ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿ ಕಿಸಾನ್ ಮಹಾಪಂಚಾಯತ್‌ಗಾಗಿ ದೆಹಲಿಗೆ ತೆರಳುತ್ತಿದ್ದ ರೈತರು: ಶಂಭು ಗಡಿ ಬಂದ್

0
220

ಸನ್ಮಾರ್ಗ ವಾರ್ತೆ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ದೆಹಲಿಯಲ್ಲಿ ಪ್ರಸ್ತಾವಿತ ಕಿಸಾನ್ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ತೆರಳುತ್ತಿದ್ದ ರೈತರನ್ನು ತಡೆಯಲು ಹರಿಯಾಣ ಸರ್ಕಾರ ಮಂಗಳವಾರ ಶಂಭು ಗಡಿಯನ್ನು ಸೀಲ್‌ ಮಾಡಿದೆ. ಇದು ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ರೈತ ಮುಖಂಡರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಪಂಜಾಬ್ ಮತ್ತು ಹರಿಯಾಣ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಶಂಭು ಗಡಿಯು ಪಟಿಯಾಲ ಜಿಲ್ಲೆಯನ್ನು ಅಂಬಾಲಾ ಮತ್ತು ದೆಹಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ಅಂತಾರಾಜ್ಯ ಗಡಿಯಾಗಿದೆ.

ರೈತರ ವಾಹನಗಳು ಹರಿಯಾಣ ಪ್ರವೇಶಿಸುವುದನ್ನು ತಡೆಯಲು ಘಗ್ಗರ್‌ ನದಿಯ ಸೇತುವೆಯ ಮೇಲೆ ಹಲವು ಬ್ಯಾರಿಕೇಡ್‌ಗಳು ಮತ್ತು ಸಿಮೆಂಟ್‌ ಬ್ಲಾಕ್‌ಗಳನ್ನು ಹಾಕಲಾಗಿದ್ದು, ಪಂಜಾಬ್-ಹರಿಯಾಣ ಗಡಿಯಲ್ಲಿ ಭಾರೀ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

ದೇಶ ಉಳಿಸಿ ಮೋರ್ಚಾ (ದೇಶ್‌ ಬಚಾವೋ ಮೋರ್ಚಾ) ಬ್ಯಾನರ್‌ ಅಡಿಯಲ್ಲಿ ಆಯೋಜಿಸಲಾಗಿರುವ ಈ ದಿನಪೂರ್ತಿ ಮಹಾಪಂಚಾಯತ್‌ ದೆಹಲಿಯ ಕಿಸಾನ್‌ ಘಾಟ್‌ನಲ್ಲಿ ನಡೆಯಲಿದೆ. ಇದರಲ್ಲಿ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳ ರೈತರು ಭಾಗವಹಿಸುವ ನಿರೀಕ್ಷೆಯಿದೆ.

ಶ್ರೀ ಫತೇಘರ್‌ ಸಾಹಿಬ್‌ ಗುರುದ್ವಾರದಲ್ಲಿ ರಾತ್ರಿ ಕಳೆದ ನಂತರ ಪಂಜಾಬ್‌ನ ಸಾವಿರಾರು ರೈತರು ಮಂಗಳವಾರ ಬೆಳಿಗ್ಗೆ ಬಸ್‌ಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ವಾಹನಗಳ ಸಾಲು ಸಿಹಿಂದ್‌ ಬಳಿಯ ಮಾಧೋಪುರ ಮೂಲಕ ಶಂಭು ಗಡಿಯತ್ತ ಸಾಗಿತು. ರೈತರು ಶಾಂತಿಯುತವಾಗಿ ಪ್ರಯಾಣಿಸಲು ಉದ್ದೇಶಿಸಿದ್ದರೂ ಗಡಿಯಲ್ಲಿ ತಡೆಯಲಾಗಿದೆ ಎಂದು ರೈತ ಮುಖಂಡ ಸರ್ವಾನ್‌ ಸಿಂಗ್‌ ಪಂಧೇರ್‌ ತಿಳಿಸಿದ್ದಾರೆ.

ನಮ್ಮ ಶಾಂತಿಯುತ ಕಾರ್ಯಕ್ರಮದ ಹೊರತಾಗಿಯೂ ಹರಿಯಾಣ ಸರ್ಕಾರವು ನಮಗೆ ದೆಹಲಿ ತಲುಪದಂತೆ ತಡೆಯುತ್ತಿದೆ ಎಂದು ಪಂಧೇರ್‌ ಹೇಳಿದ್ದಾರೆ. ಅಲ್ಲದೆ, ಬ್ಯಾರಿಕೇಡ್‌ ಹಾಕಿರುವುದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರ “ನಿಜವಾದ ಮುಖ”ವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು.

ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಕೈಬಿಡಬೇಕೆಂಬ ರೈತರ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು. ಗಡಿಯಲ್ಲಿ ಇತರ ರೈತ ಮುಖಂಡರೊಂದಿಗೆ ಚರ್ಚಿಸಿದ ನಂತರ ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸಲಾಗುವುದು ಎಂದರು.

ಮಹಾಪಂಚಾಯತ್‌ಗಾಗಿ ದೆಹಲಿಗೆ ತೆರಳುತ್ತಿದ್ದ ಭಾರತೀಯ ಕಿಸಾನ್ ಯೂನಿಯನ್‌ (ಚಾರುಣಿ) ಮುಖ್ಯಸ್ಥ ಗುರ್ನಾಮ್‌ ಸಿಂಗ್‌ ಚಾರುಣಿ ಅವರನ್ನು ಕುರುಕ್ಷೇತ್ರದಲ್ಲಿ ಹರಿಯಾಣ ಪೊಲೀಸರು ವಶಕ್ಕೆ ಪಡೆದ ಮಾರನೇ ದಿನವೇ ಈ ಪ್ರತಿಭಟನೆ ನಡೆಯುತ್ತಿದೆ.

ನಾವು ಬ್ಯಾರಿಕೇಡ್‌ಗಳನ್ನು ಮುರಿಯುವ ಅಥವಾ ಯಾವುದೇ ಸಂಘರ್ಷವನ್ನು ಸೃಷ್ಟಿಸುವ ಯೋಚನೆ ಹೊಂದಿಲ್ಲ; ಗುರ್ನಾಮ್‌ ಸಿಂಗ್‌ ಚಾರುಣಿ ಸೇರಿದಂತೆ ಬಂಧಿತ ರೈತರನ್ನು ಬಿಡುಗಡೆ ಮಾಡಬೇಕು ಮತ್ತು ಸರ್ಕಾರವು ನಮ್ಮೊಂದಿಗೆ ಮಾತುಕತೆ ನಡೆಸಬೇಕು ಎಂದು ಸರ್ವಾನ್ ಸಿಂಗ್ ಪಂಧೇರ್ ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಹಲವು ಕಾರ್ಯಕರ್ತರನ್ನು ಸಹ ಬಂಧಿಸಲಾಗಿದೆ ಎಂದು ಯೂನಿಯನ್‌ನ ವಕ್ತಾರ ಪ್ರಿನ್ಸ್‌ ವಾರೈಚ್‌ ಆರೋಪಿಸಿದ್ದಾರೆ.

ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಭಾರತೀಯ ಮಾರುಕಟ್ಟೆಯನ್ನು ಅಗ್ಗದ ಕೃಷಿ ಆಮದುಗಳಿಗೆ ಮುಕ್ತಗೊಳಿಸುತ್ತದೆ, ದೇಶೀಯ ಕೃಷಿ ಆದಾಯವನ್ನು ಕುಂಠಿತಗೊಳಿಸುತ್ತದೆ ಮತ್ತು ಕೃಷಿ ಕಾರ್ಮಿಕರು, ಹೈನುಗಾರರು, ಸಣ್ಣ ವ್ಯಾಪಾರಿಗಳು ಹಾಗೂ ಸೂಕ್ಷ್ಮ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರೈತ ಸಂಘಟನೆಗಳು ವಿರೋಧಿಸಿವೆ.

ಸೋಯಾಬೀನ್, ಮುಸುಕಿನ ಜೋಳ, ಹತ್ತಿ, ಎಥೆನಾಲ್, ಸೇಬು, ಬಾದಾಮಿ, ಹಾಲಿನ ಉತ್ಪನ್ನಗಳು, ಕೋಳಿ ಮತ್ತು ಮೀನುಗಾರಿಕೆ ಸೇರಿದಂತೆ ಅಮೆರಿಕದ ಹಲವಾರು ಕೃಷಿ ಉತ್ಪನ್ನಗಳಿಗೆ ಕಡಿಮೆ ಸುಂಕ ಮತ್ತು ವಿಶಾಲ ಮಾರುಕಟ್ಟೆ ಪ್ರವೇಶವನ್ನು ಕೋರಿ ಮಾತುಕತೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಪ್ರಸ್ತಾವಿತ ಒಪ್ಪಂದವನ್ನು ಕೈಬಿಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಯಾವುದೇ ಮುನ್ಸೂಚನೆಯಿಲ್ಲದೆ ಹರಿಯಾಣ ಸರ್ಕಾರವು ಅಂತಾರಾಜ್ಯ ಗಡಿಯನ್ನು ಸೀಲ್‌ ಮಾಡಿದೆ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಮತ್ತು ರೈತರು ತಮ್ಮ ಬೇಡಿಕೆಗಳನ್ನು ಮಂಡಿಸುವುದನ್ನು ತಡೆಯಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಶಹೀದ್ ಭಗತ್ ಸಿಂಗ್) ವಕ್ತಾರ ತೇಜ್‌ವೀರ್‌ ಸಿಂಗ್‌ ಆರೋಪಿಸಿದ್ದಾರೆ.

ಕೆಲವು ಬ್ಯಾರಿಕೇಡ್‌ಗಳನ್ನು ಪಂಜಾಬ್‌ ಭೂಪ್ರದೇಶದೊಳಗೆ ಹಾಕಲಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಪಂಜಾಬ್‌ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಅಂಬಾಲಾ, ಕುರುಕ್ಷೇತ್ರ ಹಾಗೂ ಹರಿಯಾಣದ ಇತರ ಭಾಗಗಳಿಂದ ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ. ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್‌ ಬಳಿ ಬಸ್‌ಗಳಲ್ಲಿ ತೆರಳುತ್ತಿದ್ದ ಬಿಕೆಯು (ಶಹೀದ್‌ ಭಗತ್‌ ಸಿಂಗ್‌) ಸದಸ್ಯರ ಗುಂಪನ್ನು ತಡೆಯಲಾಗಿದ್ದು, ದೆಹಲಿ ತಲುಪಲು ಬಿಡದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿಗೆ ಆಗ್ರಹಿಸಿ ರೈತರು ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಧರಣಿ ನಡೆಸಿದ್ದ 2024ರ ಫೆಬ್ರವರಿಯ “ದೆಹಲಿ ಚಲೋ-2” ರೈತ ಆಂದೋಲನದ ಸಮಯದಲ್ಲಿ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿದ ತಿಂಗಳುಗಳ ಬಳಿಕ ಈಗ ಮತ್ತೆ ಇಂತಹ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.

https://x.com/jsuryareddy/status/2079448294741393466/photo/1