ಸನ್ಮಾರ್ಗ ವಾರ್ತೆ
ಪುದುಚೇರಿ: ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ಬಳಿಕ, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಫೆಬ್ರವರಿ 22 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ನೂತನ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರಾಜನ್ ಆದೇಶಿಸಿದ್ದಾರೆ.
ಕೈ ಎತ್ತುವ ಮೂಲಕ ಬಹುಮತ ಸಾಬೀತುಪಡಿಸುವ ಮತದಾನ ನಡೆಯಲಿದ್ದು, ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋಗ್ರಾಫ್ ಮಾಡಲಾಗುತ್ತದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಂಗಳವಾರದ ಬಳಿಕ ಪುದುಚೇರಿಯಲ್ಲಿ ಇಬ್ಬರು ಶಾಸಕರ ರಾಜೀನಾಮೆಯ ನಂತರ ಬಹುಮತ ಕಳೆದುಕೊಂಡಿರುವಂತೆ ಕಂಡು ಬಂದಿದೆ. ಈ ಮಧ್ಯೆ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ಆಗಿದ್ದ ಕಿರಣ್ ಬೇಡಿ ಅವರನ್ನು ರಾಷ್ಟ್ರಪತಿ ಭವನವು ತೆಗೆದುಹಾಕಿ, ನೂತನ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರಾಜನ್ ಅವರನ್ನು ನೇಮಿಸಿತ್ತು.
ಕಾಂಗ್ರೆಸ್-ಡಿಎಂಕೆ ಮೈತ್ರಿಯು ಸದ್ಯ ಪುದುಚೇರಿಯಲ್ಲಿ 14 ಶಾಸಕರ ಬೆಂಬಲದೊಂದಿಗೆ ಸರಕಾರ ನಡೆಸುತ್ತಿದೆ. ಈ ಮಧ್ಯೆ ಪ್ರತಿಪಕ್ಷ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು ಸರ್ಕಾರಕ್ಕೆ ಬಹುಮತವಿಲ್ಲ ಎಂದು ಹೇಳಿ ಮುಖ್ಯಮಂತ್ರಿ ವಿ ನಾರಾಯಣಸಾಮಿಯವರ ರಾಜೀನಾಮೆಗೆ ಒತ್ತಾಯಿಸಿತ್ತು.
“ನಮ್ಮ ಮೈತ್ರಿಕೂಟದಲ್ಲಿ ಇನ್ನೂ ಬಹುಮತವಿದೆ. ನಾವು ಒಂದಾಗಿದ್ದೇವೆ. ಪ್ರತಿಪಕ್ಷದ ಆರೋಪಗಳು ನಿರಾಧಾರ. ಅವರು ತಮ್ಮ ದೌರ್ಬಲ್ಯವನ್ನು ಅರಿತುಕೊಳ್ಳಬೇಕು. ನಮ್ಮ ಮೈತ್ರಿ ಬಲವಾಗಿ ಉಳಿದಿದೆ. ಕಾನೂನಿನ ಪ್ರಕಾರ ನಾವು ಈ ಸರ್ಕಾರ ಮುಂದುವರಿಯುತ್ತೇವೆ” ಎಂದು ಮುಖ್ಯಮಂತ್ರಿ ವಿ ನಾರಾಯಣಸಾಮಿ ಹೇಳಿದ್ದರು. ಈ ಮಧ್ಯೆ ಫೆಬ್ರವರಿ 22 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ನೂತನ ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸೌಂದರಾಜನ್ ಆದೇಶಿಸಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.












