Uniform Civil Code ಮತ್ತು ಪಾನ ನಿಷೇಧ ಕಾಯ್ದೆ

0
130

ಸನ್ಮಾರ್ಗ ವಾರ್ತೆ

✍️ ಬಿ. ಎಂ‌. ಹನೀಫ್

ಪ್ರಧಾನಿ ನರೇಂದ್ರ ಮೋದಿಯವರು Uniform Civil Code ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಸಂತೋಷ.‌ ಹಲವಾರು ವರ್ಷಗಳಿಂದ ಈ ವಿಷಯ ಪ್ರಸ್ತಾಪ ಆಗುತ್ತಲೇ ಇದೆ.

ಸಂವಿಧಾನದ ಮಾರ್ಗದರ್ಶಿ ಸೂತ್ರಗಳಲ್ಲಿ ಇರುವ ಹಲವಾರು ವಿಷಯಗಳಲ್ಲಿ ಮದ್ಯಪಾನ ನಿಷೇಧ ಮತ್ತು ಏಕರೂಪದ ನಾಗರಿಕ ಸಂಹಿತೆ ಎರಡೂ ವಿಷಯಗಳು ಮಹತ್ವದ್ದು. ಈ ಎರಡೂ ವಿಷಯಗಳ ಬಗ್ಗೆ ಚರ್ಚೆ ನಡೆದು ಹೊಸ ಕಾನೂನು ರಚನೆಯಾದರೆ ಒಳ್ಳೆಯದು.

ಹೀಗೆ ಹೊಸ ಕಾನೂನು ರಚನೆಯಾಗುವ ಮುನ್ನ ಸಾರ್ವಜನಿಕ ಚರ್ಚೆಗೆ ಒಂದು ಕರಡು ತಯಾರಿ ಮಾಡಿ ಬಿಡುವುದು ಒಳ್ಳೆಯದು. ಸಂಸತ್ತಿನಲ್ಲಿ ಮಸೂದೆ ಚರ್ಚೆ ಆಗುವುದಕ್ಕಿಂತ ಮುಂಚೆಯೇ ಈ ಎರಡೂ ವಿಷಯಗಳು ಸಾರ್ವಜನಿಕರ ಸಮ್ಮತಿಯನ್ನು ಪಡೆಯಬೇಕಿದೆ. ಏಕೆಂದರೆ ಇದು ಭಾರತದ ಎಲ್ಲ ಜಾತಿ, ಧರ್ಮಗಳ ಜನರ ಭಾವುಕತೆ ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ.

ಮದ್ಯಪಾನ‌ ನಿಷೇಧ ಜಾರಿಗೆ ತರುವ ಮುನ್ನ ತಮಿಳುನಾಡು ಮತ್ತು ಬಿಹಾರ ರಾಜ್ಯಗಳಲ್ಲಿ ಈಗಾಗಲೆ ಜಾರಿಯಾಗಿರುವ ಈ ಕುರಿತ ಕಾನೂನಿನ ಸಾಧಕ- ಬಾಧಕಗಳ ಕುರಿತು ಚರ್ಚೆ ನಡೆಯುವುದು ಒಳ್ಳೆಯದು.

ಸಂಪೂರ್ಣ ಪಾನ ನಿಷೇಧದ ಮಹತ್ವ ನಮ್ಮ ಸಂವಿಧಾನ ನಿರ್ಮಾತೃರಿಗೆ ಆ ಕಾಲದಲ್ಲೇ ಅರಿವಾಗಿತ್ತು. ಹಾಗಾಗಿಯೇ ಡಾ.ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು ಇದನ್ನು ಸಂವಿಧಾನದ ಮಾರ್ಗದರ್ಶಿ ಸೂತ್ರದಲ್ಲಿ ಸೇರಿಸಿಕೊಂಡಿದೆ. ಮದ್ಯ ಸೇವನೆಯಿಂದ ಎಷ್ಟು ಸಂಸಾರಗಳು ಬೀದಿಗೆ ಬಿದ್ದಿವೆ ಮತ್ತು ಎಷ್ಟು ಕೋಟಿ ಜನರು ಆರೋಗ್ಯ ಕೆಡಿಸಿಕೊಂಡು ಸಣ್ಣ ವಯಸ್ಸಿನಲ್ಲೇ ಜೀವ ಕಳೆದುಕೊಂಡಿದ್ದಾರೆ ಎನ್ನುವುದರ ಬಗ್ಗೆ ಒಂದು ರಾಷ್ಡ್ರೀಯ ಮಟ್ಟದ ಸಮೀಕ್ಷೆಯನ್ನು ಕೂಡಾ ಸರಕಾರ ನಡೆಸಬೇಕಿದೆ.

ಇಡೀ ದೇಶಕ್ಕೆ ಒಂದು ಕಾನೂನು ತರುವಾಗ ಕೆಲವು ರಾಜ್ಯಗಳಲ್ಲಿ ಮದ್ಯದ ಹೊಳೆ ಹರಿಸುವುದು, ಕೆಲವು ರಾಜ್ಯಗಳಲ್ಲಿ ಪೂರ್ತಿ dry law ಇರುವುದು ಕೂಡಾ ಎಳ್ಳಷ್ಟೂ ಸರಿಯಲ್ಲ.

ಹಾಗೆಯೇ ಏಕರೂಪದ ನಾಗರಿಕ ಕಾಯ್ದೆ ಜಾರಿಗೆ ತರುವ ಮುನ್ನ ಗೋವಾದಲ್ಲಿ ಪೋರ್ಚುಗೀಸರ ಕಾಲದಿಂದಲೂ ಜಾರಿಯಲ್ಲಿ ಇರುವ ಏಕರೂಪದ ನಾಗರಿಕ ಕಾಯ್ದೆ ಬಗ್ಗೆ ಸರಕಾರವು ಸಾರ್ವಜನಿಕ ಚರ್ಚೆ ನಡೆಸುವುದು ಒಳ್ಳೆಯದು.

ಗೋವಾ ನಾಗರಿಕ ಸಂಹಿತೆ ಪೋರ್ಚುಗೀಸರ ಬಳುವಳಿ. 1961 ರ ಗೋವಾ ವಿಮೋಚನೆಯ ಬಳಿಕ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಾನೂನಾಗಿ ಜಾರಿಯಲ್ಲಿದೆ. ಈ ನಾಗರಿಕ ಸಂಹಿತೆಯ ಪ್ರಕಾರ ಗೋವಾದಲ್ಲಿ ಕಡ್ಡಾಯವಾಗಿ ತಮ್ಮ ಮದುವೆ ನೋಂದಣಿ ಮಾಡಿಕೊಳ್ಳುವ ಮುಸ್ಲಿಮರು ಬಹುಪತ್ನಿತ್ವ ಪಾಲಿಸುವಂತಿಲ್ಲ.

ಆದರೆ ಗೋವಾದ ಈ ನಾಗರಿಕ ಸಂಹಿತೆ ಬಹುಪತ್ನಿತ್ವದ ವಿಷಯದಲ್ಲಿ ಹಿಂದೂಗಳಿಗೆ ವಿನಾಯತಿ ನೀಡಿದೆ. ಇದರ ಪ್ರಕಾರ ಗೋವಾದಲ್ಲಿ ಮದುವೆಯಾದ ಹಿಂದೂ ಪುರುಷರು ಕೆಲ ಸಂದರ್ಭಗಳಲ್ಲಿ ಬಹುಪತ್ನಿತ್ವವನ್ನು ಪಾಲಿಸಬಹುದು. Codes of Usages and Customs of Gentile Hindus of Goa ಪ್ರಕಾರ ಹೆಂಡತಿ ತನ್ನ 25ರ ಹರೆಯದೊಳಗೆ ಮಗುವನ್ನು ಹೆರಲು ಅಸಮರ್ಥಳಾದರೆ ಅಥವಾ 30 ರ ಹರೆಯದೊಳಗೆ ಒಂದು ಗಂಡು ಮಗುವನ್ನು ಹೆರದಿದ್ದರೆ, ಆಕೆಯ ಗಂಡ ಆಕೆಗೆ ವಿಚ್ಚೇದನೆ ಕೊಡದೆ ಇನ್ನೊಂದು ಮದುವೆಯಾಗಬಹುದು. ಇದು ಕೇವಲ ಗೋವಾದಲ್ಲಿ ಮದುವೆ ರಿಜಿಸ್ಟರ್ ಮಾಡಿಕೊಳ್ಳುವ ಹಿಂದೂ ಗಂಡಸರಿಗೆ ಮಾತ್ರ ಅನ್ವಯವಾಗುತ್ತದೆ.

ಗೋವಾದಲ್ಲಿ ಹಲವು ವರ್ಷಗಳಿಂದ ಬಿಜೆಪಿ ಸರಕಾರ ಇದೆ. ಇಲ್ಲಿರುವ ಅಸಮಾನತೆಯ ಏಕರೂಪ ನಾಗರಿಕ ಕಾಯ್ದೆ ಬಗ್ಗೆ ಪ್ರಧಾನಿಯವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಅವರಿಗೆ ಈ ಬಗ್ಗೆ ತಿಳುವಳಿಕೆ ಇಲ್ಲ ಎಂದೇ ಅನ್ನಿಸುತ್ತದೆ.

ಹಾಗಾಗಿ ಪ್ರಧಾನಿಯವರು ನಿಜಕ್ಕೂ Uniform Civil Code ವಿಷಯದಲ್ಲಿ ಗಂಭೀರವಾಗಿದ್ದಾರೆ ಎಂದರೆ ತಕ್ಷಣ ಗೋವಾಕ್ಕೆ ಭೇಟಿ ನೀಡಬೇಕು. ಇಡೀ ರಾಷ್ಟ್ರದಲ್ಲಿ ಏಕರೂಪದ ನಾಗರಿಕ ಕಾಯ್ದೆ ತರುವುದಕ್ಕೆ ಮುನ್ನ ಗೋವಾ ದಲ್ಲಿ ಪ್ರಾಯೋಗಿಕವಾಗಿ ಹೊಸ ಕಾಯ್ದೆಯನ್ನು ತರುವುದು ಬುದ್ಧಿವಂತಿಕೆಯ ಕೆಲಸ. ಅಲ್ಲಿ ಹೊಸ ಕಾನೂನಿನ ಪ್ರಯೋಗದಿಂದ ಉಂಟಾಗುವ ಸಾಧಕ ಬಾಧಕಗಳನ್ನು ಗಮನಿಸಿ ಮುಂದೆ ರಾಷ್ಟ್ರಮಟ್ಟದಲ್ಲಿ ಹೊಸ ಕಾನೂನಿನ ಕರಡು ಚರ್ಚೆಗೆ ಬಿಡುವುದು ಒಳ್ಳೆಯದು.

ಗೋವಾದಲ್ಲಿ ಮದ್ಯದ ಹೊಳೆಯೇ ಹರಿಯುತ್ತದೆ. ಹಾಗೆಯೇ ಅತ್ಯಧಿಕ ಗೋಮಾಂಸ ಬಳಕೆಯಾಗುತ್ತಿದೆ.

ಗೋವಾದಲ್ಲಿ ಈಗಾಗಲೆ ಜಾರಿಯಲ್ಲಿರುವ ಗೋಹತ್ಯೆ ಪ್ರೋತ್ಸಾಹದ ಕಾನೂನಿನ ಬಗ್ಗೆ ಈ ಸಂದರ್ಭದಲ್ಲಿ ಸರಕಾರ ಅಧ್ಯಯನ ನಡೆಸಬೇಕು. ಏಕರೂಪದ ನಾಗರಿಕ ಕಾಯ್ದೆಯಲ್ಲಿ ವಿವಿಧ ಜಾತಿ- ಧರ್ಮಗಳ ಆಹಾರ ಪದ್ಧತಿಯ ರಕ್ಷಣೆಯೂ ಒಳಗೊಳ್ಳುತ್ತದೆ.

ಗೋವಾದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಈ ಹೊಸ ಕಾನೂನನ್ನು ಜಾರಿಗೊಳಿಸುವುದೂ ಸುಲಭ. ಕಾಂಗ್ರೆಸ್ ಸಹಿತ ವಿರೋಧ ಪಕ್ಷದವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾರೆ, ಈ ಕಾನೂನಿಗೆ ವಿರೋಧ ಮಾಡುತ್ತಾರೆ ಎಂಬ ಭಯವೂ ಇಲ್ಲ.

ವಿ.ಸೂ: ದಯವಿಟ್ಟು ಯಾರೂ ಈ ಬರಹವನ್ನು ಲೇವಡಿಯ ಸಂಗತಿ ಎಂದು ಭಾವಿಸಬಾರದು. ಪಾನನಿಷೇಧ ಮತ್ತು ಏಕರೂಪದ ನಾಗರಿಕ ಕಾಯ್ದೆ ಎರಡಕ್ಕೂ ನನ್ನ ಬೆಂಬಲವಿದೆ. ದೇಶದ ಏಕತೆಗೆ ಇದು ಸಹಕಾರಿಯಾಗುತ್ತದೆ. ಆದರೆ ಈ ಕಾನೂನುಗಳನ್ನು ಜಾರಿಗೆ ತರುವಾಗ ದೇಶದ ಎಲ್ಲ ಜಾತಿ, ಧರ್ಮಗಳ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಕಾನೂನನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಹೊಸ ಭವ್ಯ ಭಾರತದ ನಿರ್ಮಾಣಕ್ಕೆ ಈ ಕಾನೂನು ಬುನಾದಿ ಆಗಲಿದೆ.