ಪುರುಷರ ಕಾರ್ಯಭಾರವನ್ನು ನಿಭಾಯಿಸುವ ಮಹಿಳೆ ಇವತ್ತು ಅಸಮರ್ಥಳಲ್ಲ – ತೋನ್ಸೆಯ ಸಾಲಿಹಾತ್ ಪದವಿ ಕಾಲೇಜಿನಲ್ಲಿ ಮಹಿಳಾ ಧ್ವನಿ

0
534

ತೋನ್ಸೆ – ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೂಡೆಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಪ್ರೀಮ ಇವರು ಮಾತನಾಡುತ್ತಾ, “ಪ್ರಸಕ್ತ ದಿನಗಳಲ್ಲಿ ಪುರುಷರು ನಿಭಾಯಿಸುವ ಕಾರ್ಯಭಾರವನ್ನು ಮಹಿಳೆ ನಿಭಾಯಿಸಲು ಸಮರ್ಥಳಾಗಿದ್ದಾಳೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸಿ ಸಾಧನೆಯಲ್ಲಿ ಮೇಲುಗೈ ಸಾಧಿಸುತ್ತಿದ್ದಾಳೆ” ಎಂದೂ ಹೇಳಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಸ್ಥಳೀಯ ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಸಾಧಿಕ್ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, “ಈ ಹಿಂದೆ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ, ಈಗ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಅದರಲ್ಲಿ ಯಶಸ್ಸು ಕಂಡಿರುವುದು ಉತ್ತಮ ಸಮಾಜದ ಸಂಕೇತವಾಗಿದೆ. ಮಹಿಳೆ ಪ್ರಾಮಾಣಿಕವಾಗಿ ತನ್ನ ಕರ್ತವ್ಯ ನಿರ್ವಹಿಸುವವಳಾಗಿದ್ದಾಳೆ” ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ|| ಸಬೀನಾ ವಹಿಸಿದ್ದರು. ವೇದಿಕೆಯಲ್ಲಿ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಕುಲ್ಸುಮ್ ಅಬೂಬಕರ್, ವಿದ್ಯಾರ್ಥಿ ಪ್ರತಿನಿಧಿ ಶಾಝೀನ್ ಬೇಗಂ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಾಹ್‍ಝೀನ್ ಸ್ವಾಗತಿಸಿ, ನೀಹಾ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಭಾ ಬಾನು ಧನ್ಯವಾದವಿತ್ತರು.