ಸನ್ಮಾರ್ಗ ವಾರ್ತೆ
ಜೆರುಸಲೇಮ್: ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗುರಿಯನ್ ಅವರು ಉತ್ತರ ಇಸ್ರೇಲ್ನ ಗ್ರಾಮವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ಹಾಗೂ ಮಾತಿನ ಚಕಮಕಿಯನ್ನು ಎದುರಿಸಬೇಕಾಯಿತು. ಭಾರೀ ಭದ್ರತೆಯೊಂದಿಗೆ ಬಸ್ಮತ್ ತಬುನ್ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಸ್ಥಳೀಯರಿಂದ ಕಟುವಾದ ಅವಮಾನಗಳು ಹಾಗೂ ಧಿಕ್ಕಾರಗಳು ಎದುರಾದವು. ಗ್ರಾಮಸ್ಥರ ಈ ಪ್ರತಿಭಟನೆಯ ದೃಶ್ಯಾವಳಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
“ನೀವು ನಿಮ್ಮನ್ನೇ ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ, ಎಲ್ಲರೂ ನಿಮ್ಮನ್ನು ನೋಡಿ ನಗುತ್ತಿದ್ದಾರೆ; ನೀವೇ ಸೋಲುಗಳ ಚಾಂಪಿಯನ್” ಎಂದು ಗ್ರಾಮಸ್ಥರು ಸಚಿವರ ಮೇಲೆ ಕೂಗಾಡಿದರು. ಸಚಿವರಿಗೆ ಅಮೆರಿಕದ ವೀಸಾನೂ ಸಿಕ್ಕಿಲ್ಲ ಎಂದು ಎತ್ತಿ ತೋರಿಸಿ ಸಾರ್ವಜನಿಕರು ಸಚಿವರನ್ನು ಗೇಲಿ ಮಾಡಿದರು. ಸಚಿವರನ್ನು ಕಂಡ ಸ್ಥಳೀಯರು “ಭಯೋತ್ಪಾದಕ” ಎಂದು ಘೋಷಣೆ ಕೂಗಿದರು ಮತ್ತು ಆಕ್ರೋಶದಿಂದ, “ಭಯೋತ್ಪಾದನೆ ಅಪರಾಧದಲ್ಲಿ ದೋಷಿಯಾಗಿರುವ ನಿಮಗೆ ಇಲ್ಲಿರಲು ಅರ್ಹತೆಯಿಲ್ಲ. ಮಾನಸಿಕ ಅಸ್ವಸ್ಥತೆ ಕೇಂದ್ರಕ್ಕೆ ಹೋಗಿ” ಎಂದು ಹೇಳಿದರು.
ಬೆನ್-ಗ್ವೀರ್ ಮತ್ತು ಇಸ್ರೇಲಿ ಪೊಲೀಸ್ ಪಡೆಯ ವಿರುದ್ಧ ದೇಶದ ಅರಬ್ ಜನಸಂಖ್ಯೆಯ ನಡುವೆ ಹೆಚ್ಚುತ್ತಿರುವ ವಿರೋಧದ ಮಧ್ಯೆ ಈ ಹೊಸ ಬೆಳವಣಿಗೆಗಳು ಬಂದಿವೆ. ಭಾನುವಾರ ಉಮ್ ಅಲ್-ಫಹ್ಮ್ ನಗರದಲ್ಲಿ ಮದುವೆಯೊಂದರ ಮೇಲೆ ಪೊಲೀಸರು ನಡೆಸಿದ ದಾಳಿಯು ಸಹ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ಮದುವೆಯ ಸಮಯದಲ್ಲಿ ಬಂದೂಕಿನ ಮುಂಭಾಗದಲ್ಲಿ ಎಲ್ಲಾ ಅತಿಥಿಗಳನ್ನು ನೆಲದ ಮೇಲೆ ಮಲಗುವಂತೆ ಬಲವಂತಪಡಿಸಿದ ಪೊಲೀಸರ ಅಮಾನವೀಯ ಕೃತ್ಯವನ್ನು ಜನರು ವೀಡಿಯೊ ಸಮೇತ ಪ್ರಶ್ನಿಸಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಬಳಸಿದ ಶಂಕೆಯ ಮೇರೆಗೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ, ಹದಾಶ್ ಮಾಜಿ ಅಧ್ಯಕ್ಷ ಮತ್ತು ಉಮ್ ಅಲ್-ಫಹ್ಮ್ವಾಸಿ ಡಾ. ಯೂಸೆಫ್ ಜಬ್ಬರೀನ್ ಅವರು, ಮದುವೆ ಸಮಾರಂಭಗಳಿಗೆ ಭಂಗ ತರುವ ಉದ್ದೇಶದಿಂದ ಇಂತಹ ಕೃತ್ಯಗಳು “ರಾಜಕೀಯ ನಾಟಕಗಳಾಗಿವೆ” ಎಂದು ಆರೋಪಿಸಿದ್ದಾರೆ. ಅರಬ್ ಜನರನ್ನು ಬೇಟೆಯಾಡಲು ಮತ್ತು ರಾಜಕೀಯ ಲಾಭಕ್ಕಾಗಿ ಅವರನ್ನು ಹಿಂಸಿಸಲು ಬೆನ್-ಗ್ವಿರ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದೂ ಅವರು ತೀವ್ರವಾಗಿ ಆರೋಪಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ದಕ್ಷಿಣ ಪ್ರದೇಶದಲ್ಲಿ ಪೊಲೀಸರು ಮದುವೆಯ ಮೆರವಣಿಗೆಯನ್ನು ತಡೆದು, ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಧು-ವರರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕ್ರಮದಿಂದಾಗಿ ಸಮಯಕ್ಕೆ ಸರಿಯಾಗಿ ಮದುವೆ ಮಂಟಪ ತಲುಪಲು ಸಾಧ್ಯವಾಗಲಿಲ್ಲ ಮತ್ತು ಅನೇಕ ಅತಿಥಿಗಳು ವಾಪಸಾದರು ಎಂದು ವಧು-ವರರು ಹಾಗೂ ಅವರ ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಹಿಂದೆ ಬೆನ್-ಗ್ವಿರ್ ಅವರ ರಾಜಕೀಯ ತಂತ್ರಗಾರಿಕೆ ಇದೆ ಎಂದೂ ಆರೋಪಿಸಿದ್ದಾರೆ.
ಆದಾಗ್ಯೂ, ಬೆನ್-ಗ್ವಿರ್ ಈ ಎಲ್ಲಾ ಟೀಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ ಮತ್ತು ತಮ್ಮ ನಿಲುವಿನಲ್ಲಿ ದೃಢವಾಗಿ ನಿಂತಿದ್ದಾರೆ. ನೆಗೆವ್ ಪ್ರದೇಶದಲ್ಲಿ ಅಪಾಯಕಾರಿ ಮದುವೆ ಮೆರವಣಿಗೆಗಳು ಮತ್ತು ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿಯನ್ನು ಕಟ್ಟುನಿಟ್ಟಾಗಿ ಕೊನೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ. “ಅವರು ಏನೇ ಕೂಗಾಡಲಿ, ನಾನು ನನ್ನ ಕೆಲಸವನ್ನು ಮುಂದುವರಿಸುತ್ತೇನೆ” ಎಂಬುದು ಬೆನ್-ಗ್ವಿರ್ ಅವರ ಪ್ರತಿಕ್ರಿಯೆಯಾಗಿದೆ.












