ಸನ್ಮಾರ್ಗ ವಾರ್ತೆ
ಪಂಜಾಬ್ ಮೇ 1- ಲಾಕ್ ಡೌನ್ ನಿಂದಾಗಿ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ಸಿಲುಕಿಕೊಂಡ ತಬ್ಲಿಗಿಗಳನ್ನು ಗುರಿಯಾಗಿಸಿ ಬಲಪಂಥೀಯ ಗುಂಪುಗಳು ಅತ್ಯಂತ ದ್ವೇಷದ ಪ್ರಚಾರ ಕೈಗೊಂಡ ಬೆನ್ನಿಗೇ ಇದೀಗ ಅಂಥದ್ದೇ ಒಂದು ಸನ್ನಿವೇಶ ನಾಂದೇಡ್ ನ ಸಿಖ್ ಗುರುದ್ವಾರದಲ್ಲಿ ನಿರ್ಮಾಣಗೊಂಡಿದೆ. ಈ ಬಗ್ಗೆ ಎನ್ ಡಿಟಿವಿ www.ndtv.com ವರದಿ ಮಾಡಿದೆ.
ಮಾರ್ಚ್ 25ರಂದು ಲಾಕ್ ಡೌನ್ ಘೋಷಣೆಯಾದಾಗ ಮಹಾರಾಷ್ಟ್ರದ ನಾಂದೇಡ್ ನ ಹಜೂರ್ ಸಾಹಿಬ್ ಗುರುದ್ವಾರದಲ್ಲಿ 4000 ಸಿಖ್ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು. ಇವರೆಲ್ಲಾ ಪಂಜಾಬ್ ನಿಂದ ನಾಂದೇಡ್ ನ ಹಜೂರ್ ಸಾಹಿಬ್ ಗುರುದ್ವಾರಕ್ಕೆ ಹೋಗಿದ್ದರು. ಆ ಬಳಿಕ ಕೇಂದ್ರ ಗೃಹ ಇಲಾಖೆಯ ಅನುಮತಿಯ ಮೇರೆಗೆ ಇವರಲ್ಲಿ ಮೂರುವರೆ ಸಾವಿರ ಯಾತ್ರಾರ್ಥಿಗಳು ಏಪ್ರಿಲ್ 22ರ ಬಳಿಕ ವಾಪಸಾಗಿದ್ದಾರೆ.
ಆದರೆ ಹೀಗೆ ಮರಳಿದವರಲ್ಲಿ 173 ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು ಸರಕಾರಕ್ಕೆ ತಲೆನೋವು ಪ್ರಾರಂಭವಾಗಿದೆ. ಏಪ್ರಿಲ್ 22ರಿಂದ ಪಂಜಾಬಿಗೆ ಮರಳಲು ಪ್ರಾರಂಭಿಸಿದ ಇವರನ್ನು ಪ್ರತ್ಯೇಕಿಸುವುದಕ್ಕೆ ಐದು ದಿನಗಳ ವಿಳಂಬವಾದುದು ಈಗ ಇನ್ನೊಂದು ಆತಂಕದ ಸಂಗತಿಯಾಗಿ ಮಾರ್ಪಟ್ಟಿದೆ.
ಇದರ ಜೊತೆಗೆ ಪಂಜಾಬಿನ ಮುಖ್ಯಮಂತ್ರಿ ಮಾತಾಡುತ್ತಾ, ತಬ್ಲಿಗಿ ಜಮಾಅತ್ ಮತ್ತು ನಾಂದೆಡ್ ನಿಂದ ಹಿಂತಿರುಗಿದ ಸಿಖ್ ಯಾತ್ರಾರ್ಥಿಗಳಿಂದಾಗಿ ಪಂಜಾಬಿನಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಹರಡಿವೆ ಎಂದು ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.
ಹಜೂರ್ ಸಾಹಿಬ್ ಕೊರೋನಾ ವೈರಸ್ಸಿನ ನೆಲೆಯಾಗಿದೆ ಮತ್ತು ಯಾತ್ರಾರ್ಥಿಗಳು ಅದನ್ನು ತಮ್ಮೊಂದಿಗೆ ಪಂಜಾಬ್ ಗೆ ಕೊಂಡೊಯ್ದಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ, ಇದು ಬಹಳ ದೊಡ್ಡ ಪಿತೂರಿ ಎಂದು ಆಕಾಲ್ ತಖ್ತ್ ನ ಜತೆದಾರ್ ಹರ್ಪ್ರೀತ್ ಸಿಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ
ಪಂಜಾಬ್ ನಲ್ಲಿ ಈಗಾಗಲೇ 539 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 19 ಮಂದಿ ಸಾವಿಗೀಡಾಗಿದ್ದಾರೆ. ನಾಂದೇಡ್ ನ ಹಜೂರ್ ಸಾಹಿಬ್ ಗುರುದ್ವಾರ ಇದೀಗ ಪಂಜಾಬಿನ ಬೇನೆಯಾಗಿ ಪರಿವರ್ತನೆಯಾಗಿದ್ದು ಅಷ್ಟು ದೊಡ್ಡ ಸಂಖ್ಯೆಯ ಯಾತ್ರಾರ್ಥಿಗಳ ಸಂಪರ್ಕ ಮತ್ತಿತರ ದಾಖಲೆಗಳನ್ನು ಸಂಗ್ರಹಿಸುವುದು ಸಮಸ್ಯೆಯಾಗಿ ಮಾರ್ಪಟ್ಟಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












