ಸನ್ಮಾರ್ಗ ವಾರ್ತೆ
✍️ ಏ.ಕೆ.ಕೆ
ಜಗತ್ತಿನ ಎಲ್ಲಾ ಕಾನೂನು ಕಟ್ಟಳೆಗಳನ್ನು ಮೀರಿ ಕಳೆದ 15 ತಿಂಗಳಿನಿಂದ ತೋಚಿದಂತೆ ನಡಕೊಂಡಿದ್ದ ಇಸ್ರೇಲ್ ನ ರಣೋತ್ಸಾಹಕ್ಕೆ ತಡೆ ಬಿದ್ದಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದಕ್ಕೆ ಸಹಿಬಿದ್ದಿದೆ. ಈ ಒಪ್ಪಂದವನ್ನು ಸಾಧ್ಯವಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಕತರ್ ಎಂಬ ಪುಟ್ಟ ರಾಷ್ಟ್ರ.
ಅರಬ್ ರಾಷ್ಟ್ರಗಳು ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದಾಗ ತಣ್ಣಗೆ ರಂಗ ಪ್ರವೇಶಿಸಿದ ಖತರ್ ಯಾವುದೇ ಗೌಜು ಗದ್ದಲವಿಲ್ಲದೆ ಮತ್ತು ಮಾಧ್ಯಮ ಪ್ರಚಾರವಿಲ್ಲದೆ ಮಾಡಿದ ಪ್ರಯತ್ನ ಅಮೋಘವಾದುದು.
ಇದೀಗ ಇಸ್ರೇಲ್ ಮತ್ತು ಗಾಝಾ ನಡುವಿನ ಘರ್ಷಣೆ ನಿಲ್ಲಿಸುವಲ್ಲಿ ಕತರ್ ವಹಿಸಿದ ಮಧ್ಯಸ್ಥಿಕೆ ಪಾತ್ರವು ಜಾಗತಿಕವಾಗಿ ಶ್ಲಾಘನೆಗೆ ಒಳಗಾಗಿದೆ. ಕತರ್ ನ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ತಾನಿಯವರು ಮೊನ್ನೆ ಸುದ್ದಿಗೋಷ್ಠಿ ಕರೆದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ರು. ವಿಶೇಷ ಅಂದರೆ ನಿಜಕ್ಕೂ ಈ ಜಗತ್ತು ಕೃತಜ್ಞತೆ ಸಲ್ಲಿಸಬೇಕಾದದ್ದು ಕತರ್ ಗೆ ಮತ್ತು ಅಲ್ಲಿನ ಅಮೀರ್ ಶೈಖ್ ಅಮೀರ್ ಬಿನ್ ಅಹ್ಮದ್ ಅಲ್ತಾಾನಿ ಅವರಿಗೆ.
ಎಲ್ಲಾ ತಡೆಗಳು ನಿಯಂತ್ರಣಗಳು ಮತ್ತು ಒತ್ತಡಗಳ ಮಧ್ಯೆಯೂ ಕತರ್ ತನ್ನ ಮಧ್ಯಸ್ಥಿಕೆಯ ಹೊಣೆಗಾರಿಕೆಯಿಂದ ಹಿಂಜರಿಯಲಿಲ್ಲ. 2023 ಅಕ್ಟೋಬರ್ 7ರಂದು ಇಸ್ರೇಲ್ ನ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕದಿಂದ ಕತರ್ ತೆರೆಯ ಮರೆಯಲ್ಲಿ ಮತ್ತು ತೆರೆಯ ಮುಂದೆಯೂ ಘರ್ಷಣೆ ನಿಲ್ಲಿಸಲು ಮಾಡಿದ ಪ್ರಯತ್ನ ಮತ್ತು ಸಂಧಾನ ಇದೀಗ ಯುದ್ಧ ನಿಲ್ಲಿಸುವ ಒಪ್ಪಂದದವರೆಗೆ ತಲುಪಿದೆ. ಸುದ್ದಿಗೋಷ್ಠಿಯಲ್ಲಿ ಈ ಸಂತಸವನ್ನು ಅಲ್ ತಾನಿ ಹಂಚಿಕೊಳ್ಳುವಾಗ ಒಂದು ಮಾತನ್ನ ಹೇಳಿದರು,
ನಾವು ಇನ್ನು ಮುಂದೆಯೂ ಫೆಲೆಸ್ತೀನಿಯರಿಗೆ ಮತ್ತು ಗಾಝಾದ ಮಂದಿಗೆ ನೆರವನ್ನು ನೀಡುತ್ತೇವೆ ಎಂದರು.
ಖತರ್ ನ ಮಧ್ಯಸ್ಥಿಕೆಯ ಭೂಮಿಕೆ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ಅರಬ್ ರಾಷ್ಟ್ರಗಳು, ಯುರೋಪ್ ಸಹಿತ ವಿವಿಧ ಜಾಗತಿಕ ರಾಷ್ಟ್ರಗಳು ಕತರ್ ಗೆ ಅಭಿನಂದನೆ ಸಲ್ಲಿಸಿದುವು. ಮುಖ್ಯವಾಗಿ ಯುಎಇ ಸೌದಿ ಅರೇಬಿಯಾ ಬಹರೇನ್ ಗಳು ಖತರ್ ನ ಪ್ರಯತ್ನವನ್ನು ಶ್ಲಾಘಿಸಿದವು. ಇದೇ ಸೌದಿ ಅರೇಬಿಯಾ ಯುಎಇ ಬಹರೇನ್ ಗಳು ಈ ಹಿಂದೆ ನಾಲ್ಕು ವರ್ಷಗಳ ಕಾಲ ಇದೇ ಕತರ್ ಗೆ ನಿರ್ಬಂಧವನ್ನು ಹೇರಿದ್ದುದ್ದು ಎಂಬುದು ಕೂಡ ಗಮನಾರ್ಹ.
ಖತರ್ ಈ ಹಿಂದಿನಿಂದಲೇ ಫೆಲೆಸ್ತೀನಿನ ವಿಮೋಚನಾ ಹೋರಾಟಕ್ಕೆ ಮತ್ತು ಅದರ ಹಕ್ಕುಗಳ ಪರವಾಗಿ ಸದಾ ವಾದಿಸುತ್ತಾ ಬಂದ ದೇಶ ಹೆಚ್ಚಿನ ಅರಬ್ ರಾಷ್ಟ್ರಗಳು ಅಲ್ ಜಝೀರ ಚಾನೆಲ್ ನ ವಿರುದ್ಧ ತೊಡೆತಟ್ಟಿ ನಿಂತಿರುವಾಗ ತನ್ನದೇ ನೆಲದಲ್ಲಿ ಜಝೀರ ಚಾನೆಲ್ ನ ಸ್ಥಾಪನೆಗೆ ಮತ್ತು ಎಲ್ಲ ಒತ್ತಡವನ್ನು ಮೀರಿ ಅದರ ಬೆಂಬಲಕ್ಕೆ ನಿಂತ ರಾಷ್ಟ್ರವೂ ಇದೇ ಕತಾರ್. ಒಂದು ರೀತಿಯಲ್ಲಿ ಇಡೀ ಜಿಸಿಸಿ ರಾಷ್ಟ್ರಗಳ ಮಧ್ಯೆಯೇ ಒಂದು ಭಿನ್ನ ರಾಷ್ಟ್ರವಾಗಿ ಈ ಕತಾರ್ ಗುರುತಿಸಿಕೊಂಡಿದೆ.
ಇದೀಗ ಗಾಝಾ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ ಜಾರಿಗೊಂಡ ಬೆನ್ನಿಗೆ ಖತರ್ ನ ಪ್ರಭಾವಿ ಮೊಬೈಲ್ ಕಂಪನಿಯಾದ ಉರೀದು ವಿಶೇಷ ಆಫರ್ ನೊಂದಿಗೆ ಮುಂದೆ ಬಂದಿದೆ. ಜನವರಿ 16 ರಿಂದ 22 ರವರೆಗೆ ಖತರ್ ನಲ್ಲಿರುವವರು ಉಚಿತವಾಗಿ ಫೆಲೆಸ್ತೀನಿಯರೊಂದಿಗೆ ಸಂಭಾಷಣೆ ನಡೆಸಬಹುದು ಎಂದು ಉರೀದು ನೆಟ್ವರ್ಕ್ ಕಂಪನಿ ಘೋಷಿಸಿದೆ. ಉರೀದು ಕಂಪನಿಯ ಪೋಸ್ಟ್ ಪೇಡ್ ಮತ್ತು ಪ್ರಿಪೇಡ್ ನ ಮೂಲಕ ಒಂದು ವಾರದ ತನಕ ಫೆಲೆಸ್ತೀನಿಯರ ಜೊತೆ ಉಚಿತವಾಗಿ ಸಂಭಾಷಣೆ ನಡೆಸುವುದಕ್ಕೆ ಅವಕಾಶವನ್ನ ಈ ಉರೀದು ಕಂಪನಿ ಒದಗಿಸಿ ಕೊಟ್ಟಿದೆ. ವಿಶೇಷ ಅಂದರೆ 2023ರಲ್ಲಿ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಘರ್ಷಣೆ ಆರಂಭವಾದ ಸಮಯದಲ್ಲೂ ಉರೀದು 15 ದಿನಗಳ ಕಾಲ ಉಚಿತ ಮೊಬೈಲ್ ಸೇವೆಯನ್ನು ಘೋಷಿಸಿತ್ತು. ಖತರ್ ನಲ್ಲಿರುವವರು ಉಚಿತವಾಗಿ ಫೆಲೆಸ್ತೀನಿಯರೊಂದಿಗೆ ಮಾತನಾಡಬಹುದು ಎಂದು ಅದು ಹೇಳಿತ್ತು. ಫೆಲೆಸ್ತೀನಿನ ಬಹಳಷ್ಟು ಜನರು ಖತರ್ ನಲ್ಲಿ ವಾಸಿಸುತ್ತಿದ್ದು ತಮ್ಮವರ ಜೊತೆ ಮಾತುಕತೆ ನಡೆಸುವುದಕ್ಕೆ ಇದು ಪ್ರಯೋಜನಕಾರಿಯಾಗಬಹುದು ಎಂದು ಉರೀದು ಹೇಳಿತ್ತು. ಇದೀಗ ಮತ್ತೊಮ್ಮೆ ಅದು ಉಚಿತ ಕರೆಗಳ ಅವಕಾಶವನ್ನು ಒದಗಿಸಿಕೊಟ್ಟಿದೆ.
ಇವು ಏನೇ ಇದ್ದರೂ ಹಮಾಸ್ ಮತ್ತು ಇಸ್ರೇಲ್ ನಡುವೆ ಘರ್ಷಣೆ ಆರಂಭವಾದ ಬಳಿಕ ಈಜಿಪ್ಟ್ ಅಮೆರಿಕಾದ ಸಹಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕಾಗಿ ಕತರ್ ನಡೆಸಿದ ಪ್ರಯತ್ನ ಇದೀಗ ಯಶಸ್ಸನ್ನ ತಂದುಕೊಟ್ಟಿದೆ. ಈ ಮೂಲಕ ಮುಂದಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಖತರ್ ಅಮೀರ್ ಅಲ್ ಥಾನಿಯವರು ಪ್ರಬಲ ದಾವೇದಾರರಾಗಿ ಮಾರ್ಪಟ್ಟಿದ್ದಾರೆ.












