“ವಶಕ್ಕೆ ಪಡೆದ 500 ಕೆಜಿ ಗಾಂಜಾ ಇಲಿಗಳು ತಿಂದಿವೆ” ಎಂದ ಯುಪಿ ಪೊಲೀಸರು: ಸಾಕ್ಷ್ಯ ಕೇಳಿದ ನ್ಯಾಯಾಲಯ

0
110

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಶೇರ್‌ಗಢ್ ಮತ್ತು ಹೈವೇ ಪೊಲೀಸ್ ಠಾಣೆಯ ಗೋದಾಮುಗಳಲ್ಲಿ ವಶಕ್ಕೆ ಪಡೆದು ಇರಿಸಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಎನ್‌ಡಿಪಿಎಸ್ (ವಿಶೇಷ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್‌ ಸಬ್‌ಸ್ಟೆನ್ಸಸ್ ಆಕ್ಟ್ -1985) ಅಡಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಮಥುರಾ ಪೊಲೀಸರು ವರದಿ ಸಲ್ಲಿಸಿದ್ದಾರೆ. “ಇಲಿಗಳಿಗೆ ಪೊಲೀಸರ ಭಯ ಇಲ್ಲ. ಪೊಲೀಸರಿಗೆ ಈ ಸಮಸ್ಯೆ ಪರಿಹರಿಸುವಲ್ಲಿ ಪರಿಣಿತರಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಿಸಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಒದಗಿಸುವಂತೆ ಮಥುರಾ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು. ಈ ವೇಳೆ ಪೊಲೀಸರು ನ್ಯಾಯಾಲಯದಲ್ಲಿ ಈ ವಿಚಿತ್ರವಾದ ಪ್ರತಿಪಾದನೆ ಮಾಡಿದ್ದಾರೆ. “ಸಂಗ್ರಹಿಸಿದ ವಸ್ತುಗಳನ್ನು ಇಲಿಗಳಿಂದ ರಕ್ಷಿಸಲು ಪೊಲೀಸ್ ಠಾಣೆಯಲ್ಲಿ ಯಾವುದೇ ಸ್ಥಳವಿಲ್ಲ” ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮೇ ತಿಂಗಳ ವೇಳೆ ಮಥುರಾದಲ್ಲಿ ಟ್ರಕ್ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿತ್ತು. ಆರೋಪಿಗಳು ರಾಗಿ ಮೂಟೆಗಳಲ್ಲಿ 386 ಕೆಜಿ ಗಾಂಜಾವನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು. ಈ ಟ್ರಕ್ ಅನ್ನು ಶೇರ್‌ಗಢ್ ಪ್ರದೇಶದ ಜಟ್ವಾರಿ ಗ್ರಾಮದಲ್ಲಿ ಪೊಲೀಸರು ತಡೆದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇನ್ನೊಂದು ಪ್ರಕರಣದಲ್ಲಿ 195ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ವಶಪಡಿಸಿಕೊಂಡ ಗಾಂಜಾವನ್ನು ಒಪ್ಪಿಸುವಂತೆ ನ್ಯಾಯಾಲಯವು ಪೊಲೀಸರಿಗೆ ತಿಳಿಸಿತ್ತು. ಈ ವೇಳೆ ಶೇರ್‌ಗಡ್ ಪೊಲೀಸರು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಹೇಳಿದ್ದಾರೆ.

ನ್ಯಾಯಾಲಯವು ನವೆಂಬರ್ 18ರ ತನ್ನ ಆದೇಶದಲ್ಲಿ, ಹೆದ್ದಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 195 ಕೆಜಿ ಗಾಂಜಾವನ್ನು ಇಲಿಗಳು ನಾಶಪಡಿಸಿದ ಪ್ರಕರಣವನ್ನು ಉಲ್ಲೇಖಿಸಿ, ಇಲಿಗಳ ಕಾಟವನ್ನು ನಿಯಂತ್ರಿಸಲು ಮತ್ತು ಘಟನೆಗೆ ಸಂಬಂಧಿಸಿ ಪುರಾವೆ ನೀಡಲು ಮಥುರಾ ಎಸ್‌ಎಸ್‌ಪಿಗೆ ಆದೇಶಿಸಿದೆ. ಇಲಿಗಳು ನಿಜವಾಗಿಯೂ 581 ಕೆಜಿ ಗಾಂಜಾವನ್ನು ತಿಂದು ಹಾಕಿವೆ ಎಂಬುದರ ಬಗ್ಗೆ ನವೆಂಬರ್ 26ರೊಳಗೆ ಸಾಕ್ಷ್ಯ ಸಹಿತ ವರದಿ ಸಲ್ಲಿಸುವಂತೆ ಪೊಲೀಸ್ ತಂಡಕ್ಕೆ ಆದೇಶಿಸಿದೆ.