ದೊಡ್ಡವರಿಗಾಗಿ ಅಮಾಯಕರ ಬಂಧನವೇ? ಉಳ್ಳಾಲ ಶೂಟೌಟ್ ಪ್ರಕರಣದ ಬಗ್ಗೆ ಎಸ್ಡಿಪಿಐ ತಗಾದೆ; ಅಮಾಯಕರ ಬಿಡುಗಡೆಗೆ ಆಗ್ರಹ

0
1175

ಮಂಗಳೂರು: ಸೆ. 25- ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಖಿಲಿರಿಯಾ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಮತ್ತು ಶೂಟೌಟ್ ಪ್ರಕರಣ ನಡೆದಿರುವುದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಹ ವಿಚಾರ ಎಂದಿರುವ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆಯವರು

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ನೆಪದಲ್ಲಿ ಸ್ಥಳೀಯ ಹಲವಾರು ಯುವಕರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿರುತ್ತಾರೆ. ಅದರಲ್ಲಿ ಕೆಲವರು ಘಟನೆಯಲ್ಲಿ ಭಾಗಿಯಾದವರು ಇದ್ದರು. ಆದರೆ ಪೋಲೀಸರು ಬಂಧಿಸಿರುವ ಯುವಕರ ಪೈಕಿ ರಹಿಮಾನ್, ಆಸಿಫ್, ನಾಝಿಂ, ಅರ್ಶದ್, ಮುಝಮ್ಮಿಲ್, ಸಲ್ಮಾನ್, ಸದ್ದಾಂ ಎಂಬವರು ಅಮಾಯಕರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಯುವಕರ ಬಗ್ಗೆ ಪೋಲಿಸರಿಗೆ ಎಷ್ಟು ಮನವರಿಕೆ ಮಾಡಿಕೊಟ್ಟರು ಕೂಡಾ ಅದಕ್ಕೆ ಸೊಪ್ಪು ಹಾಕದ ಪೋಲೀಸರು ಈ ಯುವಕರ ಮೇಲೆ ಯಾವುದೇ ಕನಿಕರ ಇಲ್ಲದೆ ಕೇಸು ದಾಖಲಿಸಿ ಜೈಲಿಗಟ್ಟಿರುವುದು ಖಂಡನೀಯ ಮತ್ತು ಇದು ಪೋಲೀಸ್ ಕರ್ತವ್ಯಕ್ಕೆ ಮಾಡಿರುವ ದ್ರೋಹ ವಾಗಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೋಲಿಸರ ಈ ನಡೆಯು ಕಾನೂನು ಮತ್ತು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಈ ಬಗ್ಗೆ ಮಾತನಾಡಲು ಹೋದ ಮನೆಯವರಲ್ಲಿ ಪೋಲೀಸರು ಮಾತು ಮಾತಿಗೆ ಈ ಕೇಸಿನಲ್ಲಿ ಏನೂ ಮಾಡಲು ಸಾಧ್ಯವಿಲ್ಲ, ಇದರಲ್ಲಿ ದೊಡ್ಡವರ ಶಾಮೀಲಾತಿ ಇದೆ. ದಯವಿಟ್ಟು ಕ್ಷಮಿಸಿ ಎಂದು ಹೇಳಿರುತ್ತಾರೆ. ಈ ದೊಡ್ಡವರಿಗಾಗಿ ಅಮಾಯಕರನ್ನು ಜೈಲಿಗಟ್ಟಿರುವುದು ಎಷ್ಟು ಸರಿ? ಈ ದೊಡ್ಡವರು ಕಾನೂನಿಗಿಂತ ದೊಡ್ಡವರಾದರೆ? ಈ ದೊಡ್ಡವರಿಗೂ ಪೋಲೀಸರಿಗೂ ಏನು ಸಂಬಂಧ? ಎಂಬ ಉತ್ತರಗಳಿಲ್ಲದ ಪ್ರಶ್ನೆಗಳು ಹಾಗೇ ಉಳಿಯುತ್ತದೆ ಹಾಗೂ ಈ ಕ್ಷೇತ್ರದ ಶಾಸಕರ ಮೌನವು ಕೂಡ ಸಂಶಯಕ್ಕೆ ಎಡೆ ಮಾಡಿ ಕೊಡುತ್ತಿದೆ ಎಂದು ಅವರು ಪ್ರಶ್ನಿಸಿರುತ್ತಾರೆ.

ಅಮಾಯಕ ಯುವಕರನ್ನು ಕೊಲೆಯತ್ನ ದಂತಹ ಗಂಭೀರ ಪ್ರಕರಣದಲ್ಲಿ ಸಿಲುಕಿಸಿ ಕೈಯಲ್ಲಿ ಸ್ಲೇಟು ಹಿಡಿಸಿ ಕ್ರಿಮಿನಲ್ ಗಳಂತೆ ಚಿತ್ರೀಕರಿಸಿ ಸಾರ್ವಜನಿಕ ವಲಯದಲ್ಲಿ ಅವರ ಮಾನ ಹರಾಜು ಹಾಕಿರುವಂತಹದ್ದು ಹಾಗೂ ತಾವು ಮಾಡದ ತಪ್ಪಿಗಾಗಿ ಅಮಾಯಕರನ್ನು ತಿಂಗಳುಗಟ್ಟಲೆ ಜೈಲಿನಲ್ಲಿ ಕಳೆಯಬೇಕಾದಂತೆ ಮಾಡಿರುವುದರ ದುರುದ್ದೇಶ ಏನು ಎಂಬುದು ತಿಳಿಯಬೇಕಾದರೆ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ನಡೆಸಿ ಕನಿಷ್ಠ ಪಕ್ಷ ಚಾರ್ಜ್ ಶೀಟ್ ಸಲ್ಲಿಕೆಯ ಸಂದರ್ಭದಲ್ಲಾದರೂ ಅಮಾಯಕರ ಹೆಸರುಗಳನ್ನು ಕೈಬಿಡುವ ಮೂಲಕ ಕಾನೂನಿನ ಗೌರವವನ್ನು ಉಳಿಸಿಕೊಳ್ಳಬೇಕಾಗಿದೆ ಮತ್ತು ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವ ಮೂಲಕ ಅಮಾಯಕ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ರಿಯಾಝ್ ಫರಂಗಿಪೇಟೆ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.