ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕರು ಜಮ್ಮು-ಕಾಶ್ಮೀರಕ್ಕೆ

0
1357

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ಪಾರ್ಟಿ ನಾಯಕರು ಇಂದು ಜಮ್ಮು-ಕಾಶ್ಮೀರಕ್ಕೆ ತೆರಳಲಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನ ತೆರವುಗೊಳಿಸಿ ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು ಇವರು ಇಂದು ಬೆಳಗ್ಗೆ 11:30ಕ್ಕೆ ದಿಲ್ಲಿಯಿಂದ ತೆರಳಲಿದ್ದಾರೆ. ಸುರಕ್ಷೆಯ ಸಮಸ್ಯೆಯನ್ನು ಮುಂದಿಟ್ಟು ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆಯುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಜೊತೆ ಎಡಪಕ್ಷ ನಾಯಕರಾದ ಸೀತಾರಾಂ ಯೆಚೂರಿ, ಡಿ.ರಾಜ, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ಆನಂದ್ ಶರ್ಮ, ಆರ್‍ಜೆಡಿ ನಾಯಕ ಮನೋಜ್ ಝಾ, ಟಿಎಂಸಿ ನಾಯಕ ದಿನೇಶ್ ತ್ರಿವೇದಿ,ಡಿಎಂಕೆ ಸಂಸದರು ನಿಯೋಗದಲ್ಲಿದ್ದಾರೆ. ಈ ಹಿಂದೆ ಗುಲಾಂ ನಬಿ ಆಝಾದ್ ಕಾಶ್ಮೀರಕ್ಕೆ ಹೋಗಿದ್ದಾಗ ಎರಡು ಬಾರಿ ಶ್ರೀನಗರ ವಿಮಾನ ನಿಲ್ದಾನದಲ್ಲಿ ತಡೆಯಲಾಗಿತ್ತು. ಸೀತಾರಾಂ ಯೆಚೂರಿ, ಡಿ.ರಾಜರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆದಿರಿಸಲಾಗಿತ್ತು. ಸುರಕ್ಷಾ ಸಮಸ್ಯೆಯನ್ನು ಮುಂದಿಟ್ಟು ಸರಕಾರ ಈ ಕ್ರಮ ಕೈಗೊಂಡಿತ್ತು. ಆಗಸ್ಟ್ ನಾಲ್ಕರಂದು ಗೃಹಬಂಧನದಲ್ಲಿರಿಸಲಾಗಿರುವ ಹಿರಿಯ ನಾಯಕರು ಮತ್ತು 4000 ಮಂದಿಯನ್ನು ಈವರೆಗೆ ಸರಕಾರ ಬಿಡುಗಡೆಗೊಳಿಸಿಲ್ಲ. ಇದೇ ವೇಳೆ ಪ್ರತಿಪಕ್ಷಗಳು ರಾಜಕೀಯ ಆಟ ಆಡುತ್ತಿದೆ ಎಂದು ಜಮ್ಮುಕಾಶ್ಮೀರ ರಾಜ್ಯಪಾಲರು ಮತ್ತು ಬಿಜೆಪಿ ಪ್ರತಿಕ್ರಿಯಿಸಿದೆ.