ಜಮಾಅತೆ ಇಸ್ಲಾಮಿ ಹಿಂದ್ ಸಹಿತ ಮುಸ್ಲಿಂ ಸಂಘಟನೆಗಳು ಮತ್ತು ಆರ್.ಎಸ್.ಎಸ್ ನಡುವೆ ಸಂವಾದ: ವಾಸ್ತವ ಏನು?

0
490

ಸನ್ಮಾರ್ಗ ವಾರ್ತೆ

ಕಳೆದ ವರ್ಷ ಆಗಸ್ಟ್‌ನಲ್ಲಿ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೆಲವು ಪ್ರಮುಖ ಮುಸ್ಲಿಂ ಮುಖಂಡರೊಂದಿಗೆ ನಡೆಸಿದ ಸಂವಾದದ ಮುಂದುವರಿದ ಭಾಗವಾಗಿ ಕೆಲವು ಆರ್ ಎಸ್ ಎಸ್ ಮುಖಂಡರು ಈ ವರ್ಷ ಜನವರಿಯಲ್ಲಿ ಎರಡನೇ ಸಂವಾದ ನಡೆಸಿದರು. ಮೊದಲ ಹಂತದ ಸಂವಾದದಲ್ಲಿ ಭಾಗವಹಿಸಿದ್ದ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಿವಾಸದಲ್ಲಿ ಇದು ನಡೆದಿತ್ತು.

ಆರ್.ಎಸ್.ಎಸ್ ಮುಖಂಡರಾದ ಇಂದ್ರೇಶ್ ಕುಮಾರ್ ಹಾಗೂ ಈ ಹಿಂದೆ ಬಿಜೆಪಿಯ ಸಂಘಟನಾ ಜವಾಬ್ದಾರಿಯನ್ನು ಹೊತ್ತಿದ್ದ ರಾಮ್ ಲಾಲ್ ಕೃಷ್ಣಕುಮಾರ್ ಎಂಬವರನ್ನು ಎರಡನೇ ಹಂತದ ಸಂವಾದಕ್ಕಾಗಿ ಮೋಹನ್ ಭಾಗವತ್ ನೇಮಿಸಿದ್ದರು. ಆಗಸ್ಟ್ ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ಕೇಂದ್ರ ಚುನಾವಣಾ ಕಮಿಷನರ್ ಎಸ್ ವೈ ಖುರೇಶಿ, ಹಿರಿಯ ಪತ್ರಕರ್ತ ಶಾಹಿದ್ ಸಿದ್ದೀಕಿ, ಹೋಟೆಲ್ ಉದ್ಯಮಿ ಸಈದ್ ಶೇರ್ವಾನಿ ಎಂಬವರಲ್ಲದೆ ಜಮಿಯತುಲ್ ಉಲಮಾ ಏ ಹಿಂದ್ ನ ಮೌಲಾನ ನಿಯಾಜ್ ಅಹಮದ್ ಫಾರೂಕಿ, ಮೌಲಾನ ಫಝಲು ರಹ್ಮಾನ್, ಅರ್ಷದ್ ಮದನಿ , ಪ್ರೊಫೆಸರ್‌ ಫುರ್ಖಾನ್ ಖಮರ್, ಪ್ರೊಫೆಸರ್ ರೈಹಾನ್ ಅಹಮದ್ ಖಾಸ್ಮಿ, ಸಲ್ಮಾನ್ ಚಿಶ್ತಿ, ಅಬು ಸುಬ್ಹಾನ್ ಮುಂತಾದವರು ಈ ಸಂವಾದದಲ್ಲಿ ಉಪಸ್ಥಿತರಿದ್ದರು.

ಮೊದಲ ಹಂತದ ಮಾತುಕತೆಯ ಮುಂದುವರಿಕೆಯಾದ್ದರಿಂದ, ಇದರಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಈ ಚರ್ಚೆಗೂ ಮೊದಲು ವಿವಿಧ ಮುಸ್ಲಿಂ ಮುಖಂಡರು ಪರಸ್ಪರ ಸಹಮತಕ್ಕೆ ಬಂದ ಬಳಿಕ ಈ ಸಂವಾದ ನಡೆಯಿತು. ಆರ್.ಎಸ್.ಎಸ್‌‌ನ ಮುಂದಿಡಬೇಕಾದ ವಿಷಯಗಳ ಕುರಿತು ಚರ್ಚಿಸಲು ಮುಸ್ಲಿಂ ಮುಖಂಡರು ಶಾಹಿದ್ ಸಿದ್ದಿಕಿ ಅವರ ಮನೆಯಲ್ಲಿ ಒಟ್ಟು ಸೇರಿದ್ದರು.

ಈ ಸಭೆಯಲ್ಲಿ ಭಾಗವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಅಖಿಲ ಭಾರತೀಯ ಸಹಾಯಕ ಕಾರ್ಯದರ್ಶಿ ಲಯೀಕ್ ಅಹಮದ್ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಅಖಿಲ ಭಾರತೀಯ ಕಾರ್ಯದರ್ಶಿ ಮಲಿಕ್ ಮುಅ್‌ತಸಿಮ್ ಖಾನ್ ರು ಆರ್ ಎಸ್ ಎಸ್ ನೊಂದಿಗಿನ ಸಂವಾದದ ಕುರಿತಂತೆ ಈ ಕೆಳಗಿನ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.

ಮೂಲಭೂತ ಸಮಸ್ಯೆಗಳನ್ನು ಎತ್ತಲು ತೀರ್ಮಾನ

ಮೂಲತಃ ದೇಶದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರವನ್ನು ನಿಯಂತ್ರಿಸುವ ಸಂಘಟನೆ ಎಂಬ ನೆಲೆಯಲ್ಲಿ ಆರ್ ಎಸ್ ಎಸ್ ಮುಂದೆ ಇಡಲಾಗಿದೆ ಎಂದು
ಲಯೀಕ್ ಅಹಮದ್ ಹೇಳಿದರು. ಈ ವಿಷಯದಲ್ಲಿ ಎರಡೂ ಕಡೆಯವರು ತಾವು ಹೇಳಬೇಕಾದುದನ್ನು ಹೇಳಿದರು ಮತ್ತು ಆಲಿಸಬೇಕಾದುದನ್ನು ಆಲಿಸಿದರು .ಯಾವ ವಿಷಯಗಳನ್ನು ಆರ್ ಎಸ್ ಎಸ್ ಮುಂದೆ ಪ್ರಸ್ತಾಪಿಸಬೇಕು ಎಂಬ ಬಗ್ಗೆ ಮುಸ್ಲಿಂ ಸಂಘಟನೆಗಳು ಪರಸ್ಪರ ಒಮ್ಮತಕ್ಕೆ ಬಂದ ಬಳಿಕ ಜಮಾಅತೆ ಇಸ್ಲಾಮಿ ಹಿಂದ್ ತನ್ನ ಪ್ರತಿನಿಧಿಯಾಗಿ ಮಲಿಕ್ ಮುಅ್ ತಸಿಮ್ ರನ್ನು ಕಳುಹಿಸಿತು. ಆದ್ದರಿಂದ ಮುಸ್ಲಿಂ ಸಮುದಾಯಕ್ಕೆ ಏನು ಹೇಳಲಿಕ್ಕಿದೆ ಎಂದು ಬಹಳ ಸ್ಪಷ್ಟವಾದ ಸಂದೇಶವನ್ನು ವಿವಿಧ ಮುಸ್ಲಿಂ ಸಂಘಟನೆಗಳ ತಂಡವು ನೀಡಿತು.

ಆರ್ ಎಸ್ ಎಸ್ ನೊಂದಿಗಿನ ಮಾತುಕತೆ ಹೇಗಿರಬೇಕು ಎಂದು ಮೊದಲೇ ಚರ್ಚಿಸಿ ಸ್ಪಷ್ಟ ತಿಳುವಳಿಕೆಯೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರಿಂದ ಮುಸ್ಲಿಂ ನಾಯಕರುಗಳ ನಡುವೆ ಯಾವುದೇ ರೀತಿಯ ಗೊಂದಲ ವಿರಲಿಲ್ಲ. ಮುಸ್ಲಿಂ ನಾಯಕರು ಎತ್ತಿದ ಕೆಲವು ಸಮಸ್ಯೆಗಳನ್ನು ಒಪ್ಪಿಕೊಳ್ಳಲು ಆರ್ ಎಸ್ ಎಸ್ ನಾಯಕರು ಹಿಂದೇಟು ಹಾಕಿದರು.

ಆರ್ ಎಸ್ ಎಸ್ ಮುಖವಾಣಿಯಾದ ಪಾಂಚಜನ್ಯ ಮತ್ತು ಆರ್ಗನೈಸರ್ ನಲ್ಲಿ ಪ್ರಕಟವಾದ ಮೋಹನ್ ಭಾಗವತರ ವಿವಾದಾತ್ಮಕವಾದ ಸಂದರ್ಶನದ ವಿಷಯವೂ ಅದರಲ್ಲಿತ್ತು. ಸಾವಿರ ವರ್ಷಗಳಿಂದ ಹಿಂದುಗಳು ಯುದ್ಧದಲ್ಲಿದ್ದಾರೆಂದೂ ತಾವೇ ಮೇಲು ಎಂಬ ಭಾವನೆಯನ್ನು ಮುಸ್ಲಿಮರು ತೊರೆಯಬೇಕೆಂದೂ ಮೋಹನ್ ಭಾಗವತ್ ಮಾತು ಸ್ವೀಕಾರಾರ್ಹವಲ್ಲ ಎಂದು ಮುಸ್ಲಿಂ ನಾಯಕರು ಹೇಳಿದರು. ಆರ್ ಎಸ್ ಎಸ್ ಮುಖವಾಣಿಯಲ್ಲಿ ಬಂದದ್ದು ಮೋಹನ್ ಭಾಗವತರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅನಿರೀಕ್ಷಿತವಾಗಿ ಅದು ಸಂಭವಿಸಿದೆ ಎಂಬುದು ಆರ್ ಎಸ್ ಎಸ್ ನ ನಿಲುವು. ಆದರೆ ಮೋಹನ್ ಭಾಗವತರ ಸಂದರ್ಶನ ಆಕಸ್ಮಿಕ ವಲ್ಲವೆಂದೂ ಉದ್ದೇಶಪೂರ್ವಕವಾಗಿ ನೀಡಲಾಗಿದೆ ಎಂದೂ ಮುಸ್ಲಿಂ ನಾಯಕರು ಸ್ಪಷ್ಟಪಡಿಸಿದರು ಮತ್ತು ಆರ್ ಎಸ್ ಎಸ್ ನ ವಾದವನ್ನು ಖಂಡಿಸಿದರು.

ದೇಶದಲ್ಲಿ ನಡೆಯುತ್ತಿರುವ ದ್ವೇಷ ಪ್ರಚಾರ ಮತ್ತು ಅದರಿಂದ ಉಂಟಾಗುತ್ತಿರುವ ಕೋಮು ಧ್ರುವೀಕರಣದ ವಿರುದ್ಧ ಧ್ವನಿಯೆತ್ತಬೇಕೆಂದು ಮುಸ್ಲಿಂ ನಾಯಕರು ಒತ್ತಾಯಿಸಿದರು. ಆದರೆ, ತಾವು ವಿದ್ವೇಷದ ಪ್ರಚಾರವನ್ನು ಬಯಸುವುದಿಲ್ಲವೆಂದು ಆರ್‌ಎಸ್‌ ನ ಪ್ರತಿನಿಧಿಗಳು ಉತ್ತರಿಸಿದರು. ಹಾಗಾದರೆ ಅಂತಹ ಶ್ರಮ ಆರ್ ಎಸ್ ಎಸ್ ನ ನಿಯಂತ್ರಣದಲ್ಲಿರುವ ಕೇಂದ್ರ ಸರಕಾರದ ಭಾಗದಿಂದ ಏಕೆ ನಡೆಯುತ್ತಿಲ್ಲವೆಂದು ಮುಸ್ಲಿಂ ನಾಯಕರು ಪ್ರಶ್ನಿಸಿದರು. ಸರಕಾರ ನಿಮ್ಮದು, ಅಧಿಕಾರದಲ್ಲಿರುವವರು ನಿಮ್ಮವರಾಗಿದ್ದರೂ ಯಾವ ದ್ವೇಷ ಪ್ರಚಾರದ ವಿರುದ್ಧ ಯಾವ ವಿರೋಧವೂ ವ್ಯಕ್ತವಾಗುತ್ತಿಲ್ಲ ಎಂದು ಹೇಳಿದರು. ದ್ವೇಷ ಪ್ರಚಾರ ದೇಶದಲ್ಲಿ ನಡೆಯಬಾರದೆಂದು ಆರ್ ಎಸ್ ಎಸ್ ಹೇಳಿದಾಗ ಆ ನಿಲುವು ಕೆಲಸಗಳಲ್ಲೂ ಕಂಡು ಬರಬೇಕು. ಸರಕಾರದ ಕ್ರಮಗಳಲ್ಲೂ ಅದು ಪ್ರತಿಫಲಿಸಬೇಕು.

ಪ್ರತಿದಿನವೂ ದ್ವೇಷದ ಪ್ರಚಾರ ಪುನರಾವರ್ತನೆಯಾಗುತ್ತಿರುವಾಗ ನಿಮ್ಮ ಚಟುವಟಿಕೆಗಳು ನೀವು ಬಾಯಲ್ಲಿ ಹೇಳುವುದಕ್ಕಿಂತ ಭಿನ್ನವಾಗಿದೆ ಎಂಬುದು ಸ್ಪಷ್ಟ. ಈ ವಿರೋಧಾಭಾಸವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮುಸ್ಲಿಂ ಪ್ರತಿನಿಧಿಗಳು ಸ್ಪಷ್ಟಪಡಿಸಿದರು. ಆರ್ ಎಸ್ ಎಸ್ ನೊಂದಿಗೆ ಮುಸ್ಲಿಮರಿಗೆ ಹೇಳಬೇಕಾಗಿರುವುದನ್ನು ಹೇಳಬೇಕಾದರೆ ಮಾತುಕತೆ ಮುಂದುವರಿಯಬೇಕು. ಅದಲ್ಲದೆ ಬೇರೆ ದಾರಿ ಇಲ್ಲವೆಂಬ ನಿಲುವಿಗೆ ಮುಸ್ಲಿಂ ಸಂಘಟನೆಯ ಪ್ರತಿನಿಧಿಗಳು ಬಂದರು. ಮುಸ್ಲಿಮರಿಗೆ ಹೇಳಲಿಕ್ಕಿರುವುದನ್ನು ಅವರ ಮುಂದಿಡುವುದು ಮಾತ್ರವಲ್ಲ ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ಭಯವನ್ನು ಹರಡುವ ತಂತ್ರಗಳನ್ನು ಹಿಂಪಡೆಯಬೇಕು ಎಂದು ಅವರ ಮೇಲೆ ಒತ್ತಡ ಹೇರಲು ಇಂತಹ ಸಂವಾದಗಳು ಅನಿವಾರ್ಯ ಎಂದು ಲಯೀಕ್ ಅಹಮದ್ ಹೇಳಿದರು.

ದೇಶದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಗುಂಪು ಹತ್ಯೆ, ಗುಂಪು ಆಕ್ರಮಣ, ದ್ವೇಷದ ಕೃತ್ಯಗಳು, ಬುಲ್ಡೋಜರ್ ರಾಜಕೀಯ, ಜನಾಂಗ ಹತ್ಯೆಯ ಕಡೆಗೆ ದೇಶವನ್ನು ಕೊಂಡೊಯ್ಯುತ್ತಿರುವುದು ಮತ್ತು ಸರಕಾರ ಮತ್ತು ಕೆಲವೊಮ್ಮೆ ನ್ಯಾಯಾಲಯಗಳೂ ಮುಸ್ಲಿಮರೊಂದಿಗೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು.

ಅದೇ ವೇಳೆ ಆರ್ ಎಸ್ ಎಸ್ ನಾಯಕರು ಗೋ ಹತ್ಯೆ, ರಾಷ್ಟ್ರೀಯತೆ, ಮುತ್ತಲಾಖ್ ಮೊದಲಾದ ವಿಷಯಗಳನ್ನು ಮತ್ತು ಮುಸ್ಲಿಮರ ಬಹು ಸಂಖ್ಯಾ ಕಾಲನಿಗಳು ಮತ್ತು ಮೊಹಲ್ಲಗಳ ಕುರಿತು ಕೆಲವು ತಪ್ಪು ಕಲ್ಪನೆಗಳನ್ನು ಮುಸ್ಲಿಂ ನಾಯಕರ ಮುಂದಿಟ್ಟರು.
ಹಿಂದೂ ಮುಸ್ಲಿಂ ಬಾಂಧವ್ಯ ಸುಧಾರಿಸುವ ನಿಟ್ಟಿನಲ್ಲಿ ಬಾಬರಿ ಮಸೀದಿ ಕೆಡವಿದ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವುದಲ್ಲದೆ ಕಾಶಿಯ ಗ್ಯಾನ್ ವಾಪಿ ಮಸೀದಿ ಮತ್ತು ಮಥುರಾದ ಈದ್ಗಾ ಮಸೀದಿಯನ್ನು ಮುಸ್ಲಿಮರು ದೇವಾಲಯ ನಿರ್ಮಾಣಕ್ಕೆ ಒಪ್ಪಿಸಬೇಕು ಎಂದು ಆರೆಸ್ಸೆಸ್ ನಾಯಕರು ಆಗ್ರಹಿಸಿದರು. ಇದನ್ನು ಮುಸ್ಲಿಂ ಮುಖಂಡರು ವಿರೋಧಿಸಿದರು.

ಹಾಗಂತ, ಯಾವುದೇ ವಿಷಯದಲ್ಲಿ ಖಚಿತವಾದ ತೀರ್ಮಾನಕ್ಕೆ ಬರಲಾಗಿಲ್ಲ. ಇತರ ಸಮುದಾಯದೊಂದಿಗೆ ಸಹಬಾಳ್ವೆ ಮತ್ತು ಶೈಕ್ಷಣಿಕ ಚಟುವಟಿಕೆಗಳು ಮೊದಲಾದ ವಿಷಯಗಳಲ್ಲಿ ಮುಸ್ಲಿಂ ಸಮುದಾಯದ ನಡುವೆ ಜಾಗೃತಿ ಸೃಷ್ಟಿಸಲು ಮತ್ತು ಹಿಂದೂ ಸಮೂಹದಲ್ಲಿ ಹೆಚ್ಚುತ್ತಿರುವ ವಿದ್ವೇಷವನ್ನು ತಡೆಯಲು ಆರ್ ಎಸ್ ಎಸ್ ನಾಯಕರು ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಚರ್ಚೆಯಲ್ಲಿತ್ತು. ಎರಡೂ ಗುಂಪುಗಳು ತಮಗೆ ಹೇಳಲಿಕ್ಕಿರುವುದನ್ನು ಹೇಳಲು ಇಂತಹ ಮಾತುಕತೆಗಳು ಪುನರಾವರ್ತನೆಯಾಗಬೇಕೆಂಬ ವಿಷಯದಲ್ಲಿ ಆರ್‌ಎಸ್‌ಎಸ್‌ ಮತ್ತು ಮುಸ್ಲಿಂ ಪ್ರತಿನಿಧಿಗಳು ಒಮ್ಮತವನ್ನು ಸೂಚಿಸಿದ್ದಾರೆ ಎಂದು ಮಲಿಕ್ ಮುಅ್‌ತಸಿಮ್ ಸ್ಪಷ್ಟಪಡಿಸಿದರು.