ಮುಸ್ಲಿಮ್ ಯುವತಿಯ ಮೇಲೆ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕಿಯನ್ನು ಬಂಧಿಸಿದ ಪೊಲೀಸರು

0
441

ಸನ್ಮಾರ್ಗ ವಾರ್ತೆ

ಮೀರತ್: ಬರೇಲಿ ನಿವಾಸಿ ಮುಸ್ಲಿಮ್ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರತ್ ಪೊಲೀಸರು ರಾಷ್ಟ್ರೀಯ ಯುವ ಹಿಂದೂ ವಾಹಿನಿಯ ಮುಖಂಡೆ ಹಾಗೂ ಬಿಜೆಪಿ ನಾಯಕಿ ಮೀನಾಕ್ಷಿ ಚೌಹಾಣ್‌ರನ್ನು ಬಂಧಿಸಿದ್ದಾರೆ. ಯುವತಿಯ ಸಹೋದರ ಮೃತನಾಗಿದ್ದು ತನ್ನ ಮನೆಯಲ್ಲಿ ಆಕೆಗೆ ಆಶ್ರಯ ನೀಡಿದ್ದಾಗಿ ಮೀನಾಕ್ಷಿ ಹೇಳಿದ್ದಾರೆ. ಈ ವೇಳೆ ಯುವತಿ ತನ್ನ ಸಹೋದರನೊಂದಿಗೆ ಆಪ್ತಳಾಗಿದ್ದಳು ಎಂದಿದ್ದಾರೆ.

ಬಿಜೆಪಿ ನಾಯಕಿ ತನ್ನ ಸಹೋದರ ಮತ್ತು ಬರೇಲಿಯ ಯುವತಿಯ ವಿಡಿಯೋ ಕ್ಲಿಪ್ಪಿಂಗ್ ಹೊರಬಿಟ್ಟ ಬಳಿಕ ಈ ವಿಷಯ ಚರ್ಚೆಗೆ ಬಂದಿದೆ. ಬಿಜೆಪಿ ನಾಯಕಿಯ ಅಪ್ರಾಪ್ತ ಪುತ್ರ ಸೇರಿದಂತೆ ಮೂವರ ವಿರುದ್ಧ ಸಂತ್ರಸ್ತ ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಇದರಲ್ಲಿ ಬಿಜೆಪಿ ನಾಯಕಿಯೂ ಆರೋಪಿಯಾಗಿದ್ದಾರೆ.

ಬಿಜೆಪಿ ನಾಯಕಿ ಮೀನಾಕ್ಷಿ ಚೌಹಾಣ್ ಸಹೋದರ, ಆಕೆಯ ಮಗ ಮತ್ತು ಇನ್ನೊಬ್ಬರು ತಂಪು ಪಾನೀಯದಲ್ಲಿ ಅಮಲು ಪದಾರ್ಥ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಳು. ಅತ್ಯಾಚಾರ ನಡೆದ ಕುರಿತು ಮೀನಾಕ್ಷಿ ಬಳಿ ಹೇಳಿದಾಗ ನೂರು ಗೋವುಗಳನ್ನು ದಾನ ಮಾಡಿದಂತಾಯ್ತು ಎಂದು ಹೇಳಿ ತನ್ನನ್ನು ಬೆದರಿಸಿದರು. ಪೊಲೀಸರಲ್ಲಿ ದೂರು ನೀಡಿದರೆ ಮುಖ ತೋರಿಸಲು ಲಾಯಕ್ ಇಲ್ಲದಂತೆ ಮಾಡುತ್ತೇನೆ. ನೀನೇ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡುತ್ತೇನೆ ಎಂದು ಥಳಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದರು ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.

ಈ ವೇಳೆ ಸಂತ್ರಸ್ತೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಎಸ್‌ಎಸ್‌ಪಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಮಂಗಳವಾರ ಆರೋಪಿ ಬಿಜೆಪಿ ನಾಯಕಿ ಮೀನಾಕ್ಷಿ ಚೌಹಾಣ್ ಮನೆಯಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದ್ದು ಪೊಲೀಸರು ಮೀನಾಕ್ಷಿ ಚೌಹಾಣ್ ಅವರ ಮನೆ ಮೇಲೆ ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.