ಸನ್ಮಾರ್ಗ ವಾರ್ತೆ
ಪಾಕಿಸ್ತಾನದ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ನಡುವೆ ದೊಡ್ಡ ಮಟ್ಟದ ಒಪ್ಪಂದ ನಡೆದಿದೆ ಎಂಬ ಊಹಾಪೋಹ ತೀವ್ರಗೊಂಡಿದೆ. ಮತ್ತೊಂದಡೆ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಪಾಕಿಸ್ತಾನದಲ್ಲಿ ಇಲ್ಲ ಎಂಬ ಮಾಹಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿಯೇ ಇಮ್ರಾನ್ ಮತ್ತು ಮುನೀರ್ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದಲ್ಲಿ ಪ್ರಜಾತಂತ್ರ ಸರಕಾರ ಇದ್ದರೂ ಅಲ್ಲಿ ಸೇನೆಗೆ ಮಹತ್ವದ ಪಾತ್ರ ಇದೆ. ಸರಕಾರವನ್ನು ಉರುಳಿಸುವ ಮತ್ತು ಉಳಿಸುವ ಎರಡೂ ಸಾಮರ್ಥ್ಯವನ್ನು ಅಲ್ಲಿನ ಸೇನೆ ಹೊಂದಿದೆ. ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಮತ್ತು ಇಮ್ರಾನ್ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಜಂಗ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಹಿರಿಯ ಪತ್ರಕರ್ತ ಸುಹೇಲ್ ಅವರು ಲೇಖನವನ್ನು ಬರೆದಿದ್ದು ಇಮ್ರಾನ್ ಖಾನ್ ಜೊತೆ ರಾಜಿ ಮಾಡಿಕೊಳ್ಳಲು ಸೇನೆ ಸಿದ್ದವಾಗಿದೆ ಎಂದು ಬರೆದಿದ್ದಾರೆ.
ಆದರೆ ಈ ಊಹಾಪೋಹವನ್ನು ಸೇನೆ ತಿರಸ್ಕರಿಸಿದೆ. ಆದರೆ ಈ ತಿರಸ್ಕಾರದ ಹಿಂದೆ ಒಂದು ಉದ್ದೇಶ ಇದೆ ಎಂಬ ಅಭಿಪ್ರಾಯ ಕೂಡ ಪಾಕಿಸ್ತಾನದಲ್ಲಿದೆ. ಈ ಬಗೆಗಿನ ವರದಿಯನ್ನು ತಕ್ಷಣ ಏಕೆ ನಿರಾಕರಿಸಿಲ್ಲ, ಎಲ್ಲಾ ಕಡೆಯಿಂದ ಪ್ರಶ್ನೆಗಳು ಎದ್ದಾಗ ಸೇನೆ ಈ ನಿರಾಕರಣೆಯನ್ನು ಮಾಡಿದೆ, ಈ ಹಿನ್ನೆಲೆಯಲ್ಲಿ ಸೇನೆ ಮತ್ತು ಇಮ್ರಾನ್ ನಡುವೆ ಒಳ ಒಪ್ಪಂದ ನಡೆದಿದೆ ಎಂಬ ಅಭಿಪ್ರಾಯಕ್ಕೆ ಬಲ ಸಿಕ್ಕಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವಾದಿಸುತ್ತಿವೆ.
ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಇಮ್ರಾನ್ ಖಾನ್ ಅವರು ಜೈಲಲ್ಲಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಒಂದು ಪ್ರಕರಣದ ಹೊರತು ಉಳಿದೆಲ್ಲ ಪ್ರಕರಣಗಳಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆ ಒಂದು ಪ್ರಕರಣದಿಂದಾಗಿ ಅವರು ಈಗ ಜೈಲಲ್ಲಿದ್ದಾರೆ.












