ಸ್ಪಂದಿಸಿದ ಶಾಸಕರು, ವಿಶೇಷ ಅನುಭವ ನೀಡಿದ ಕಾರ್ಯಕ್ರಮ: ಮುಹಮ್ಮದ್ ಕುಂಞಿ

0
140

ಸನ್ಮಾರ್ಗ ವಾರ್ತೆ

ಬೆಂಗಳೂರಿನ ಕ್ಷೇಮವನದಲ್ಲಿ ನಡೆದ ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಸುಮಾರು ಒಂದು ಗಂಟೆ ಕಾರ್ಯಕ್ರಮ ನೀಡಿದ್ದಾರೆ. ಜನಪ್ರತಿನಿಧಿಗಳು ಮತ್ತು ಜನರ ಮಧ್ಯೆ ಸಂಬಂಧ ಎಂಬ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದ್ದು, 40ರಿಂದ 50ರಷ್ಟು ಶಾಸಕರು ಹಾಜರಿದ್ದರು.

ಮೂರು ದಿನಗಳ ಈ ಶಿಬಿರಕ್ಕೆ ಉಪನ್ಯಾಸಕರಾಗಿ ಆಯ್ಕೆ ಮಾಡಲಾದ ವ್ಯಕ್ತಿತ್ವಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿತ್ತು. ವಿಶೇಷವಾಗಿ ಕರ್ಜಗಿ ಮತ್ತು ಶ್ರೀ ರವಿಶಂಕರ್ ಗುರೂಜಿ ಅವರ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಕೊನೆಗೆ ಅವರಿಬ್ಬರನ್ನೂ ಪಟ್ಟಿಯಿಂದ ಹೊರಗಿಟ್ಟು ಹೊಸ ಉಪನ್ಯಾಸಕರ ಪಟ್ಟಿಯನ್ನು ಸ್ಪೀಕರ್ ಬಿಡುಗಡೆಗೊಳಿಸಿದ್ದರು.

ತನ್ನ ಉಪನ್ಯಾಸ ಕಾರ್ಯಕ್ರಮ ತೃಪ್ತಿ ನೀಡಿದ್ದು ಶಾಸಕರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಮುಹಮ್ಮದ್ ಕುಂಞಿ ತಿಳಿಸಿದ್ದಾರೆ. ಉಪನ್ಯಾಸದ ವೇಳೆ ಸ್ಪೀಕರ್ ಹಾಜರಿದ್ದರು ಮತ್ತು ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ. ಇದೊಂದು ವಿಶೇಷ ಅನುಭವವಾಗಿದ್ದು ಜನಪ್ರತಿನಿಧಿಗಳು ಹೇಗೆ ಜನರೊಂದಿಗೆ ಸಂಬಂಧ ಇಟ್ಟುಕೊಳ್ಳಬೇಕು ಮತ್ತು ಈಗಿನ ವಾತಾವರಣದಲ್ಲಿ ಜನಪ್ರತಿನಿಧಿಗಳ ಜವಾಬ್ದಾರಿಗಳು ಏನೇನು ಎಂಬ ಬಗ್ಗೆ ಮಾತನಾಡಿರುವುದಾಗಿ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ಸಂಜೆ 4 ರಿಂದ 5 ಗಂಟೆಯವರೆಗೆ ಇವರ ಉಪನ್ಯಾಸ ಕಾರ್ಯಕ್ರಮ ಇತ್ತು. ಕಾರ್ಯಕ್ರಮದ ಬಳಿಕ ಮುಹಮ್ಮದ್ ಕುಂಞಿಯವರಿಗೆ ಸ್ಪೀಕರ್ ಉಡುಗೊರೆ ನೀಡಿ ಗೌರವಿಸಿದರು.