ಯಾವ ಅಪರಾಧಕ್ಕಾಗಿ ನಿನ್ನನ್ನು ಕೊಲ್ಲಲಾಯಿತು?

0
15868

ಸನ್ಮಾರ್ಗ ವಾರ್ತೆ

ಸದ್ರುದ್ದೀನ್ ವಾಯಕ್ಕಾಡ್

ಒಂದು ಮಗುವಿನ ಹತಾಶೆಯ ನೋವಿನ ಕೂಗಿಗೆ ನನ್ನ ಮನಸ್ಸು ಮಿಡಿದ ದಿನವದು. ಮಾತುಗಳು ಮೌನವಾದವು. ಬೆರಳು ಗಳು ನಿಶ್ಚಲವಾದವು. ಚಿಂತೆಯ ಚಿತೆಯು ಆ ಮಾತೃ ಹೃದಯದ ನೋವನ್ನು ದಾಟಿ ಹೋಗುವಂತಿರಲಿಲ್ಲ. ಆ ದೃಶ್ಯವನ್ನು ನೋಡಿ ಹೃದಯವು ಅತ್ತು ಬಿಟ್ಟಿತು. ವಿಲವಿಲನೆ ಒದ್ದಾಡಿತು. ಆ ಮಾತೃ ಹೃದಯದ ನೋವಿನ ಬೆಲೆ ಏನೆಂದು ಆಗ ಅರ್ಥವಾಯಿತು.

ಯಾವುದೋ ರಾಜ್ಯದಿಂದ ಎಲ್ಲಿಂದಲೋ ಉದ್ಯೋಗ ನೌಕರಿ ಹುಡುಕಿಕೊಂಡು ಬಂದ ಒಂದು ಕುಟುಂಬ. ಅದು ಮರಳಿ ತನ್ನ ಊರಿಗೆ ಅಂದರೆ ನೂರಾರು ಕಿಲೋ ಮೀಟರ್ ದೂರದ ತನ್ನ ಊರಿಗೆ ನಡೆದುಕೊಂಡು ಹೋಗುತ್ತಿದೆ. ಅದು ಕೂಡಾ ಸುಡು ಬಿಸಿಲಿನ ನಡುವೆ. ಈ ಪಯಣದಲ್ಲಿ ತಾಯಿಯ ಭುಜದಲ್ಲಿ ಹಸಿದು ಬಳಲಿದ ಹಸುಗೂಸು ಕೂಡಾ ಇದೆ. ಅದು ನಡು ನಡುವೆ ಅಳುತ್ತಿದೆ. ಮತ್ತೆ ಮೌನಕ್ಕೆ ಶರಣಾಗುತ್ತಿದೆ. ಬಳಲಿದ ಮಗುವನ್ನೊಮ್ಮೆ ಆ ತಾಯಿ ಆಗಾಗ ಎದೆಗೆ ಅಪ್ಪಿಕೊಳ್ಳುತ್ತಿದೆ. ನಡೆದು ನಡೆದು ಕಾಲಿನ ಸುತ್ತಲೂ ಒಡೆದು ಹೋದ ಮತ್ತೋರ್ವ ಬಾಲಕಿಯೂ ಕಣ್ಣೀರು ಸುರಿಸುತ್ತಾ ಇವರ ಜೊತೆ ನಡೆಯುತ್ತಿದ್ದಾಳೆ.

ಕೆಲ ದಿನಗಳ ಮುಂದೆ ಕಂಡ ಈ ದೃಶ್ಯವು ನನ್ನ ಒಡಲನ್ನೇ ಭೇದಿಸುವಂತಿತ್ತು. ಆ ಮಗುವಿನ ಆರ್ತನಾದಕ್ಕೆ ಉತ್ತರವನ್ನು ಹುಡು ಕುತ್ತಾ ದೇವಗ್ರಂಥದತ್ತ ಮನಸ್ಸು ಚಲಿಸಿತು. ಉತ್ತರದ ಸರಣಿಗಳು ಒಂದೊಂದಾಗಿ ನನ್ನ ಮುಂದೆ ತೆರೆದವು. ನ್ಯಾಯದ ಕುರಿತಾದ ಹಲವಾರು ವಿಚಾರಗಳು ಸುಳಿದವು.

“ಜೀವಂತವಾಗಿ ಹೂಳಲ್ಪಟ್ಟ ಆ ಹೆಣ್ಣು ಮಗುವಿನೊಡನೆ ಯಾವ ತಪ್ಪಿಗಾಗಿ ನಿನ್ನನ್ನು ಕೊಲ್ಲಲಾಯಿತು. ಎಂದು ಕೇಳಲ್ಪಡುವಾಗ? ತಮ್ಮ ಕರ್ಮ ಪತ್ರಗಳು ತೆರೆಯಲ್ಪಡುವಾಗ ಆಕಾಶದ ತೆರೆಯು ಸರಿಸಲ್ಪಡುವಾಗ.”

ದೇವ ಗ್ರಂಥಧ ಎಂಬತ್ತೊಂಬತ್ತನೆಯ ಅಧ್ಯಾಯದ ಎಂಟರಿಂದ ಹನ್ನೊಂದರ ವರೆಗಿನ ಸೂಕ್ತಗಳು. ಹೆಣ್ಣಾಗಿ ಹುಟ್ಟಿದ ತಪ್ಪಿಗಾಗಿ ಜೀವಂತವಾಗಿ ಹೂಳಲ್ಪಟ್ಟ ಮಗುವನ ಪರವಾಗಿ ಅಂದು ಆಕಾಶ ಜಗತ್ತಿ ನಿಂದ ಸೂಕ್ತಗಳು ಅವತೀರ್ಣಗೊಂಡಿದ್ದವು. ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡಾ ಇಂದು ಮರಣದ ಅಂಚಿಗೆ ಪ್ರಜ್ಞಾಪೂರ್ವಕವಾಗಿ ಬಹಿರಂಗವಾಗಿಯೇ ತಳ್ಳಲ್ಪಡುತ್ತಿದ್ದಾರೆ. ನಿನ್ನೆಯ ತನಕ ವಾಹನಗಳಿಂದ ಗಿಜಿಗಿಡುತ್ತಿದ್ದ ರಸ್ತೆಗಳು! ಇಂದು ಎಷ್ಟೋ ಬಾಲಕ ಬಾಲಕಿಯರ ಎಳೆಯರ ಪಾದಗಳು ಸಂಚರಿಸುತ್ತಿವೆ. ರಸ್ತೆ ಯಲ್ಲಿಯೇ ಸುಡುಬಿಸಿಲಿನಲ್ಲಿಯೇ ಅನೇಕ ಎಳೆಯ ಬಾಲಕ ಬಾಲಕಿಯರ ಪ್ರಾಣಗಳು ಆಹುತಿಯಾಗುತ್ತಿವೆ, ಅಂದು ಅವಮಾನ ವೆಂದು ಬಗೆದು ಹೆಣ್ಮಕ್ಕಳನ್ನು ಜೀವಂತವಾಗಿ ಹೂಳಲಾಗುತ್ತಿತ್ತು. ಇಂದು ನಿರ್ಲಕ್ಷ್ಯತೆ, ಮತ್ತು ಅವಗಣನೆಗೆ ಒಳಗಾದ ವಲಸೆ ಕಾರ್ಮಿಕರ ಸಮೂಹವನ್ನು ಮರಣದ ಅಂಚಿಗೆ ತಳ್ಳಲಾಗಿದೆ. ಗುಂಡಿಯನ್ನು ಅಗೆದು ತೆಗೆದು ಅದರೊಳಗೆ ಪುಟ್ಟ ಮಗುವನ್ನು ಜೀವಂತವಾಗಿ ತಳ್ಳಿಹಾಕಿ ಮಣ್ಣು ಹಾಕಲ್ಪಡುವ ಸಂದರ್ಭದಲ್ಲಿ ಆ ಮಗುವಿನ ರೋದ ನವನ್ನು ಒಮ್ಮೆ ಊಹಿಸಿ ನೋಡಿರಿ.! ಅದೇ ಮರಣ ವೇದನೆಯ ಚಡಪಡಿಸುವಿಕೆ ರೋಧನವು ಇಂದು ನಮ್ಮ ಬೀದಿಯಲ್ಲಿ ಮಾರ್ದನಿಸುತ್ತಿವೆ. ಯಾವ ತಪ್ಪಿಗಾಗಿ ಈ ಮಕ್ಕಳನ್ನು ಬೀದಿಗೆ ತಳ್ಳಲಾಯಿತು.. ನಮಗೆ ನೆರಳಾಗಿ ನಮ್ಮ ಮಾನ ಕಾಪಾಡಲು ಮನೆ ನಿರ್ಮಿಸಿಕೊಟ್ಟ ಕಾರಣಕ್ಕಾಗಿಯೋ? ಕಾರಲ್ಲಿ ಸುಗಮವಾಗಿ ಸಾಗುವಂತೆ ರಸ್ತೆಗಳನ್ನು ಮಾಡಿಕೊಟ್ಟ ಕಾರಣಕ್ಕಾಗಿಯೋ?

ಅಧಿಕಾರಿಗಳು ಈ ಪ್ರಶ್ನೆಯನ್ನು ಕೇಳಲಾರರು. ಅವರು ಕಣ್ಣು ಮುಚ್ಚಿ ನಿದ್ದೆಯ ಮಂಪರಿನಲ್ಲಿರಬಹುದು. ದಾರಿ ದೀಪಗಳನ್ನು ಆರಿಸಿರಬಹುದು, ಕ್ಯಾಮರಾಗಳ ಕಣ್ಣುಗಳನ್ನು ಮುಚ್ಚಿರಬಹುದು. ಅದು ತೆರೆಯಬೇಕಾದರೆ ಮತ್ತೆ ಕೋಮು ವೈಷಮ್ಯದ ಅಲೆ ಭುಗಿಲೇಳಬೇಕು! ಆದರೆ ಆಕಾಶದ ಕಣ್ಣುಗಳು ತೆರೆದೇ ಇದೆ. ದೇವನು ನಿಕ್ಷೇಪಿಸಿದ ಉಪಗ್ರಹಗಳು ಅದನ್ನು ಚಿತ್ರೀಕರಿಸುತ್ತಿವೆ. ಎಲ್ಲ ಮುಗಿದು ಒಂದು ದಿನ “ಆಕಾಶದ ಪರದೆಯನ್ನು ಸರಿಸಿದಾಗ”! ಆರಾಧನಾಲಯಗಳಿಗೆ ಹೆಜ್ಜೆಗಳು ಮಾತ್ರವಲ್ಲ. ಇಂದು ಕಾಣುವ ಈ ನಡೆ, ಅರಣ್ಯ ರೋಧನಗಳು, ಹಸಿವು ದಾಹಗಳಿಂದ ಆವೃತವಾದ ಕರುಳಿನ ಕೂಗಿನ ಚಡಪಡಿಸುವಿಕೆ ಎಲ್ಲವೂ ಮತ್ತೆ ಕಣ್ಣ ಮುಂದೆ ಪ್ರದರ್ಶಿಸಲ್ಪಡುವುದು. ಮರ್ದಕನ ಮತ್ತು ಮರ್ದಿತರ ಕರ್ಮ ಪುಸ್ತಕಗಳು ತೆರೆಯಲ್ಪಡುವುದು! ದೇವನ ನ್ಯಾಯಾಲಯದಲ್ಲಿ ಇವರನ್ನು ಹಾಜರು ಪಡಿಸಲಾಗುವುದು. ಅಲ್ಲಿ ನ್ಯಾಯಪೂರ್ಣವಾದ ವಿಚಾರಣೆ ನಡೆದು ತೀರ್ಪು ನೀಡಲಾಗುವುದು. ಅಂದು ಈ ಮರ್ದಿತ ಜನರೊಂದಿಗೆ ಮತ್ತವರ ಹಸುಗೂಸುಗಳ ಬಾಲಕ ಬಾಲಕಿಯರ ಜೊತೆ ದೇವನು ಪ್ರಶ್ನಿಸುವನು.

“ಯಾವ ಅಪರಾಧಕ್ಕಾಗಿ ನಿಮ್ಮನ್ನು ಕೊಲ್ಲಲಾಯಿತು ಎಂದು ಅವಳೊಡನೆ ಕೇಳಲ್ಪಡುವಾಗ” ಈ ಪವಿತ್ರ ವಚನದ ಬಗ್ಗೆ ಹಲವಾರು ಬಾರಿ ಚಿಂತಿಸಿದ್ದೇನೆ. ಆದರೆ ಈಗ ಅದು ಅನುಭವಕ್ಕೆ ಬಂದಿದೆ. ಚಡ ಪಡಿಸಿ ಹಸಿವಿನಿಂದ ಬೆಂದು ಸಾಯುತ್ತಿರುವ ಕಂದಮ್ಮಗಳು. ಅವರ ಕೂಗನ್ನು ಕೇಳಲು ಇಲ್ಲಿ ನ್ಯಾಯಾಲಯಗಳು ಇಲ್ಲ. ಅಕ್ರಮ ಅನ್ಯಾಯ ವಂಶ ವೈಷಮ್ಯದ ಸಂಕಟಗಳಿಗೆ ಮಾತ್ರ ತೀರ್ಪು ನೀಡಲು ಅದು ತೆರೆದಿದೆ! ಅನ್ಯಾಯವನ್ನೇ ಅಲಂಕಾರವನ್ನಾಗಿ ಮಾಡದ ಈ ಕಾಲದ ನೋಟವಿದು. ಆದರೆ ನ್ಯಾಯ ಹಕ್ಕುಗಳಾಗಿ ದೊರೆಯುವ ಕಾಲ ಇದಲ್ಲ. ಯಾಕೆಂದರೆ

ಅವರ ನೋವು ಕೂಗು ಕೇಳಿಸಲು ನ್ಯಾಯಾಲಯಗಳು ಸನ್ನದ್ಧವಾಗಿಲ್ಲ. ಆದರೆ ನಾಳೆ ದೇವನು ಅವರ ಮೊರೆಯನ್ನು ಆಲಿಸುವನು. ಆದ್ದರಿಂದ ಪರಲೊಕದಲ್ಲಿ ಅವರೊಂದಿಗೆ ದೇವನು ಪ್ರಶ್ನಿಸುವನು. ನಿಮಗೆ ಏನನ್ನು ಹೇಳಲಿಕ್ಕಿದೆ? ನಿಮ್ಮ ನೋವು ಏನು? ಎಂದು ಈ ಮರ್ದಿತರಿಗೆ ಅವಕಾಶವನ್ನು ನೀಡಲಾಗುವುದು. “ಅವಳು ಪ್ರಶ್ನಿಸಲ್ಪಡುವಾಗ” ಎಂಬುದರ ಅರ್ಥ ಇದು ಎಂದು ನಾವು ಅರಿಯಬೇಕಾಗಿದೆ. ಹದಿನಾಲ್ಕು ಶತಮಾನದ ಹಿಂದೆ ಅರೇಬಿಯಾದ ಮರುಭೂಮಿಯಲ್ಲಿ ಮೊಳಗಿದ ಈ ವಚನ. ನಿನ್ನೆಯ ನ್ಯಾಯಕ್ಕಾಗಿ ಮೊಳಗಿದ ಆ ವಚನ ಇಂದು ಬೆಳಗುತ್ತಿದೆ.

ಓದುಗರೇ, sanmarga ಪೇಜ್ ಅನ್ನು Like ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.