ಪಿಎಮ್‌ಸಿ ಬ್ಯಾಂಕ್ ವಹಿವಾಟಿಗೆ ಪ್ರತಿಬಂಧ ಹೇರಿದ ರಿಸರ್ವ್ ಬ್ಯಾಂಕ್

0
766

ಸನ್ಮಾರ್ಗ ವಾರ್ತೆ

ಮುಂಬೈ,ಸೆ.24: ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್(ಪಿಎಂಬಿ)ವ್ಯವಹಾರ ವಹಿವಾಟುಗಳಿಗೆ ರಿಸರ್ವ್ ಬ್ಯಾಂಕ್ ಪ್ರತಿಬಂಧ ಹೇರಿದೆ. ಮಂಗಳವಾರದಿಂದ ಆರು ತಿಂಗಳವರೆಗೆ ಇದು ಜಾರಿಯಲ್ಲಿರುತ್ತದೆ. ಸೇವಿಂಗ್ ನಿಂದ ಹಿಡಿದು ಎಲ್ಲ ರೀತಿಯ ಬ್ಯಾಂಕ್ ಆಕೌಂಟುಗಳಲ್ಲಿ ಠೇವಣಿದಾರರಿಗೆ ಒಂದು ಸಾವಿರ ರೂಪಾಯಿ ಈ ಅವಧಿಯಲ್ಲಿ ತೆಗೆಯಲು ಮಾತ್ರ ಸಾಧ್ಯ. ಠೇವಣಿ, ಸಾಲ ಇತ್ಯಾದಿ ಚಟುವಟಿಕೆಗಳಿಗೆ ರಿಸರ್ವ್ ಬ್ಯಾಂಕಿನಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ರಿಸರ್ವ್ ಬ್ಯಾಂಕ್ ಆದೇಶದ ಬಳಿಕ ಪಿಎಂಬಿ ನಗರದ ಶಾಖೆಗಳನ್ನು ಮುಚ್ಚಿದ್ದು ವ್ಯವಹಾರ ನಡೆಸುವವರಿಗೆ ದೊಡ್ಡ ಸಂಕಷ್ಟ ತಂದಿದೆ. ಶಾಖೆಗಳ ಮುಂಭಾಗದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದ್ದು ಆದ್ದರಿಂದ ಆರು ತಿಂಗಳ ಪ್ರತಿಬಂಧ ವಿಧಿಸಲಾಗಿದೆ. ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಪಿಎಂಬಿ ಮ್ಯಾನೇಜಿಂಗ್ ಡೈರಕ್ಟರ್ ಜೋಯಿ ಥಾಮಸ್ ತಿಳಿಸಿದರು.

ಸೋಮವಾರ ಬ್ಯಾಂಕ್ ಸಮಯ ಕೊನೆಗೊಳ್ಳುವುದರೊಂದಿಗೆ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್‌ನ 35 ಎ ಪ್ರಕಾರ ಆದೇಶ ಜಾರಿಗೆ ಬಂದಿದೆ ಎಂದು ಆರ್‍‌ಬಿಐ ಪ್ರಕಟಣೆ ತಿಳಿಸಿದೆ. ಮಹಾರಾಷ್ಟ್ರ ಹೊರತು ದಿಲ್ಲಿ, ಕರ್ನಾಟಕ, ಗೋವಾ, ಗುಜರಾತ್, ಆಂಧ್ರ ಪ್ರದೇಶ, ಮಧ್ಯಪ್ರದೇಶಗಳಲ್ಲಿಯೂ ಈ ಬ್ಯಾಂಕ್ ಶಾಖೆಗಳನ್ನು ಹೊಂದಿವೆ.