ಉಳ್ಳಾಲ: ಸದ್ಭಾವನಾ ವೇದಿಕೆ ಉಳ್ಳಾಲ ಮತ್ತು ಪೊಸ ಕುರಲ್ ಬಳಗದ ಸಹಯೋಗದಲ್ಲಿ ಮಾದಕ ದ್ರವ್ಯ ವ್ಯಸನ ಜನಜಾಗೃತಿ ಮತ್ತು ಸಾರ್ವಜನಿಕ ಸಾಮರಸ್ಯ ಕಾರ್ಯಕ್ರಮವು ಇತ್ತೀಚೆಗೆ ಉಳ್ಳಾಲ ಬೀಚ್ ನಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಉಳ್ಳಾಲ ಪೊಲೀಸ್ ಉಪ ಆರಕ್ಷಕ ನಿರೀಕ್ಷಕರಾದ ಗುರಪ್ಪ ಕಾಂತಿ ಅವರು ಮಾತನಾಡುತ್ತಾ, ಬೆಳೆಯುತ್ತಿರುವ ಮಕ್ಕಳಿಗೆ ಅವರ ಪೋಷಕರೇ ಮಕ್ಕಳ ಭವಿಷ್ಯದ ಬಗ್ಗೆ ನಿಗಾವಹಿಸಿ ದುಶ್ಚಟಗಳ ವಿರುದ್ಧ ಉಪದೇಶ ನೀಡಬೇಕು. ತಮ್ಮ ಮಕ್ಕಳು ಯಾವತ್ತೂ ದುಶ್ಚಟಗಳಿಗೆ ಬಲಿಯಾಗಲು ಸಾಧ್ಯವಿಲ್ಲ ಎಂಬ ಸಂಕಲ್ಪ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಎಲ್ಲಾ ಧರ್ಮದವರು ಸೇರಿಕೊಂಡಿರುವ ಸದ್ಭಾವನಾ ವೇದಿಕೆ ಮತ್ತು ಪೊಸ ಕುರಲ್ ಬಳಗ ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಎತ್ತಿ ಕೊಂಡಿರುವುದನ್ನು ಅವರು ಪ್ರಶಂಸಾರ್ಹವೆಂದು ಹೇಳಿದರು.
ಪೊಸ ಕುರಲ್ ನಿರ್ದೇಶಕ ವಿದ್ಯಾಧರ ಶೆಟ್ಟಿ ಅವರು ಸದ್ಭಾವನಾ ವೇದಿಕೆ ಈವರೆಗೂ ಜನಜಾಗೃತಿಯ ನಿಟ್ಟಿನಲ್ಲಿ ಕೈಗೆತ್ತಿದ ಕಾರ್ಯಕ್ರಮಗಳನ್ನು, ವೇದಿಕೆಯ ಧೇಯೋದ್ಧೇಶಗಳನ್ನು ವಿವರಿಸಿದರು. ಸದ್ಭಾವನಾ ವೇದಿಕೆಯ ಅಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷೀಯ ಭಾಷಣ ಮಾಡಿದರು. ನಂತರ ಮಂಗಳೂರು ಸಂದೇಶ ಬಳಗದವರಿಂದ ‘ವ್ಯಸನದಿಂದ ಮಸಣದೆಡೆಗೆ’ ಎಂಬ ನೀತಿದಾಯಕ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ಅಧ್ಯಕ್ಷ ಯು.ಎ.ಅಬ್ದುಲ್ ಕರೀಮ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸದ್ಭಾವನಾ ವೇದಿಕೆಯ ಗೌರವಾಧ್ಯಕ್ಷರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಜೋಸ್ಲಿನ್ ಡಿ’ಸೋಜ, ಕೋಶಾಧಿಕಾರಿ ಅಲ್ವಿನ್ ಡಿ’ಸೋಜ ಇಂಜಿನಿಯರ್, ನಿವೃತ್ತ ಸೇನಾಧಿಕಾರಿ ಕೃಷ್ಣ ಗಟ್ಟಿ ಹಾಗೂ ಉದ್ಯಮಿ ಎ.ಹೆಚ್. ಮಹಮೂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.












