಯಿಸುವ ನಿಲುವು. ಇಸ್ಲಾಮ್ ಸಮಾನವಾದ ಘನತೆಯನ್ನು ಗುರುತಿಸುತ್ತಲೇ ಪರಸ್ಪರ ಪೂರಕವಾದ ಸಾಮರ್ಥ್ಯಗಳನ್ನು ಸಂಭ್ರಮಿಸುತ್ತದೆ.
ವೈರತ್ವದಿಂದ ಸಹಭಾಗಿತ್ವದ ಕಡೆಗೆ
ವೈವಿಧ್ಯತೆಯು ಸಮಸ್ಯೆ ಪರಿಹರಿಸುವಿಕೆಯನ್ನು ಬಲಪಡಿಸುತ್ತದೆ ಎಂದು ಆಧುನಿಕ ಮನೋವಿಜ್ಞಾನವು ಪದೇ ಪದೇ ಗುರುತಿಸುತ್ತಿದೆ. ಭಿನ್ನ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿರುವ ಜನರನ್ನು ಒಳಗೊಂಡ ತಂಡಗಳು, ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವ ತಂಡಕ್ಕಿಂತ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತವೆ. ವೈವಿಧ್ಯತೆಯು ದೃಷ್ಟಿಕೋನವನ್ನು ವಿಸ್ತರಿಸುತ್ತದೆ, ಊಹೆಗಳನ್ನು ಸವಾಲು ಮಾಡುತ್ತದೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ.
ಆಧುನಿಕ ಸಂಸ್ಕೃತಿಗಳು ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಂಧವನ್ನು ಸ್ಪರ್ಧೆಯಂತೆ ರೂಪಿಸುತ್ತವೆ. ಒಂದು ಲಿಂಗದ ಪ್ರತಿಯೊಂದು ಸಾಧನೆಯನ್ನು ಇನ್ನೊಂದರ ನಷ್ಟವಾಗಿ ನೋಡಲಾಗುತ್ತದೆ. ಯಶಸ್ಸು ಸಾಮೂಹಿಕವಾಗಿರುವುದಕ್ಕಿಂತ ತುಲನಾತ್ಮಕವಾಗುತ್ತದೆ. ಈ ಮನೋಭಾವವು ನಿಧಾನವಾಗಿ ಮನೆಗಳು, ವಿವಾಹಗಳು, ಉದ್ಯೋಗ ಸ್ಥಳಗಳು ಮತ್ತು ಸಮುದಾಯಗಳನ್ನು ಆಕ್ರಮಿಸಿಕೊಳ್ಳುತ್ತದೆ. ಆಗ ಸಂವಾದಗಳು ವಾಗ್ವಾದಳಾಗುತ್ತವೆ, ಸಹಕಾರವು ತುಲನೆಗೆ ದಾರಿ ಮಾಡಿಕೊಡುತ್ತದೆ ಮತ್ತು ನಂಬಿಕೆಯ ಜಾಗವನ್ನು ಎಚ್ಚರಿಕೆಯು ಆವರಿಸುತ್ತದೆ.
ಆದ್ದರಿಂದ, ವ್ಯತ್ಯಾಸಗಳಿರುವುದು ಎಂದರೆ ವಿಭಜನೆಯ ಸೂಚನೆಯಲ್ಲ. ಅದು ಸಾಮರಸ್ಯದ ಮೂಲ ಆಗಿರಬಹುದು. ಆದರೆ ಇಂದಿನ ಆಧುನಿಕ ಚರ್ಚೆಗಳು ಆ ಭಿನ್ನತೆಯನ್ನೇ ಅನುಮಾನದ ಕಣ್ಣಿನಿಂದ ನೋಡುತ್ತವೆ; ಸ್ತ್ರೀ-ಪುರುಷರ ನಡುವಿನ ಯಾವುದೇ ವ್ಯತ್ಯಾಸವನ್ನು ಒಪ್ಪಿಕೊಳ್ಳುವುದು ಎಂದರೆ ಸಮಾನತೆಗೆ ಧಕ್ಕೆ ತಂದಂತೆ ಎಂದು ಭಾವಿಸುತ್ತವೆ. ಇದು ದುರದೃಷ್ಟಕರ ತಪ್ಪುಗ್ರಹಿಕೆಯಾಗಿದೆ. ಸಮಾನತೆ ಎನ್ನುವುದು ಘನತೆಯ ಪ್ರಶ್ನೆಯಾದರೆ, ಭಿನ್ನತೆಯು ಬದುಕಿನ ವೈವಿಧ್ಯತೆ ಮತ್ತು ಕಾರ್ಯರೂಪಕ್ಕೆ ಕನ್ನಡಿಯಾಗಿದೆ. ಈ ಎರಡೂ ಪರಿಕಲ್ಪನೆಗಳು ಎಂದಿಗೂ ಪರಸ್ಪರ ವಿರೋಧಿಯಲ್ಲ. ವಾಸ್ತವವಾಗಿ, ಪ್ರತಿಯೊಬ್ಬ ವ್ಯಕ್ತಿಯ ವಿಶೇಷ ಪ್ರತಿಭೆಗಳನ್ನು ಮೆಚ್ಚಿಕೊಳ್ಳುತ್ತಲೇ ಎಲ್ಲ ಮನುಷ್ಯರನ್ನೂ ಸಮಾನವಾಗಿ ಪರಿಗಣಿಸುವುದೇ ಮಾನವ ನಾಗರಿಕತೆಯ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ.
ಕುರ್ಆನ್ ಸಂಪೂರ್ಣವಾಗಿ ಭಿನ್ನವಾದ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಸತ್ಯವಿಶ್ವಾಸ ಹೊಂದಿರುವ ಪುರುಷರು ಮತ್ತು ಮಹಿಳೆಯರ ಕುರಿತು ಮಾತನಾಡುತ್ತಾ, ಅಲ್ಲಾಹನು ಹೀಗೆ ಹೇಳುತ್ತಾನೆ: “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ. ಮತ್ತು ಕೆಡುಕುಗಳಿಂದ ತಡೆಯುತ್ತಾರೆ…” (9:71)
ಕುರ್ಆನಿನ ಪದಬಳಕೆಯು ಗಮನಾರ್ಹವಾಗಿದೆ. ಆಪ್ತರು ಎಂದು ಹೇಳಿದೇ ವಿನಾಃ ವೈರಿಗಳು, ವಿರೋಧಿಗಳು ಮತ್ತು ಸ್ಪರ್ಧಿಗಳು ಎಂದಲ್ಲ.
ಆಪ್ತರು ಇನ್ನೊಬ್ಬರ ಮಿಷನ್ ಅನ್ನು ಬಲಪಡಿಸುತ್ತಾರೆ, ಅದನ್ನು ರಕ್ಷಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ. ಆಪ್ತರು ಇನ್ನೊಬ್ಬರ ಯಶಸ್ಸನ್ನು ಆಚರಿಸುತ್ತಾರೆ ಏಕೆಂದರೆ ಇಬ್ಬರೂ ಒಂದೇ ಗುರಿ ಸಾಧನೆಗೆ ಶ್ರಮಿಸುತ್ತಿರುತ್ತಾರೆ. ಅದುವೇ ಸೃಷ್ಟಿಕರ್ತನ ಸಂಪ್ರೀತಿ ಮತ್ತು ಉತ್ತಮ ಸಮಾಜ.
ಕುರ್ಆನಿನ ಈ ದೃಷ್ಟಿಕೋನವು ಇಡೀ ಚರ್ಚೆಯನ್ನೇ ಬದಲಾಯಿಸುತ್ತದೆ. ಯಾರು ಹೆಚ್ಚಿನ ಅಧಿಕಾರ ಅಥವಾ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂಬುದು ಇನ್ನು ಮುಂದೆ ಪ್ರಶ್ನೆಯಾಗಿರುವುದಿಲ್ಲ, ಬದಲಿಗೆ ದೇವನು ಪ್ರತಿಯೊಬ್ಬರಿಗೂ ನೀಡಿರುವ ಅನುಗ್ರಹಗಳು ಮತ್ತು ಪ್ರತಿಭೆಗಳಿಗೆ ಅನುಗುಣವಾಗಿ ಅವರು ಹೇಗೆ ಕೊಡುಗೆ ನೀಡಬಹುದು ಎಂಬುದೇ ಪ್ರಶ್ನೆಯಾಗಿದೆ.
ಪರಸ್ಪರ ಪೂರಕವಾಗಿರುವುದರ ಸುಂದರವಾದ ಅರ್ಥ
ಪರಸ್ಪರ ಪೂರಕವಾಗಿರುವುದನ್ನು ಕೆಲವೊಮ್ಮೆ ಬೇರೆಯವರ ಮೇಲಿನ ಅವಲಂಬನೆ ಅಥವಾ ಬದುಕಿನ ಮಿತಿಯೆಂದೋ ತಪ್ಪಾಗಿ ಭಾವಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಅದ್ಯಾವುದೂ ಅಲ್ಲ. ಇದು ಜನರನ್ನು ಕಠಿಣವಾದ ಹಳೆಯ ರೂಢಿಗಳಿಗೆ ಕಟ್ಟಿಹಾಕುತ್ತದೆ ಎಂಬ ಆತಂಕವೂ ಕೆಲವರಲ್ಲಿದೆ. ಆದರೆ, ಪರಸ್ಪರ ಪೂರಕತೆಯ ಆಳವನ್ನು ಸರಿಯಾಗಿ ಗ್ರಹಿಸಿದರೆ ಅದರಲ್ಲಿ ಯಾವುದೇ ನಿರ್ಬಂಧಗಳಿಲ್ಲ, ಮೇಲು-ಕೀಳು ಎಂಬ ಶ್ರೇಣಿಯಿಲ್ಲ. ಪ್ರತಿಯೊಬ್ಬರಲ್ಲೂ ಭಿನ್ನವಾದ ಶಕ್ತಿಗಳಿರುತ್ತವೆ ಎಂಬುದನ್ನು ಅದು ಗುರುತಿಸುತ್ತದೆ; ಅಂಥ ವಿಶಿಷ್ಟ ಬಲಗಳು ಒಂದಾದಾಗ, ಒಂಟಿಯಾಗಿ ಸಾಧಿಸಲಾಗದ ಫಲಿತಾಂಶಗಳು ಹೊರಹೊಮ್ಮುತ್ತವೆ.
ಈ ಪರಿಕಲ್ಪನೆಯು ಲಿಂಗ ತತ್ವವನ್ನು ಮೀರಿ ವಿಶಾಲ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ನಾಯಕತ್ವದಲ್ಲಿ ದೂರದೃಷ್ಟಿ ಹೊಂದಿರುವವರಿಗೆ ಅದನ್ನು ಕಾರ್ಯರೂಪಕ್ಕೆ ತರುವವರ ಅಗತ್ಯವಿದೆ. ವೈದ್ಯಕೀಯ ವಲಯದಲ್ಲಿ ವೈದ್ಯರು ನರ್ಸ್ಗಳು, ತಂತ್ರಜ್ಞರು, ಸಂಶೋಧಕರು ಹಾಗೂ ಥೆರಪಿಸ್ಟ್ಗಳನ್ನು ಅವಲಂಬಿಸಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಬೋಧಕರು ಪೋಷಕರು, ಆಡಳಿತ ವರ್ಗ ಮತ್ತು ಸ್ಥಳೀಯ ಸಮುದಾಯಗಳ ಸಹಕಾರವನ್ನು ಅಪೇಕ್ಷಿಸುತ್ತಾರೆ. ಪ್ರತಿಯೊಬ್ಬರೂ ಒಂದೇ ರೀತಿಯ ಪಾತ್ರಗಳನ್ನು ನಿರ್ವಹಿಸುವುದರಿಂದ ಯಾವುದೇ ಅರ್ಥಪೂರ್ಣ ಮಾನವ ಪ್ರಯತ್ನವು ಯಶಸ್ವಿಯಾಗುವುದಿಲ್ಲ. ಪರಸ್ಪರ ಸಹಕಾರದಿಂದ ಮಾತ್ರ ಯಶಸ್ಸು ಮೂಡಿಬರುತ್ತದೆ. ಆದ್ದರಿಂದ ಪೂರಕವಾಗಿರುವುದು ಪರಾವಲಂಬನೆಯನ್ನು ಬಿಟ್ಟು ಪರಸ್ಪರ ಅವಲಂಬನೆಯನ್ನು ಸಂಭ್ರಮಿಸುತ್ತದೆ. ನಿಜವಾದ ಶಕ್ತಿಯು ಸ್ವಯಂಪೂರ್ಣತೆಯಲ್ಲಿರುವುದಕ್ಕಿಂತ ಅರ್ಥಪೂರ್ಣ ಸಹಕಾರದಲ್ಲಿ ಅಡಗಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಮನುಕುಲದ ಪ್ರಗತಿಯು ಕೇವಲ ವೈಯಕ್ತಿಕ ಯಶಸ್ಸಲ್ಲ, ಬದಲಿಗೆ ಅದು ಪರಸ್ಪರ ಸಂಬಂಧಗಳ ಮೇಲೆ ಆಧಾರಿತವಾಗಿದೆ ಎಂಬುದನ್ನು ಈ ದೃಷ್ಟಿಕೋನವು ಸ್ಪಷ್ಟಪಡಿಸುತ್ತದೆ. ನಾವು ಇತರರಿಂದ ಜ್ಞಾನ ಪಡೆದು, ಇತರರನ್ನು ಬೆಂಬಲಿಸಿ ಮತ್ತು ನಮ್ಮ ಮಿತಿಗಳಿರುವ ಕ್ಷೇತ್ರಗಳಲ್ಲಿ ಇತರರ ಸಹಾಯದಿಂದ ಬಲಗೊಳ್ಳುವುದರ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೇವೆ. ಪುರುಷ ಮತ್ತು ಮಹಿಳೆಯರ ನಡುವಿನ ಸಂಬಂಧದ ವಿಷಯದಲ್ಲೂ ಇದೇ ಸತ್ಯವು ಅನ್ವಯವಾಗುತ್ತದೆ.
ಬಡತನ, ಪರಿಸರ ನಾಶ, ಹಿಂಸಾಚಾರ, ಅನಕ್ಷರತೆ, ಮಾನಸಿಕ ಆರೋಗ್ಯ ಮತ್ತು ಅನ್ಯಾಯದಂತಹ ಸವಾಲುಗಳನ್ನು ಕೇವಲ ಒಂದು ಲಿಂಗದಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಇವುಗಳಿಗೆ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಆದ್ದರಿಂದ ಲಿಂಗದ ಕುರಿತಾದ ಸಂವಾದಗಳು “ಯಾರಿಗೆ ಹೆಚ್ಚು ಹಕ್ಕುಗಳಿವೆ?” ಎಂಬುದರಿಂದ “ನಾವು ಒಟ್ಟಾಗಿ ಮಾನವೀಯತೆಗೆ ಹೇಗೆ ಉತ್ತಮವಾಗಿ ಸೇವೆ ಸಲ್ಲಿಸಬಹುದು?” ಎಂಬುದರ ಕಡೆಗೆ ಸಾಗಬೇಕು.
ನಾವು ಯಾರೆಂಬುದರ ಒಂದು ಭಾಗವನ್ನು ಲಿಂಗವು ರೂಪಿಸುತ್ತದೆಯಾದರೂ, ಅದು ನಮ್ಮ ಸಂಪೂರ್ಣ ಅಸ್ಮಿತೆಯಲ್ಲ. ಜನರು ಕಲಿಯುವವರು, ವೃತ್ತಿಪರರು, ಕಲಾವಿದರು, ಆರೈಕೆ ಮಾಡುವವರು, ಚಿಂತಕರು, ಸ್ವಯಂಸೇವಕರು, ನಾಗರಿಕರು ಮತ್ತು ವಿಶ್ವಾಸಿಗಳೂ ಆಗಿದ್ದಾರೆ. ಪ್ರತಿಯೊಂದು ಮಾತುಕತೆಯನ್ನು ಕೇವಲ ಲಿಂಗಕ್ಕೆ ಕುಗ್ಗಿಸುವುದರಿಂದ ನಾವು ಪರಸ್ಪರ ಸಂಧಿಸಬಹುದಾದ ಮತ್ತು ಸಹಕರಿಸಬಹುದಾದ ಅನೇಕ ಮಾರ್ಗಗಳು ಮರೆಯಾಗುತ್ತದೆ.
ಸ್ತ್ರೀತ್ವ: ಒಂದು ದೈವಿಕ ಕೊಡುಗೆ, ಮಿತಿಯಲ್ಲ
ಸಮಕಾಲೀನ ಲಿಂಗ ಚರ್ಚೆಗಳು ಹುಟ್ಟುಹಾಕಿರುವ ಪ್ರಮುಖ ಅಡ್ಡಪರಿಣಾಮವೆಂದರೆ ಸ್ತ್ರೀತ್ವದ ಮೌಲ್ಯವು ನಿಧಾನವಾಗಿ ಕುಸಿಯುತ್ತಿರುವುದು. ಸಹಾನುಭೂತಿ, ಕೋಮಲತೆ, ತಾಳ್ಮೆ ಮತ್ತು ಕಾಳಜಿಯಂತಹ ಗುಣಗಳನ್ನು ಇಂದು ವೃತ್ತಿಪರ ಯಶಸ್ಸಿಗೆ ದೊಡ್ಡ ಅಡೆತಡೆಯೆಂದು ಬಿಂಬಿಸುವ ಪ್ರವೃತ್ತಿ ಹೆಚ್ಚಾಗಿದೆ.
ಪ್ರವಾದಿ ಮುಹಮ್ಮದ್(ಸ) ರವರನ್ನು ಇಡೀ ಮಾನವಕುಲಕ್ಕೆ ಕಾರುಣ್ಯ ಎಂದು ಬಣ್ಣಿಸಲಾಗಿದೆ. ಕರುಣೆಯೇ ಅವರ ನಾಯಕತ್ವದ ಮುಖ್ಯ ಲಕ್ಷಣವಾಗಿತ್ತು. ಮಕ್ಕಳ ಜತೆಗಿನ ಅವರ ಒಡನಾಟ, ಕುಟುಂಬದವರೊಂದಿಗೆ ಅವರು ತೋರಿದ ಸಂಯಮ, ತಮಗೆ ಅನ್ಯಾಯ ಮಾಡಿದವರ ಕಡೆಗೆ ಅವರು ಪ್ರದರ್ಶಿಸಿದ ಸೌಮ್ಯತೆ ಹಾಗೂ ಅವರು ತೋರಿದದ ಭಾವನಾತ್ಮಕ ಮುಕ್ತತೆ – ಇದು ಸಹಾನುಭೂತಿಯೆಂಬುದು ದೌರ್ಬಲ್ಯವಲ್ಲ ಉದಾತ್ತವಾದ ಶಕ್ತಿ ಎಂಬುದನ್ನು ನಿರೂಪಿಸಿತು. ಸಾಂಪ್ರದಾಯಿಕವಾಗಿ ಸ್ತ್ರೀತ್ವಕ್ಕೆ ಆರೋಪಿಸಲಾಗುವ ಅನೇಕ ಗುಣಗಳು ವಾಸ್ತವವಾಗಿ ಪ್ರವಾದಿಯವರ ಗುಣಗಳೇ ಆಗಿವೆ.
ಅದೇ ರೀತಿಯಲ್ಲಿ, ಇಸ್ಲಾಮ್ ಧರ್ಮದಲ್ಲಿ ತಾಯ್ತನವು ಅಸಾಧಾರಣ ಗೌರವದ ಸ್ಥಾನವನ್ನು ಹೊಂದಿದೆ. ಮಹಿಳೆಯರು ಅದಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದಲ್ಲ, ಬದಲಿಗೆ ಇನ್ನೊಂದು ಮಾನವ ಜೀವಿಯನ್ನು ಪೋಷಿಸುವುದು ದೇವನು ಒಪ್ಪಿಸಿರುವ ಅತ್ಯಂತ ಉದಾತ್ತ ಜವಾಬ್ದಾರಿಗಳಲ್ಲಿ ಒಂದಾಗಿದೆ.
ಆದ್ದರಿಂದ, ಮಹಿಳೆಯು ತಾಯಿಯಾಗಬಹುದು, ವಿದ್ವಾಂಸಳಾಗಬಹುದು, ಉದ್ಯಮಿಯಾಗಬಹುದು, ಶಿಕ್ಷಕಿಯಾಗಬಹುದು, ವೈದ್ಯೆಯಾಗಬಹುದು, ಸಮಾಜ ಸೇವಕಿಯಾಗಬಹುದು, ಲೇಖಕಿಯಾಗಬಹುದು ಅಥವಾ ಸಮೂಹದ ನಾಯಕಿಯಾಗಬಹುದು. ಆಕೆಯ ಕೊಡುಗೆಯನ್ನು ಪೂರ್ವಗ್ರಹ ಪೀಡಿತ ರೂಢಿಗಳಿಂದ ನಿರ್ಧಾರ ಮಾಡಲಾಗುವುದಿಲ್ಲ. ಬದಲಿಗೆ, ಆಕೆಯ ಸಾಮರ್ಥ್ಯ, ಪರಿಸ್ಥಿತಿ ಮತ್ತು ಉದ್ದೇಶಗಳಿಂದ ನಿರ್ಧಾರವಾಗುತ್ತದೆ. ವಾಸ್ತವದಲ್ಲಿ, ಸ್ತ್ರೀತ್ವ ಮತ್ತು ಶ್ರೇಷ್ಠತೆಯು ಪರಸ್ಪರ ವಿರೋಧಿಯಲ್ಲ.
ಒಂದು ಉತ್ತಮ ಸಂವಾದದ ಕಡೆಗೆ
ಬಹುಶಃ ಇಂದಿನ ಯುವಜನತೆ ಎದುರಿಸುತ್ತಿರುವ ಪ್ರಮುಖ ಸವಾಲು ವೃತ್ತಿ ಮತ್ತು ಕುಟುಂಬ, ಅಥವಾ ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಆಯ್ಕೆಯಲ್ಲ. ಬದಲಿಗೆ, ಯಾರದ್ದೋ ಪ್ರಚೋದನೆಗೆ ಒಳಗಾಗದೆ ತನ್ನದೇ ಆದ ಅಪ್ಪಟ ಅಸ್ತಿತ್ವವನ್ನು ಕಂಡುಕೊಳ್ಳುವುದಾಗಿದೆ. ನಮ್ಮ ಸ್ವಂತದ ಕುರಿತಾದ ಅರಿವು ಅನ್ಯರ ವಿರೋಧದ ಮೇಲೆ ಮಾತ್ರ ನಿಂತಿದ್ದರೆ, ನಾವು ಎಂದೆಂದಿಗೂ ಸಂಘರ್ಷದ ಸುಳಿಯಲ್ಲೇ ಬಂಧಿಯಾಗಿರುತ್ತೇವೆ. ಆರೋಗ್ಯಕರ ಅಸ್ಮಿತೆಯು ಹೋಲಿಕೆಯಿಂದಲ್ಲ, ಸ್ಪಷ್ಟ ಉದ್ದೇಶದಿಂದ ರೂಪುಗೊಳ್ಳುತ್ತದೆ.
ಇಂದು ನಮ್ಮ ಜಗತ್ತಿಗೆ ಅತಿಯಾಗಿ ಬೇಕಿರುವುದು ಮತ್ತೊಂದು ಸೈದ್ಧಾಂತಿಕ ಯುದ್ಧವಲ್ಲ, ಹೊಸ ಸಂವಾದವಾಗಿದೆ. ಈ ಮಾತುಕತೆಯು ಕೋಪಕ್ಕಿಂತ ವಿವೇಕದಲ್ಲಿ, ಪೈಪೋಟಿಗಿಂತ ಸಹಭಾಗಿತ್ವದಲ್ಲಿ ಮತ್ತು ಪಾರಮ್ಯಕ್ಕಿಂತ ಉದ್ದೇಶದಲ್ಲಿ ಬೇರೂರಿರಬೇಕು. ವಾಸ್ತವದಲ್ಲಿ ಪವಿತ್ರ ಕುರ್ಆನ್ ಸತ್ಯವಿಶ್ವಾಸವಿರಿಸಿರುವ ಸ್ತ್ರೀ ಮತ್ತು ಪುರುಷರನ್ನು ನ್ಯಾಯವನ್ನು ಸ್ಥಾಪಿಸುವಲ್ಲಿ, ಒಳಿತನ್ನು ಉತ್ತೇಜಿಸುವಲ್ಲಿ, ಮಾನವೀಯತೆಗೆ ಸೇವೆ ಸಲ್ಲಿಸುವಲ್ಲಿ ಮತ್ತು ದೇವನನ್ನು ಆರಾಧಿಸುವಲ್ಲಿ ಜೊತೆಜೊತೆಯಾಗಿ ಕೆಲಸ ಮಾಡಲು ಆಹ್ವಾನ ನೀಡುತ್ತದೆ. ಈ ಸಂಬಂಧವನ್ನು ಪೈಪೋಟಿಯಿಂದಲ್ಲ, ಸಹಕಾರದಿಂದ ವ್ಯಾಖ್ಯಾನಿಸಲಾಗಿದೆ.
ಸ್ತ್ರೀ-ಪುರುಷರ ನಡುವೆ ಪರಸ್ಪರ ಅಪನಂಬಿಕೆ ಇರುವ ಸಮಾಜಗಳಿಗೆ ಭವಿಷ್ಯವಿಲ್ಲ. ಬದಲಾಗಿ, ತಾವು ಪ್ರಾಮುಖ್ಯತೆಗಾಗಿ ಸ್ಪರ್ಧಿಸಲು ಹುಟ್ಟಿಲ್ಲ, ಸಮಾಜದ ಹಂಚಿಕೊಂಡ ನೈತಿಕ ಧ್ಯೇಯವನ್ನು ಈಡೇರಿಸುವಲ್ಲಿ ಪರಸ್ಪರ ಪೂರಕವಾಗಿರಲು ಸೃಷ್ಟಿಯಾಗಿದ್ದೇವೆ ಎಂಬುದನ್ನು ಮನಗಾಣುವ ಸಮೂಹಕ್ಕೆ ಭವಿಷ್ಯವು ಒಲಿಯುತ್ತದೆ.
ಆದ್ದರಿಂದ, ಸ್ತ್ರೀತ್ವವನ್ನು ಸ್ವೀಕರಿಸುವುದೆಂದರೆ ಸಮಾಜದಿಂದ ಹಿಂದೆ ಸರಿಯುವುದೂ ಅಲ್ಲ ಮತ್ತು ಒಬ್ಬರ ಆಕಾಂಕ್ಷೆಗಳನ್ನು ಕೈಬಿಡುವುದೂ ಅಲ್ಲ. ಇದು ಅಲ್ಲಾಹನು ಪ್ರೀತಿಯಿಂದ ಅನುಗ್ರಹಿಸಿರುವ ಅಸ್ಮಿತೆಯನ್ನು ಸ್ವೀಕರಿಸುವುದು, ಒಬ್ಬರ ಅನನ್ಯ ಸಾಮರ್ಥ್ಯಗಳನ್ನು ಬೆಳೆಸುವುದು ಮತ್ತು ಬೇರೊಬ್ಬರನ್ನು ಅನುಕರಿಸದೆ ಜಗತ್ತಿಗೆ ಆತ್ಮವಿಶ್ವಾಸದಿಂದ ಕೊಡುಗೆ ನೀಡುವುದು. ಪುರುಷರು ಮತ್ತು ಮಹಿಳೆಯರು ಪರಸ್ಪರರನ್ನು ವೈರಿಗಳಂತೆ ಅಲ್ಲ, ಸಹಭಾಗಿಗಳಂತೆ ನೋಡಿದಾಗ, ಕುಟುಂಬಗಳು ಬಲಗೊಳ್ಳುತ್ತವೆ, ಸಮುದಾಯಗಳು ಆರೋಗ್ಯಕರವಾಗುತ್ತವೆ ಮತ್ತು ಸಮಾಜಗಳು ಹೆಚ್ಚು ಸಹಾನುಭೂತಿಯುಳ್ಳದ್ದಾಗುತ್ತದೆ. ನ್ಯಾಯವು ಎಂದಿಗೂ ಕಾರುಣ್ಯದಿಂದ ಬೇರ್ಪಡದಂತೆ ಇರಬೇಕು, ಘನತೆಯು ಎಲ್ಲರಿಂದಿಗೂ ಹಂಚಿಕೊಳ್ಳಲ್ಪಡಬೇಕು ಮತ್ತು ಬಲವು ಪ್ರಾಬಲ್ಯದಿಂದ ಅಲ್ಲ, ಸಚ್ಚಾರಿತ್ರ್ಯದಿಂದ ಅಳೆಯಲ್ಪಡಬೇಕು.
ಪ್ರಾಯಶಃ ಯಾರು ಮುಂದೆ ನಿಂತಿದ್ದಾರೆ ಎಂದು ಕೇಳುವುದನ್ನು ಮೀರಿ, ನಾವು ಒಟ್ಟಾಗಿ ಹೇಗೆ ನಡೆಯಬಹುದು ಎಂದು ಕೇಳುವ ಸಮಯ ಬಂದಿದೆ. ಅದಕ್ಕಾಗಿ ನಾವು ಪೈಪೋಟಿಯಿಂದ ಸಹಭಾಗಿತ್ವದೆಡೆಗೆ, ಸಂಘರ್ಷದಿಂದ ಸಹಕಾರದೆಡೆಗೆ ಮತ್ತು ಸ್ವಾರ್ಥಪರ ಮಹತ್ವಾಕಾಂಕ್ಷೆಯಿಂದ ಸೃಷ್ಟಿಕರ್ತನ ಸಂಪ್ರೀತಿಯನ್ನು ಒಟ್ಟಾಗಿ ಹುಡುಕುವ ಪ್ರಯಾಣವನ್ನು ಕೈಗೊಳ್ಳಬೇಕಾಗಿದೆ.












