ಧರ್ಮಗಳು ಹೃದಯಗಳನ್ನು ಬೆಸೆಯುವ ಪಾಠ ಕಲಿಸುತ್ತವೆ: ಡಾ. ಸಲೀಮ್ ಇಂಜಿನಿಯರ್

0
191

ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆಯಿಂದ “ಸರ್ವ ಧರ್ಮಗಳ ದುಂಡು ಮೇಜಿನ ಸಭೆ”

ಸನ್ಮಾರ್ಗ ವಾರ್ತೆ

ಬೆಂಗಳೂರು: ನಮ್ಮ ದೇಶವು ಧರ್ಮ ಪ್ರಧಾನ ದೇಶವಾಗಿದ್ದು ಇಲ್ಲಿರುವಷ್ಟು ಧರ್ಮಗಳು ಜಗತ್ತಿನ ಬೇರಾವ ದೇಶದಲ್ಲಿಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗುರುತಿಸಬೇಕೆಂದು ದೇಶದ ಸಂವಿಧಾನ ನಮಗೆ ಕಲಿಸುತ್ತದೆ. ಆದರೆ, ದುರಾದೃಷ್ಟವಶಾತ್, ಇಂದು ಕೆಲವು ಶಕ್ತಿಗಳು ಧರ್ಮದ ವೇಷವನ್ನು ಧರಿಸಿಕೊಂಡು ಅಧರ್ಮವನ್ನು ಪ್ರಚಾರ ಪಡಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ಡಾ. ಮುಹಮ್ಮದ್ ಸಲೀಮ್ ಇಂಜಿನಿಯರ್ ಸಂಚಾಲರು, ಧಾರ್ಮಿಕ್ ಜನ್ ಮೋರ್ಚ, ದೆಹಲಿ ತಿಳಿಸಿದರು.

ಅವರು ಇನ್ಸ್ಟಿಟ್ಯೂಷನ್ ಅಗ್ರಿಕಲ್ಚರಲ್ ಟೆಕ್ನಾಲಜಿಸ್ಟ್ ನಲ್ಲಿ ಜರುಗಿದ ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆಯಿಂದ ಜರುಗಿದ ಸರ್ವ ಧರ್ಮಗಳ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.

ವಿವಿಧ ಧರ್ಮಗಳ ಧಾರ್ಮಿಕ ಮುಖಂಡರ ನಡುವೆ ಸಂವಹನದ ವಾತಾವರಣ ಬೆಳೆಯಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ. ನಾವು ಪರಸ್ಪರ ಹೆಚ್ಚು ಪರಿಚಿತರಾಗದಿರುವುದರಿಂದ ಇಲ್ಲಿ ಧರ್ಮಗಳ ನಡುವೆ ಸಂಶಯದ ಗೋಡೆಗಳು ನಿರ್ಮಾಣಗೊಂಡಿದೆ. ಜನರ ಮಧ್ಯೆ ಘರ್ಷಣೆ ಕಾರಣ ಧರ್ಮವಲ್ಲ. ಧರ್ಮಗಳು ಹೃದಯಗಳನ್ನು ಬೆಸೆಯುವ ಪಾಠ ಕಲಿಸುತ್ತದೆ. ನಮ್ಮ ಅಭಿಪ್ರಾಯ, ಆಚರಣೆಗಳು ಭಿನ್ನವಾಗಿರಬಹುದು. ಆದರೆ, ಮನುಷ್ಯರೆಂಬ ನೆಲೆಯಲ್ಲಿ ನಾವೆಲ್ಲರೂ ಪರಸ್ಪರ ಸಮಾನರಾಗಿದ್ದೇವೆ. ರಾಜಕಾರಣಕ್ಕಾಗಿ ಇಂದು ಧರ್ಮವನ್ನು ಬಳಸುತ್ತಿರುವುದನ್ನು ತಡೆಯಬೇಕಾದ ಅಗತ್ಯವಿದೆ ಎಂದವರು ಕರೆ ನೀಡಿದರು.

ಆರ್ಯ ಸಮಾಜದ ಋಷಿ ಮಿತ್ರ ವನಪ್ರಸ್ಥಿ ಸ್ವಾಮೀಜಿ, ಸ್ವಾಮಿ ದಿವ್ಯ ಜ್ಞಾನಾನಂದ, ಸಿಖ್ ಧರ್ಮಗುರು ಜಸ್ಬೀರ್ ಸಿಂಗ್,ಮೌಲಾನಾ ಇಫ್ತಿಕಾರ್ ಖಾಸಿಮೀ, ವಹೀದುದ್ದೀನ್ ಖಾನ್ ಉಮರಿ, ಡಾ. ಬೆಳಗಾಮಿ ಮುಹಮ್ಮದ್ ಸಾದ್, ಇನ್ನಿತರು ಭಾಗವಹಿಸಿದ್ದರು. ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆಯ ಸಂಚಾಲಕರಾದ ಮುಹಮ್ಮದ್ ಕುಂಞಿ‌ಯವರು ಪ್ರಾಸ್ತಾವಿಕ ಮಾತನಾಡಿದರು.