ದುಷ್ಕರ್ಮಿಗಳ ಕೈಯಿಂದ ಹಿಂದೂ ಧರ್ಮವನ್ನು ರಕ್ಷಿಸಿ

0
473

ಸನ್ಮಾರ್ಗ ಸಂಪಾದಕೀಯ

ಹಿಂದೂ ಧರ್ಮ ಪ್ರತಿಪಾದಿಸುವ ಸಹಿಷ್ಣುತೆ ಮತ್ತು ಉದಾರವಾದಿ ಮೌಲ್ಯಕ್ಕೆ ಅವಮಾನ ಆಗುವಂಥ ಕೃತ್ಯಗಳು ಈ ಬಾರಿಯ ಕ್ರಿಸ್ಮಸ್ ಆಚರಣೆಯ ವೇಳೆ ನಡೆದಿವೆ. ಅದೇವೇಳೆ, ಕುರ್‌ಆನನ್ನೇ ಸಂವಿಧಾನವಾಗಿ ಒಪ್ಪಿಕೊಂಡಿರುವ ಯುಎಇ ಸಹಿತ ಅರಬ್ ರಾಷ್ಟ್ರಗಳಲ್ಲಿ ಕ್ರಿಸ್ಮಸ್ ಆಚರಣೆಗಳು ಯಾವುದೇ ಅಡೆತಡೆ ಇಲ್ಲದೇ ಅದ್ಧೂರಿಯಾಗಿ ನಡೆದಿವೆ. ಕ್ರಿಸ್ಮಸ್ ಹಬ್ಬ ಕೊನೆಗೊಂಡಿರುವ ಈ ಹೊತ್ತಿನಲ್ಲಿ ಈ ಎರಡನ್ನೂ ತುಲನೆ ಮಾಡಿ ವಿಶ್ಲೇಷಣೆ ನಡೆಸುವುದು ಸಂದರ್ಭೋಚಿತವಾಗಿದೆ.

ಈ ಬಾರಿಯ ಕ್ರಿಸ್ಮಸ್ ಹಬ್ಬವು ಭಾರತೀಯ ಕ್ರೈಸ್ತರ ಪಾಲಿಗೆ ಕರಾಳವಾಗಿರುವುದರಲ್ಲಿ ಸಂಶಯವಿಲ್ಲ. ಹಬ್ಬದ ಸಡಗರದ ದಿನಗಳನ್ನು ಧರ್ಮದ್ವೇಷಿಗಳು ಸೂತಕದ ದಿನಗಳನ್ನಾಗಿ ಮಾರ್ಪಡಿಸಿದ್ದಾರೆ. ಬೆಂಗಳೂರಿನಿಂದ ಹಿಡಿದು ಅಸ್ಸಾಮ್‌ವರೆಗೆ ಮತ್ತು ಕೇರಳದಿಂದ ತೊಡಗಿ ಮಧ್ಯಪ್ರದೇಶದವರೆಗೆ ಎಲ್ಲಡೆ ಕ್ರಿಸ್ಮಸ್ ಆಚರಣೆಯ ಮೇಲೆ ದಾಳಿಗಳು ನಡೆದಿವೆ. ಕೇರಳದಲ್ಲಿ ಕ್ರಿಸ್ಮಸ್ ಹಾಡಿನೊಂದಿಗೆ ಸಾಗುತ್ತಿದ್ದ ಪುಟ್ಟ ಮಕ್ಕಳ ತಂಡದ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದವರೆಲ್ಲ ಬಿಜೆಪಿ ಕಾರ್ಯಕರ್ತರು ಎಂದು ಅಲ್ಲಿನ ಸಚಿವರೇ ಹೇಳಿದ್ದಾರೆ.

ದೆಹಲಿ, ಮಧ್ಯಪ್ರದೇಶ, ಅಸ್ಸಾಮ್, ಕರ್ನಾಟಕ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಕ್ರಿಸ್ಮಸ್ ವಿರೋಧಿ ಅಸಹಿಷ್ಣುತೆಯ ಘಟನೆಗಳು ಹತ್ತು ಹಲವು ನಡೆದಿವೆ. ಕ್ರಿಸ್ಮಸ್ ಆಚರಣೆಗಾಗಿ ಹಾಕಲಾಗಿದ್ದ ಪೆಂಡಾಲ್‌ಗಳನ್ನು ಧ್ವಂಸ ಮಾಡಲಾಗಿದೆ. ಕ್ರಿಸ್ಮಸ್ ಪ್ರಯುಕ್ತ ಮಾರಾಟಕ್ಕೆ ಇಡಲಾಗಿದ್ದ ವಸ್ತುಗಳನ್ನು ಧ್ವಂಸ ಮಾಡಲಾಗಿದೆ. ಮಾರಾಟಗಾರರನ್ನು ಬೆದರಿಸಲಾಗಿದೆ, ಥಳಿಸಲಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಯೋಜಿಸಲಾದ ಕಾರ್ಯಕ್ರಮಗಳನ್ನು ಕ್ಷಣಾರ್ಧದಲ್ಲಿ ಶೋಕತಪ್ತವನ್ನಾಗಿ ಮಾಡಲಾಗಿದೆ. ಇಂಥ ಗೂಂಡಾ ಕೃತ್ಯದಲ್ಲಿ ಭಾಗಿಯಾದವರೆಲ್ಲ ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವ ಮತ್ತು ಹಿಂದೂ ಧರ್ಮದ ನಿಜ ಅನುಯಾಯಿಗಳಂತೆ ವರ್ತಿಸುವವರು ಎಂಬುದಕ್ಕೆ ಸಾಕ್ಷ್ಯಗಳ ಅಗತ್ಯವಿಲ್ಲ. ಆದ್ದರಿಂದಲೇ, ಅರಬ್ ರಾಷ್ಟ್ರಗಳಲ್ಲಿ ನಿರಾತಂಕವಾಗಿ ನಡೆದಿರುವ ಕ್ರಿಸ್ಮಸ್ ಆಚರಣೆ ಇಲ್ಲಿ ಉಲ್ಲೇಖಕ್ಕೆ ಅರ್ಹವಾಗಿದೆ. ಈ ಉಲ್ಲೇಖನಕ್ಕೆ ಎರಡು ಕಾರಣಗಳಿವೆ. 1. ಅಲ್ಲಿನ ಸಂವಿಧಾನ, 2. ಅಲ್ಲಿ ಭಾರೀ ಸಂಖ್ಯೆಯಲ್ಲಿರುವ ಭಾರತೀಯರು.

ಭಾರತದಲ್ಲಿ ಕ್ರಿಸ್ಮಸ್ ಆಚರಣೆ ವಿರುದ್ಧ ದಾಳಿ ನಡೆಸಿದವರು ಮತ್ತು ಅವರನ್ನು ಪ್ರತಿನಿಧಿಸುವ ರಾಜಕೀಯ ಪಕ್ಷದ ನಾಯಕರು ಆಗಾಗ ಪವಿತ್ರ ಕುರ್‌ಆನನ್ನು ಅಸಹಿಷ್ಣು ಎಂದು ಆರೋಪಿಸುವುದಿದೆ. ಇತರ ಧರ್ಮವನ್ನು ಮತ್ತು ಅವುಗಳ ಆಚರಣೆಗಳನ್ನು ಕುರ್‌ಆನ್ ಸಹಿಸುವುದಿಲ್ಲ ಎಂದು ದೂರುವುದಿದೆ. ಕುರ್‌ಆನಿನ ಇಂತಿಂಥ ವಚನಗಳು ಸಾಮಾಜಿಕ ಸೌಹಾರ್ದಕ್ಕೆ ವಿರುದ್ಧ ಎಂದು ಆಕ್ಷೇಪಿಸುವುದಿದೆ.

ಕ್ರಿಸ್ಮಸ್ ಆಚರಣೆಗಿಂತ ವಾರಗಳ ಮೊದಲು ರಾಜ್ಯ ಶಾಸನ ಸಭೆಗಳಲ್ಲಿ ಮಂಡಿಸಲಾದ ದ್ವೇಷ ಭಾಷಣ ವಿರೋಧಿ ಮಸೂದೆಯ' ಮೇಲಿನ ಚರ್ಚೆಯ ಸಂದರ್ಭದಲ್ಲೂ ಕುರ್‌ಆನ್ ದ್ವೇಷಕ್ಕೆ ಪ್ರಚೋದಿಸುತ್ತದೆ ಎಂದು ಬಿಜೆಪಿಯ ನಾಯಕರು ಹೇಳಿದರು. ಕುರ್‌ಆನ್ ಮೇಲೆ ಕ್ರಮ ಕೈಗೊಳ್ಳುತ್ತೀರಾ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದಾಗಿ ಒಂದೇ ವಾರದೊಳಗೆ ಅವರದೇ ಪಕ್ಷದ ಬೆಂಬಲಿಗರೆಂದು ಗುರುತಿಸಿಕೊಂಡವರು ದೇಶಾದ್ಯಾಂತ ಕ್ರೈಸ್ತರ ವಿರುದ್ಧ ಅಸಹಿಷ್ಣುತೆಯಿಂದ ನಡೆದುಕೊಂಡರು. ಇದೇವೇಳೆ, ಪವಿತ್ರ ಕುರ್‌ಆನನ್ನು ಸಂವಿಧಾನವೆಂದು ಒಪ್ಪಿಕೊಂಡಿರುವ ದುಬೈ ಸಹಿತ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರೂ ಸೇರಿ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಬಂದಿರುವ ಕ್ರೈಸ್ತರು ಅತ್ಯಂತ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು.

ದುಬೈಯಂತೂ ಕ್ರಿಸ್ಮಸ್ ಆಚರಣೆಗೆ ಎಲ್ಲ ಸೌಲಭ್ಯವನ್ನೂ ಒದಗಿಸಿಕೊಟ್ಟಿತು. ದುಬೈ ಆಡಳಿತದಿಂದಾಗಲಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮರಿಂದಾಗಿ ಒಂದೇ ಒಂದು ಅಸಹಿಷ್ಣುತೆಯ ಪ್ರಕರಣವೂ ನಡೆಯಲಿಲ್ಲ. ಇದರ ಬದಲು ಯುಎಇಯ ಅತಿ ದೊಡ್ಡ ಚರ್ಚ್ ಎಂದೇ ಗುರುತಿಸಿಕೊಂಡಿರುವ ಊದ್ ಮೆತಾಯಿಯಲ್ಲಿನ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಿಸಲಾಯಿತು.

ಈ ಚರ್ಚ್‌ನಲ್ಲಿ ಜಗತ್ತಿನ ಪ್ರಮುಖ 16 ಭಾಷೆಗಳಲ್ಲಿ ಕ್ರೈಸ್ತ ಪ್ರಾರ್ಥನಾ ಗೀತೆಯನ್ನು ಹಾಡಲಾಯಿತು. ದುಬೈಯ ಸೈಂಟ್ ಫ್ರಾನ್ಸಿನಸ್ ಆಫ್ ಅಝೀಝ್ ಕ್ಯಾಥೋಲಿಕ್ ಚರ್ಚ್ ಸಹಿತ ಹತ್ತು ಹಲವು ಚರ್ಚ್‌ಗಳಲ್ಲಿ ಭರ್ಜರಿಯಾಗಿ ಕ್ರಿಸ್ಮಸ್ ಆಚರಿಸಲಾಯಿತು. ಒಂದುಕಡೆ, ಪವಿತ್ರ ಕುರ್‌ಆನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮತ್ತು ಕುರ್‌ಆನಿನ ವಚನಗಳನ್ನು ಸಂದರ್ಭ- ಸನ್ನಿವೇಶಗಳಿಂದ ತುಂಡರಿಸಿ ಉಲ್ಲೇಖಿಸುವ ಮೂಲಕ ಅಪಾಯಕಾರಿಯಾಗಿ ಬಿಂಬಿಸುವ ವ್ಯವಸ್ಥಿತ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿವೆ.

ಇನ್ನೊಂದು ಕಡೆ, ಮುಸ್ಲಿಮರ ಮೇಲೆ ದಾಳಿಗೆ ಪ್ರಚೋದಿಸಲಾಗುತ್ತಿದೆ. ಪ್ರಭುತ್ವದ ನೇರ ಬೆಂಬಲವೂ ಇವಕ್ಕೆ ಸಿಗುತ್ತಿರುವುದರಿಂದ ಅಪಪ್ರಚಾರವನ್ನು ತಡೆಯುವುದು ಕಷ್ಟ ಸಾಧ್ಯ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಕುರ್‌ಆನನ್ನೇ ಸಂವಿಧಾನವಾಗಿ ಒಪ್ಪಿಕೊಂಡಿರುವ ಅರಬ್ ರಾಷ್ಟ್ರಗಳ ವರ್ತನೆ ಮುಖ್ಯವಾಗುತ್ತದೆ. ಒಂದುವೇಳೆ, ಕುರ್‌ಆನ್ ಅಸಹಿಷ್ಣು ಆಗಿದ್ದಿದ್ದರೆ ಮತ್ತು ಇತರ ಧರ್ಮಗಳ ಆಚರಣೆಗಳ ವಿರೋಧಿ ಆಗಿದ್ದಿದ್ದರೆ, ಅರಬ್ ರಾಷ್ಟ್ರಗಳಲ್ಲಿ ಇದು ಪ್ರತ್ಯಕ್ಷ ಅನುಭವಕ್ಕೆ ಬರಬೇಕಿತ್ತು.

ಕ್ರಿಸ್ಮಸ್ ಆಚರಣೆಗೆ ಅಲ್ಲಿ ಅವಕಾಶ ನೀಡದೇ ಇರಬೇಕಿತ್ತು. ಕೇವಲ, ಅರಬ್ ರಾಷ್ಟ್ರಗಳು ಮಾತ್ರವಲ್ಲ, ಜಗತ್ತಿನಲ್ಲಿಯೇ ಅತ್ಯಧಿಕ ಮುಸ್ಲಿಮರಿರುವ ಇಂಡೋನೇಶ್ಯಾದಲ್ಲೂ ಕ್ರಿಸ್ಮಸ್ ಆಚರಣೆ ಭರ್ಜರಿಯಾಗಿಯೇ ನಡೆದಿದೆ. ಅಲ್ಲಿ ಕ್ರೈಸ್ತರ ಮೇಲೆ ಯಾವ ದಾಳಿಯೂ ನಡೆದಿಲ್ಲ. ಕ್ರಿಸ್ಮಸ್ ಪೆಂಡಾಲ್‌ಗಳನ್ನು ಒಡೆಯುವ ಮತ್ತು ಧಾರ್ಮಿಕ ಸಂಕೇತಗಳಿಗೆ ಹಾನಿ ಮಾಡುವ ಒಂದೇ ಒಂದು ಪ್ರಕರಣವೂ ನಡೆದಿಲ್ಲ. ಹೀಗಿರುವಾಗ, ನಿಜಕ್ಕೂ ಅಸಹಿಷ್ಣುವಾಗಿರುವುದು ಯಾವುದು ಎಂಬ ಪ್ರಶ್ನೆಯೊಂದು ಮುನ್ನೆಲೆಗೆ ಬಂದೇ ಬರುತ್ತದೆ. ನಿಜ ಏನೆಂದರೆ, ಈ ದೇಶದಲ್ಲಿ ಹಿಂದೂ ಧರ್ಮದ ರಕ್ಷಣೆ ಎಂಬ ಹೆಸರಲ್ಲಿ ನಡೆಯುತ್ತಿರುವುದು ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಹಿತಾಸಕ್ತಿಯ ರಕ್ಷಣೆಯ ಕೆಲಸವೇ ಹೊರತು ಬೇರೇನಲ್ಲ. ಹಿಂದೂ ಧರ್ಮವನ್ನು ಅನಾಮತ್ತಾಗಿ ರಾಜಕೀಯ ಪಕ್ಷವೊಂದರ ಸುಪರ್ದಿಗೆ ಕೊಟ್ಟು ಬಿಡಲಾಗಿದೆ.

ಹಿಂದೂ ಧರ್ಮಕ್ಕೆ ಆ ಪಕ್ಷ ಕೊಡುತ್ತಿರುವ ವ್ಯಾಖ್ಯಾನವನ್ನೇಅಧಿಕೃತ’ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಪವಿತ್ರ ಕುರ್‌ಆನನ್ನು ಹಿಂದೂ ವಿರೋಧೀಯಂತೆ ಮತ್ತು ಮುಸ್ಲಿಮರನ್ನು ದೇಶದ್ರೋಹಿಗಳಂತೆ ಬಿಂಬಿಸುವುದರಿಂದ ರಾಜಕೀಯ ಅಧಿಕಾರವನ್ನು ಸದಾ ಕಾಲ ತನ್ನ ಬಳಿಯೇ ಉಳಿಸಿಕೊಳ್ಳಬಹುದು ಎಂದು ಆ ಪಕ್ಷ ಭಾವಿಸಿದೆ. ಜೊತೆಗೇ ಕ್ರೈಸ್ತರನ್ನು ಮತಾಂತರಿಗಳಾಗಿ ಮತ್ತು ಹಿಂದೂ ಧರ್ಮದ ಅಸ್ತಿತ್ವಕ್ಕೆ ಅಪಾಯಕಾರಿಗಳಾಗಿ ಬಿಂಬಿಸುವುದೂ ಅದರ ಅಜೆಂಡಾವಾಗಿದೆ. ಇದನ್ನು ಪ್ರಚಾರ ಮಾಡುವುದಕ್ಕಾಗಿ ಅದರ ಬಳಿ ಪ್ರಬಲ ಐಟಿ ಸೆಲ್ ಇದೆ. ಕುರ್‌ಆನಿನ ವಚನಗಳಿಗೆ ಹತ್ತು ಹಲವು ಸುಳ್ಳು ವ್ಯಾಖ್ಯಾನಗಳನ್ನು ಸೃಷ್ಟಿಸಿ ಅದನ್ನು ಜನರ ನಡುವೆ ಹಂಚುವುದಕ್ಕೆ ಪ್ರಬಲ ಕಾರ್ಯಕರ್ತರ ಪಡೆಯೂ ಅದಕ್ಕಿದೆ. ಆದರೆ,

ಧರ್ಮ ರಕ್ಷಣೆಯ ಹೊಣೆಯನ್ನು ರಾಜಕೀಯ ಪಕ್ಷಕ್ಕೆ ವಹಿಸಿಕೊಡುವುದರಿಂದ ಅಂತಿಮವಾಗಿ ಹಿಂದೂ ಧರ್ಮದ ಸಹಿಷ್ಣುತೆ ಮತ್ತು ಉದಾರವಾದಿ ಮೌಲ್ಯಕ್ಕೆ ಅಪಾರ ಹಾನಿಯಾಗುತ್ತದೆಯೇ ಹೊರತು ಇನ್ನೇನಲ್ಲ ಅನ್ನುವುದನ್ನು ಈ ಬಾರಿಯ ಕ್ರಿಸ್ಮಸ್ ಸಾಬೀತುಪಡಿಸಿದೆ. ರಾಜಕೀಯ ಪಕ್ಷಕ್ಕೆ ಅಧಿಕಾರವಷ್ಟೇ ಬೇಕು. ಅದಕ್ಕೆ ಧರ್ಮವು ಅಧಿಕಾರವನ್ನು ಅದನ್ನು ಪಡೆಯುವುದಕ್ಕೆ ಬೇಕಾದ ಊರು ಗೋಲು ಅಷ್ಟೇ. ಅಧಿಕಾರಕ್ಕಾಗಿ ಅದು ಆ ಊರುಗೋಲನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ನಿಜವಾಗಿ,

ಧರ್ಮದ ಮೌಲ್ಯಗಳನ್ನು ಪ್ರತಿಪಾದಿಸಬೇಕಾದವರು ಆಯಾ ಧರ್ಮದ ಬಹು ಅಂಗೀಕೃತ ಧರ್ಮ ಗುರುಗಳು. ರಾಜಕೀಯ ದುರುದ್ದೇಶ ಇಲ್ಲದ ಇವರು ಮಾತ್ರ ಹಿಂದೂ ಧರ್ಮದ ಪ್ರತಿನಿಧಿಗಳಾಗುವುದಕ್ಕೆ ಅರ್ಹರು. ಹಿಂದೂ ಧರ್ಮದ ಪ್ರತಿಪಾದನೆಗಳಿಗೆ ಕಾಲಮಾನದ ವ್ಯಾಖ್ಯಾನವನ್ನು ಕೊಟ್ಟು ಹಿಂದೂಗಳಿಗೆ ಮಾರ್ಗದರ್ಶನ ನೀಡಬೇಕಾದವರು ಇವರು. ಸದ್ಯ ಇವರಿಂದ ಹಿಂದೂ ಧರ್ಮದ ನೊಗವನ್ನು ರಾಜಕಾರಣಿಗಳು ಕಿತ್ತುಕೊಂಡಿದ್ದಾರೆ ಮತ್ತು ರಾಜಕೀಯ ದುರುದ್ದೇಶಕ್ಕಾಗಿ ಹಿಂದೂ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಬದಲಾಗಬೇಕು. ಹಿಂದೂ ಧರ್ಮದ ಹಿತದೃಷ್ಟಿಯಿಂದ ಹಿಂದೂ ಸ್ವಾಮೀಜಿಗಳು ಧರ್ಮದ ಹೈಜಾಕನ್ನು ತಡೆಯಲು ಮುಂದೆ ಬರಬೇಕು. ಇಲ್ಲದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಧರ್ಮದ ವರ್ಚಸ್ಸಿಗೆ ಭಾರೀ ಹಾನಿ ಉಂಟಾಗಬಹುದು.