ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ.14: ಸಿಆರ್ಪಿಎಫ್ನ 40 ಮಂದಿ ಯೋಧರ ಜೀವ ತೆಗೆದ ಪುಲ್ವಾಮ ಭಯೋತ್ಪಾದನಾ ದಾಳಿಯಿಂದ ಯಾರು ಲಾಭ ಗಳಿಸಿದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ. ಅವರು ಸರಕಾರದ ಮುಂದೆ ಮೂರು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹೆಚ್ಚು ಲಾಭ ಗಳಿಸಿದ್ಯಾರು? ದಾಳಿಯ ಕುರಿತ ತನಿಖೆಯ ಫಲಿತಾಂಶ ಏನು? ದಾಳಿ ನಡೆಯಲು ಸುರಕ್ಷಾ ಲೋಪ ಆಗಿದ್ದು, ಇದಕ್ಕೆ ಬಿಜೆಪಿ ಸರಕಾರದ ಯಾರು ಹೊಣೆ?
ಈ ಪ್ರಶ್ನೆಗಳನ್ನು ಸರಕಾರದ ಮುಂದೆ ರಾಹುಲ್ ಎತ್ತಿದ್ದಾರೆ. ಆತ್ಮಾಹುತಿ ದಾಳಿಗೆ ಉಪಯೋಗಿಸಿದ ಸ್ಫೋಟಕ ವಸ್ತುಗಳ ಮೂಲವನ್ನು ಕಂಡು ಹುಡುಕಲು ಒಂದು ವರ್ಷ ಆಗಿಯೂ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ಯಾಕೆ ಸಾಧ್ಯವಾಗಿಲ್ಲ? ಈ ಹಿನ್ನೆಲೆಯಲ್ಲಿ ರಾಹುಲ್ರ ಪ್ರಶ್ನೆಗಳು ಪ್ರಸಕ್ತವಾಗಿವೆ. ಪುಲ್ವಾಮ ದಾಳಿಯ ಪ್ರಧಾನ ಆರೋಪಿ ಮುದಸ್ಸಿರ್ ಅಹ್ಮದ್ ಖಾನ್, ಸಜ್ಜದ್ ಭಟ್ ಕಳೆದ ವರ್ಷ ಮಾರ್ಚ್ ಮತ್ತು ಜೂನ್ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ ದಾಳಿಯ ಸೂತ್ರಧಾರರನ್ನು, ಸ್ಫೋಟಕಗಳ ಮೂಲವನ್ನು ಕಂಡು ಹುಡುಕಲು ಎನ್ಐಎಯಿಂದ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.












