ಸನ್ಮಾರ್ಗ ವಾರ್ತೆ-
ಕೊಡಗು; ಸೆ. 24- ಕೊಡಗು ಜಿಲ್ಲೆಯ ನೆಲ್ಲಿ ಹುದಿಕೇರಿ ಗ್ರಾಮದ 3 ನೇ ವಾರ್ಡ್ ನಲ್ಲಿ ಪ್ರವಾಹದಿಂದಾಗಿ 34 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು ಸುಮಾರು 22 ಮನೆಗಳು ಭಾಗಶಃ ಹಾನಿಗೀಡಾಗಿದೆ. 40 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದು, ಇಂತಹ ಪ್ರವಾಹ ಈ ಪ್ರದೇಶದಲ್ಲಿ ನೋಡಿರಲಿಲ್ಲ ವೆಂದು ಇಲ್ಲಿಯ ನಿವಾಸಿಗಳು ತಮ್ಮ ಅನುಭವವನ್ನು ಹೆಚ್. ಆರ್. ಎಸ್ ತಂಡದ ಹಂಚಿಕೊಂಡರು. ಈ ಪ್ರದೇಶವು ಕಾವೇರಿ ನದಿ ತೀರವಾಗಿದ್ದು ಇಷ್ಟರ ತನಕ ಯಾರಿಗೂ ಸರಕಾರದ ವತಿಯಿಂದ ಹಕ್ಕುಪತ್ರ ದೊರಕಿರುವುದಿಲ್ಲ. ಆದರೆ ಕುಡಿಯುವ ನೀರು ಪಂಚಾಯತ್ ಒದಗಿಸಿ ಕೊಟ್ಟಿದ್ದು, ವಿದ್ಯುಚ್ಚಕ್ತಿ ಸಂಪರ್ಕ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಗಳನ್ನೂ ಈ ಕುಟುಂಬದವರು ಪಡೆದಿರುತ್ತಾರೆ.
ಪ್ರವಾಹದಿಂದಾಗಿ ಬಹುವಂಶ ದೈನಂದಿನ ಸಾಮಗ್ರಿ, ಪಾತ್ರೆ ಪಗಡಿ, ಬಟ್ಟೆ ಬರೆಗಳು ಹಾಗೂ ಜಾನುವಾರುಗಳು ಕೊಚ್ಚಿ ಹೋಗಿ ಬದುಕು ದುಸ್ತರವಾಗಿ ಪರಿಣಮಿಸಿದೆ. ಸರಕಾರದ ವತಿಯಿಂದ ಶಾಲೆಯಲ್ಲಿ ಗಂಜಿ ಕೇಂದ್ರವು ಸ್ಥಾಪಿಸಲ್ಪಟ್ಟಿದ್ದು ಸಂತ್ರಸ್ತರು ಇಲ್ಲಿ ಉಳಿದುಕೊಳ್ಳಲು ನಿರ್ಬಂಧಿತರಾಗಿದ್ದಾರೆ. ಪ್ರವಾಹದ ನಂತರ ಸರಕಾರದ ವತಿಯಿಂದ ನೆಲೆ ನಿಲ್ಲಲು ಯಾವ ಪರಿಹಾರ ಕಾರ್ಯವಾಗಲಿ, ಯಾವುದೇ ತುರ್ತು ನೆರವು ದೊರಕಿರುವುದಿಲ್ಲ.
ಈ ಸಂದರ್ಭದಲ್ಲಿ ಜಮಾಅತೇ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗದ ಹ್ಯುಮಾನಿಟೇನೀಯಮ್ ರಿಲೀಫ್ ಸೊಸೈಟಿ (ರಿ)ಯ ತಂಡವು ಇಡೀ ಪ್ರದೇಶದ ಸರ್ವೇ ಮಾಡಿ ಅಗತ್ಯವುಳ್ಳ ಎಲ್ಲಾ ಕುಟುಂಬಗಳಿಗೆ ಮಾನವೀಯ ಕರ್ತವ್ಯದ ನೆಲೆಯಲ್ಲಿ ರೇಷನ್ ನ ವ್ಯವಸ್ಥೆ ಮಾಡಿಕೊಟ್ಟಿತು. ಹಾಗೂ ಅಗತ್ಯವುಳ್ಳ ಎಲ್ಲಾ ಕುಟುಂಬಗಳಿಗೆ ಉಳಕೊಳ್ಳಲು 12 * 10 ಚ. ಅ. ಯ ಶೆಡ್ ನಿರ್ಮಿಸಿ ಕೊಡುವ ಯೋಜನೆಯನ್ನು ರೂಪಿಸಿ ಕಾರ್ಯಾಚರಣೆಗೆ ಇಳಿಯಿತು.
ಇದನ್ನು ಮುಂದುವರಿಸಲು ಉಡುಪಿಯಿಂದ ಹೆಚ್ ಆರ್ ಎಸ್ ನ ಜಿಲ್ಲಾ ಸಂಚಾಲಕ ಹಸನ್ ಕೊಡಿಬೆಂಗ್ರೆ ಯವರ ನೇತೃತ್ವದಲ್ಲಿ ಜಮಾ ಆತೇ ಇಸ್ಲಾಮೀ ಹಿಂದ್ ಹೂಡೆಯ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಖಾದರ್, ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪುರವನ್ನು ಸೇರಿಸಿಕೊಂಡು 20 ಮಂದಿಯ ತಂಡ ಸಿದ್ದಾಪುರಕ್ಕೆ ಹೊರಟಿತು. ಅಲ್ಲಿಂದ ಸಿದ್ದಾಪುರ ಜಮಾತ್ ನ ನಾಯಕರ ಮಾರ್ಗದರ್ಶನದ ಮೂಲಕ ಪ್ರವಾಹ ಪೀಡಿತ ಪ್ರದೇಶಕ್ಕೆ ತಲುಪಿತು.
5 ಮಂದಿಯ ನಾಲ್ಕು ತಂಡಗಳನ್ನೂ ರಚಿಸಿ ನಿರಂತರ ಮೂರು ದಿವಸಗಳಲ್ಲಿ 16 ಶೆಡ್ ಗಳನ್ನು ತಯಾರಿಸಿ ಕೊಡಲಾಯಿತು. ತಂಡದ ನಿಸ್ವಾರ್ಥ ಹಾಗೂ ಶಿಸ್ತುಬದ್ಧವಾದ ಕೆಲಸವನ್ನು ನೋಡಿ ವಾರ್ಡ್ ನ ಜನರು ಮೂಕವಿಸ್ಮಿತರಾಗಿ ಆನಂದ ಬಾಷ್ಪ ಸುರಿಸಿದರು.
ನಮ್ಮ ನಮ್ಮ ನಡುವೆ ದೊಡ್ಡ ದೊಡ್ಡ ಸಂಘಟನೆಗಳಿದ್ದು, ರಾಜಕೀಯ ನಾಯಕರಿದ್ದೂ ಯಾರು ಕೂಡಾ ನಮ್ಮನ್ನು ನೋಡಲಿಲ್ಲ. ಜಮಾಅತ್ ಮಾತ್ರ ನಮಗೆ ಸಹಕಾರ ನೀಡಿದ್ದು ಎಂದು ಸಂತ್ರಸ್ತರಾದ ಅನೀಶ್, ರಿಮ್ ಸಮ್, ಶಾಫಿ, ಉನ್ನಿಯವರು ತಂಡದೊಂದಿಗೆ ಬೆರೆತು ಭಾರವಾದ ಹೃದಯದೊಂದಿಗೆ ಬೀಳ್ಕೊಟ್ಟರು.














