ಮಳೆಯ ಅಬ್ಬರಕ್ಕೆ ರಾಜ್ಯದ ಜನಜೀವನ ತತ್ತರಿಸಿರುವ ಸುದ್ದಿಗಳು ಪ್ರವಾಹದಂತೆ ಸುದ್ದಿಮನೆಗಳನ್ನು ಸೇರುತ್ತಿವೆ. ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗಿರುವ ಕಾರಣ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ತುಂಬಾ ಆತಂಕ ಎದುರಾಗಿದೆ.
ಕುಮಾರಾಧಾರಾ ನದಿತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಉದನೆಯಲ್ಲಿ ಹೆದ್ದಾರಿಗೆ ನೀರು ನುಗ್ಗಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಯನ್ನು ಸಂಚಾರದಿಂದ ಮುಕ್ತಗೊಳಿಸಲಾಗಿದೆ. ಹೆದ್ದಾರಿಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದು, ಉಪ್ಪಿನಂಗಡಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಕುಮಾರಧಾರಾ ನದಿ ನೀರು ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಗೂ ನುಗ್ಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ವರದಿಯಿದ್ದು, ಸುಳ್ಯ-ಸುಬ್ರಹ್ಮಣ್ಯ-ಸಕಲೇಶಪುರ ಸಂಪರ್ಕಿಸುವ ಬಿಸಿಲೆ ಘಾಟ್ ರಸ್ತೆಯಲ್ಲೂ ಮರ ಹಾಗೂ ಗುಡ್ಡ ಕುಸಿದ ಪರಿಣಾಮ ಬಿಸಿಲೆ ಘಾಟ್ ರಸ್ತೆಯೂ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಹೇಳಲಾಗಿದೆ.
ಇದೇವೇಳೆ, ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ ಸಂಭವಿಸಿರುವುದು, ನಾಲ್ಕು ಕಡೆಗಳಲ್ಲಿ ಗುಡ್ಡ ರಸ್ತೆಗೆ ಜಾರಿ ನಿಂತಿದೆ. ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.
ಅಲ್ಲದೆ, ರಾಜ್ಯದ ಹಲವು ಪ್ರದೇಶಗಳಿಂದ ಪ್ರವಾಹ ಮತ್ತು ಸಂತ್ರಸ್ತ ಜನರ ಸಂಕಟಗಳು ವರದಿಯಾಗುತ್ತಿದ್ದು, ಗದಗದ ಗಂಗಮ್ಮ ಎಂಬ ಅಜ್ಜಿ ತನ್ನ ಮನೆಯನ್ನು ಬಿಟ್ಟು ಬರಲ್ಲ ಒಪ್ಪಿಕೊಳ್ಳದೆ ಊರವರನ್ನು ಸತಾಯಿಸುತ್ತಿರುವ ಸುದ್ದಿ ಬಂದಿದೆ. ನೀರು ಬೇಕಾದ್ರೆ ಬರಲಿ ನಾನು ಇದೇ ಮನೆಯಲ್ಲಿ ಸಾಯುತ್ತೇನೆ ಎಂದು ಅವರು ಹಠ ಹಿಡಿದಿರುವ ಘಟನೆ ನಡೆದಿದೆ.
ನೀರು ಬಂದರೆ ಬರಲಿ ನಾನು ಮಾತ್ರ ಈ ಮನೆಯನ್ನು ತೊರೆಯಲ್ಲ. ಬೇರೆ ಸ್ಥಳದಲ್ಲಿರಲು ನನ್ನಿಂದ ಸಾಧ್ಯ ಇಲ್ಲ. ಹಣಕ್ಕೆ ಹಣ ಸೇರಿಸಿ ಮನೆ ಮಾಡಿಕೊಂಡಿದ್ದೇನೆ. ಪ್ರವಾಹ ಎಂದು ದಿಢೀರ್ ಎಂದು ಮನೆ ಖಾಲಿ ಮಾಡಲ್ಲ ಎಂದು ಹೇಳಿರುವುದು ಪ್ರವಾಹದ ಮಧ್ಯೆಯೂ ಭಾರಿ ಸುದ್ದಿಗೀಡಾಗಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ 13 ಗ್ರಾಮಗಳು ಜಲಾವೃತಗೊಂಡಿವೆ ಎಂದು ವರದಿಗಳು ತಿಳಿಸಿವೆ. ಕೊಣ್ಣೂರು, ವಾಸನ, ಲಖಮಾಪೂರ, ಬೂದಿಹಾಳ ಸೇರಿದಂತೆ ನದಿಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ ಎಂದು ನರಡಿಗಳಿವೆ. ಹಾಗೆಯೇ,
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಕಾಳಿ ನದಿ ಪ್ರವಾಹದಿಂದ ತಾಲೂಕಿನ ಕಿನ್ನರ ಗ್ರಾಮ ಸೇರಿದಂತೆ ಹತ್ತು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಮುಳುಗಡೆ ಆಗಿವೆ. ಕದ್ರಾ ಡ್ಯಾಮ್ ನಿಂದ 1.90ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದದ್ದರಿಂದ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಸೇರಿದಂತೆ ಹತ್ತು ಗ್ರಾಮಗಳು ಜಲಾವೃತಗೊಂಡಿದ್ದು, ಕಾರವಾರ ತಾಲೂಕಿನ ಸಿದ್ದರ ಐ.ಟಿ.ಐ ಕಾಲೇಜು, ಅಂಬೆಜೂಗ್, ಕಿನ್ನರ, ಕಾರ್ಗ ಗಂಜಿ ಕೇಂದ್ರಗಳು ಕಾರವಾರದ ಗುರು ಭವನಕ್ಕೆ ಈಗ ಸ್ಥಳಾಂತರಗೊಂಡಿದೆ ಎಂದು ವರದಿಗಳು ತಿಳಿಸಿವೆ. ಸುಮಾರು 800ಕ್ಕೂ ಹೆಚ್ಚು ಕುಟುಂಬಗಳನ್ನು ದೋಣಿ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಈ ಮೊದಲೇ, ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಅದೇವೇಳೆ, ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿನ ತುಪ್ಪರಿ ಹಳ್ಳ ತುಂಬಿ ಬಂದಿದ್ದು, ಇದರ ಮಧ್ಯೆ ಏಳು ಜನ ಸಿಲುಕಿಕೊಂಡು ಭೀತಿ ಎದುರಾಗಿತ್ತಾದರೂ ಅವರೆಲ್ಲ ಪಾರಾಗಿದ್ದಾರೆ.
ಮನೆ ಸೋರುತ್ತಿದೆ ಎಂದು ಹನಮನಹಾಳ ರಸ್ತೆಯಲ್ಲಿ ಇರುವ ತಮ್ಮ ಶೆಡ್ ಗೆ ಗಿರಮಲ್ಲ ಹಳಮನಿ ಹಾಗೂ ಅವರ ಕುಟುಂಬದವರು ಹೋಗಿದ್ದರು ಎಂದು ವರದಿಯಾಗಿದ್ದು, ಆದರೆ, ತುಪ್ಪರಿ ಹಳ್ಳ ತುಂಬಿ ಬಂದಿದ್ದರಿಂದ ಇವರೆಲ್ಲ ಶೆಡ್ ನಲ್ಲಿ ನೀರಿನ ಮಧ್ಯೆ ಸಿಲುಕಿಕೊಂಡರು. ಇದರಿಂದಾಗಿ ರಾತ್ರಿಯಿಡಿ ಟ್ರ್ಯಾಕ್ಟರ್ ಟೈರ್ನಲ್ಲಿ ನಿಂತುಕೊಂಡು ರಕ್ಷಣೆಗಾಗಿ ಕೂಗುತ್ತಿದ್ದರು ಅನ್ನುವ ವರದಿ ಬಂದಿದ್ದು, ಬೆಳಗಿನ ಜಾವ ಕುಟುಂಬದ ಏಳೂ ಜನ ಒಬ್ಬೊಬ್ಬರಾಗಿ ಶೆಡ್ ನಿಂದ ಪಾರಾಗಿ ಬಂದಿದ್ದಾರೆ.












