ಧರ್ಮ ನೋಡಿ ಕ್ರೌರ್ಯದ ತೀವ್ರತೆಯನ್ನು ಅಳೆಯುವ ಮಾಧ್ಯಮ ನೀತಿ

0
180

ಸನ್ಮಾರ್ಗ ವಾರ್ತೆ

ಎಂತಹ ದುರಂತ ನೋಡಿ ನಮ್ಮದು.
ಇಂಥಾ ದುಷ್ಕೃತ್ಯಗಳು ಹಿಂದೆಯೂ ನಡೆದಿವೆ, ಈಗಲೂ ನಡೆಯುತ್ತಿವೆ, ಮುಂದೆಯೂ ನಡೆಬಹುದೋ ಏನೊ? ಆದರೆ ಈ ಸುದ್ದಿ ಯಾಕೆ ದೇಶಾದ್ಯಂತ ಮಾಧ್ಯಮಗಳಲ್ಲಿ, ಸಂಘ ಕೂಟದ ಐಟಿ ಸೆಲ್ ಗಳಲ್ಲಿ ಸದ್ದು ಮಾಡ್ಲಿಲ್ಲ.

ಯೋಚಿಸಿ, ಏಕೆಂದರೆ ಅದು ಲವ್ ಜಿಹಾದ್ ಅಂತ ಹೇಳಲಿಕ್ಕೆ ಆಗಲ್ಲ ಅದಕ್ಕೆ. ಅದನ್ನು ಮಾಡಿದ್ದು ಮಾನಸಿಕ ಅಸ್ವಸ್ಥ ಎಂಬ ಸರ್ಟಿಫಿಕೇಟ್ ಸಿಕ್ಕರೂ ಸಿಗಬಹುದು.

ನಾವಿಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಮುಂಬಯಿಯ ಮೀರಾ ರೋಡ್ ನಲ್ಲಿಯ ಮನೋಜ್ ಸಾಹ್ನಿ ಎನ್ನುವವನದು. ಮನೋಜ್ ಸಾಹ್ನಿ ತನ್ನ ಲಿವ್ ಇನ್-ಪಾಟ್ನರ್ ಸರಸ್ವತಿ ವೈದ್ಯ ಎನ್ನುವ ಮಹಿಳೆಯನ್ನು ಕೊಂದು, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ, ಕೆಲ ಅಂಗಾಂಗಳನ್ನು ಕುಕ್ಕರಿನಲ್ಲಿ ಬೇಯಿಸಿ ಆಕೆಯ ಕೊಲೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾನೆ.

ಆದರೆ ಅಕ್ಕ-ಪಕ್ಕದ ಮನೆಯವರಿಗೆ ಅನುಮಾನ ಬಂದು ಪೋಲೀಸರಿಗೆ ದೂರು ಕೊಟ್ಟಿದ್ದರಿಂದ ಮನೋಜನ ಬಂಧನವಾಗಿದೆ.

ಇಂತಹ ಕುಕೃತ್ಯ, ಈ ರೀತಿಯ ಮನೋವೀಕೃತಿ ಯಾಕೆ ಮಾಧ್ಯಮಗಳಲ್ಲಿ ಚರ್ಚೆಯ ವಿಷಯ ಆಗಿಲ್ಲ ಆಗುತ್ತಿಲ್ಲ. ಮನೋಜ ಎಂಬವನ ಜಾಗದಲ್ಲಿ ಸಿರಾಜ್ ಇದ್ದಿದ್ದರೆ ಏನಾಗುತ್ತಿತ್ತು. ಚರ್ಚೆಯ ಹಾದಿ ಎತ್ತ ಸಾಗುತ್ತಿತ್ತು. ಸಿರಾಜ್ ಎಂಬವ ಹೀಗೆ ಮಾಡಿದ್ದರೂ ಸಹಿಸಿಕೊಂಡಿರಬೇಕು ಎಂದು ನಾವಿಲ್ಲಿ ಹೇಳುತ್ತಿರುವುದಲ್ಲ. ಬದಲಿಗೆ ವಿಕೃತಿಯನ್ನು ಕೇವಲ ವಿಕೃತಿಯಾಗಿ ನಮ್ಮ ಮಾಧ್ಯಮದವರು ನೋಡದೇ ಅದನ್ನು ಜಾತಿ-ಧರ್ಮದ ಆಧಾರದಲ್ಲಿ ನೋಡಿ ಆಧ್ಯತೆ ನೀಡುತ್ತಿವೆ ಎಂಬುದು ಮನವರಿಕೆ ಮಾಡುವುದು ನಮ್ಮ ಉದ್ದೇಶ.

ಇಂತಹ ವಿಕಾರತೆಗೆ ಜಾತಿ, ಧರ್ಮ, ಪಂಗಡಗಳ ಹಂಗಿಲ್ಲ. ಎಲ್ಲದರಲ್ಲೂ ಇಂಥಾ ಪಟಿಂಗರು ಇದ್ದಾರೆ. ಆದರೆ ಇಂತಹಾ ದುಃಖದಾಯಕ ದುರಂತಗಳಲ್ಲೂ ಸಂಘ ಕೂಟ ಮತ್ತು ಅವರಿಂದ ಪ್ರೇರಿತ ಮಾಧ್ಯಮಗಳು ಹಿಂದೂ-ಮುಸ್ಲಿಮರನ್ನು ಹುಡುಕುತ್ತಿರುವುದಕ್ಕೆ ಬೇಸರವಾಗುತ್ತದೆ. ಕೊಳೆತು ನಾರುವ ಘಟನೆಗಳಲ್ಲೂ ಜಾತಿ, ಧರ್ಮ, ಪಂಗಡಗಳ ಘಮ ಘಮ ಪರಿಮಳವನ್ನು ನಮ್ಮ ಮಾಧ್ಯಮಗಳು ಹುಡುಕುತ್ತವೆ. ಅವರು ಹುಡುಕುವ ಪರಿಮಳ ಸಿಗಲಿಲ್ಲ ಎಂದರೆ, ಅದನ್ನು ಹಾಗೆಯೇ ಕೊಳೆಯಲು ಬಿಟ್ಟು ಮುಂದೆ ಸಾಗುತ್ತವೆ. ಎರಡೂ ಧರ್ಮಗಳವರೂ ಇದ್ದು ಪರಸ್ಪರ ವೈರುದ್ಯದಿಂದ ಕೃತ್ಯ ನಡೆದಿದೆಯೋ ಅವುಗಳನ್ನಷ್ಟೆ ಆಯ್ದು ಆಯ್ದು ಪ್ರಚಾರ ಮಾಡಿ, ಸೌಹಾರ್ದ ಭಾರತದ ಜೀವಾಳವಾದ ಸಹೋದರತೆ ಭಾವನೆಯನ್ನೇ ಘಾಸಿಗೊಳಿಸುತ್ತಿವೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಸಾಹಿಲ್ ಎಂಬಾತ ಹತ್ತಾರು ಜನಗಳು ಹಾದು ಹೋಗುವ ದಾರಿಯಲ್ಲೇ ಎಲ್ಲರೆದುರು ತನ್ನ ಪ್ರೇಯಸಿ ಸಾಕ್ಷಿಯನ್ನು ಇರಿದು, ಜಜ್ಜಿ ಕೊಲೆ ಮಾಡಿದ್ದ. ಸಾಹಿಲ್ ಎಂದಾಗುತ್ತಲೇ ಅದಕ್ಕೆ ಖಾನ್ ಜೋಡಿಸಿ ಲವ್ ಜಿಹಾದ್ ಎಂದು ಬಹಳ ಗಡಿಬಿಡಿಯೊಂದಿಗೆ ಪ್ರಚಾರ ಮಾಡಲಾಯಿತು. ಮುಸ್ಲಿಮರ ಹುಡುಗರು ಹಿಂದೂ ಯುವತಿಯರನ್ನು ಪ್ರೇಮಿಸುವ ನಾಟಕ ಮಾಡುವುದೇ ಅವರನ್ನು ಮತಾಂತರಗೊಳಿಸಲು ಇಲ್ಲ ಕೊಲ್ಲಲು ಎಂದು ಸುದ್ದಿ ಸರಬರಾಜು ಮಾಡಲಾಯಿತು. ಮುಖ್ಯವಾಹಿನಿಗಳಲ್ಲಿ ಅಭಿಪ್ರಾಯ ಸಂಗ್ರಹ ಮತ್ತು ಚರ್ಚೆಗಳೂ ಆರಂಭಗೊಂಡಿದ್ದವು. ಅಷ್ಟರಲ್ಲಾಗಲೇ ಸಾಹಿಲ್ ಎಂಬಾತ ಮುಸ್ಲಿಮ್ ಅಲ್ಲ ಎಂಬ ಸತ್ಯವನ್ನು ದೆಹಲಿ ಪೊಲೀಸರು ಸ್ಪಷ್ಟಪಡಿಸಿದರು. ಈ ಸತ್ಯ ಹೊರಬಿದ್ದಿದ್ದೇ ತಡ ಇಂತಹ ಘಟನೆಯೇ ನಡೆದಿಲ್ಲ ಎನ್ನುವಂತೆ ಮಾಧ್ಯಮಗಳು ವರ್ತಿಸಿದವು. ಅಭಿಪ್ರಾಯ ಸಂಗ್ರಹ, ಚರ್ಚೆಗಳು ಬಿಡಿ ಫಾಲೋಅಪ್ ನ್ಯೂಸ್ ಮಾಡಬೇಕು ಎಂದು ಕೂಡ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಅನಿಸಲಿಲ್ಲ.
ಹಾಗೆಯೇ ವಿಕೃತಿಯ ಒಂದಿಷ್ಟು ಘಟನೆಗಳನ್ನು ನಿಮ್ಮೆದುರು ಇಡುತ್ತಿದ್ದೇನೆ.

ಹೈದರಾಬಾದಿನಲ್ಲಿ ಚಂದ್ರ ಮೋಹನ್ ಎಂಬಾತ ತನ್ನ ಲಿವ್ ಇನ್ ಪಾಟ್ನರ್ ಅನುರಾಧ ರೆಡ್ಡಿಯನ್ನು ತನ್ನದೇ ಮನೆಯಲ್ಲಿ ಕೊಂದು, ಆಕೆಯ ದೇಹವನ್ನು ಸ್ಟೋನ್-ಕಟ್ಟರ್ ಮೂಲಕ್ ತುಂಡರಿಸಿ, ಫ್ರಿಡ್ಜ್ ನಲ್ಲಿಟ್ಟಿದ್ದಾನೆ. ರುಂಡ-ಮುಂಡ ಬೇರೆ ಮಾಡಿದ್ದು ಮಾತ್ರವಲ್ಲ, ಆಕೆಯ ಎರಡೂ ಕಾಲುಗಳನ್ನೂ, ಕೈಗಳನ್ನೂ ತುಂಡರಿಸಿ, ಒಂದೊಂದಾಗಿ ಎಸೆದಿದ್ದಾನೆ. ಕೊನೆಗೆ ಕಸದ ಗುಂಡಿಯಲ್ಲೆಸೆದ ಅನುರಾಧಳ ರುಂಡದ ಮೂಲಕ ಆಕೆಯ ಗುರುತು ಹಚ್ಚಿ, ಕೊಲೆಗಾರ ಚಂದ್ರ ಮೋಹನ್ ನನ್ನು ಮೇ 25 ರಂದು ಬಂಧಿಸಲಾಗಿತ್ತು.

ಸಾಹಿಲ್ ಎಂಬಾತ ಖಾನ್ ಆದಾಗ ಆತನ ಕ್ರೌರ್ಯವನ್ನು ಆತನ ಧರ್ಮಕ್ಕೆ ಥಳುಕು ಹಾಕಿ, ಆತನನ್ನೂ ಆತನ ಸಮುದಾಯವನ್ನೂ ದ್ವೇಷಿಸುವ ನಮ್ಮ ಸೋ ಕಾಲ್ಡ್ ಶಿಕ್ಷಿತ, ಹೈ-ಕ್ಲಾಸ್ ಮಾಧ್ಯಮದವರು ಮತ್ತು ಜನರು, ಚಂದ್ರ ಮೋಹನ್, ಮನೋಜ್ ಸಾಹ್ನಿ ಹಾಗೂ ಮುಸ್ಲಿಮ್ ಅಲ್ಲದ ಸಾಹಿಲ್ ಆದಾಗ ತೆಪ್ಪಗಾಗಿ ಬಿಡುತ್ತಾರೆ. ಇವರು ಅಶಿಕ್ಷಿತರು, ಅರೆ-ಶಿಕ್ಷಿತರಲ್ಲ ಬದಲಾಗಿ, ಬ್ಯಾಂಕು, ಐಟಿ-ಬಿಟಿ, ಸರ್ಕಾರಿ ನೌಕರಿಗಳಲ್ಲಿರುವವರು. ಇವರ ಜೀವನವಿಡೀ ಮುಸ್ಲೀಮರನ್ನು ದ್ವೇಷಿಸುವುದರಲ್ಲೇ ಕಳೆದು ಹೋಗುತ್ತೆ. ಮುಸ್ಲೀಮರು ಅಪರಾಧ ಮಾಡಿದರೆ ಅವರು ಭಯೋತ್ಪಾದಕರು. ಮಸ್ಲಿಮರಲ್ಲದವರು ಅಪರಾಧ ಮಾಡಿದರೆ ಅವರು ಮಾನಸಿಕ ಅಸ್ವಸ್ಥರು. ದೇಶದಲ್ಲಿ ಎಲ್ಲಿ, ಏನೇ ಆಗಲಿ ಅಲ್ಲಿ ಮುಸ್ಲಿಮರು ಇದ್ದಾರೆಯೇ ಎಂದು ಹುಡುಕುತ್ತಿರುತ್ತಾರೆ.

ಮೊನ್ನೆ ಒಡಿಶಾದ ರೈಲು ಅಪಘಾತವಾದಾಗಲೂ ಅಲ್ಲಿದ್ದ ಗುಡಿಯನ್ನೇ ಮಸೀದಿ ಎಂದು ತೋರಿಸಿದರು. ಸ್ಟೇಶನ್ ಮಾಸ್ಟರ್ ಮುಸ್ಲಿಮ್ ಎಂದೇ ಮಿಥ್ಯ ಪ್ರಚಾರ ಮಾಡಿದರು. ಈ ಅಪಘಾತಕ್ಕೆ ಮುಸ್ಲಿಮರು ಕಾರಣವೆಂದು ತೋರಿಸಲು ಸಂಚು ಹೂಡಿದರು.

ಹಾಗೆ ನೋಡಿದರೆ ಇಂಥ ಪೋಸ್ಟ್ ಸೃಷ್ಟಿಸಿದ ಹಾಗೂ ಹಂಚಿದ ಎಲ್ಲರ ಮೇಲೂ ದೇಶದ್ರೋಹ, ಗಲಭೆ ಹಾಗೂ ಸಾಮೂಹಿಕ ಹತ್ಯೆಗೆ ಪ್ರಚೋದನೆ ಮುಂತಾದ ಪ್ರಕರಣಗಳನ್ನು ದಾಖಲಿಸ ಬೇಕಿತ್ತು. ಆದರೆ ಅದು ಆಗಲ್ಲ ಯಾಕೆಂದರೆ ಅವರು ಮಾನಸಿಕ ಅಸ್ವಸ್ಥರು. ಅಪ್ಟರಾಲ್ ಮಾನಸಿಕವಾಗಿ ಸರಿಯಾಗಿರುವ ಯಾರೂ ಈ ಸಿದ್ದಾಂತದ ಪರವಿರಲು ಸಾಧ್ಯವಿಲ್ಲವೆಂದು ಅವರೇ ಆಗಾಗ್ಗೆ ಸಾಬೀತು ಪಡಿಸುತ್ತಿದ್ದಾರೆ.

ಎಲ್ಲದರಲ್ಲೂ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕಲ್ಲವೇ ?
ಯೋಚಿಸಿ, ಚಿಂತಿಸಿ, ನಮಗೇನು, ನಾವು ಹೀಗೆಯೇ ಇರೋದು, ನಮಗೇನು ತೊಂದರೆ ಇಲ್ಲಾ…. ಅಂತ ನಿರ್ಲಕ್ಷ್ಯದಿಂದ ನಾವಿದ್ದರೆ ನಾಳೆ ನಮ್ಮನ್ನೇ ಸುಡಲು ಬರಲಿದೆ ಆ ಬೆಂಕಿ.

  • ಲೋಹಾನಿ