ಪ್ರತೀಕಾರ ಮತ್ತು ಕ್ಷಮಾಗುಣ

0
708

ಸನ್ಮಾರ್ಗ ವಾರ್ತೆ

✍️ ಡಾ| ಇಲ್ಯಾಸ್ ಮೌಲವಿ

ಪ್ರತೀಕಾರ ಮಾಡಲು ಶಕ್ತನಿದ್ದೂ ಕ್ಷಮಿಸುವ ಗುಣವು ಇಸ್ಲಾಮಿನಲ್ಲಿ ಅತ್ಯುನ್ನತ ಮಟ್ಟದ ಗುಣವಾಗಿದೆ. ಅದು ಈಮಾನ್ ಒಳಗೊಂಡ  ಗುಣ ವಿಶೇಷತೆಯಾಗಿದೆ. ಅದು ಈಮಾನಿನ ಸೌಂದರ್ಯವನ್ನು ಬೆಳಗಿಸುತ್ತದೆ. ಮಾತ್ರವಲ್ಲ ಆ ವ್ಯಕ್ತಿ ಆ ಮೂಲಕ ಉನ್ನತ  ಮಟ್ಟಕ್ಕೇರುತ್ತಾನೆ. ಕ್ಷಮೆ ಮತ್ತು ಸಹನಾಶೀಲತೆ ದೃಢ ಸತ್ಯವಿಶ್ವಾಸಿಯ ಎರಡು ಸಂಕೇತಗಳಾಗಿವೆ. ಅವೆರಡೂ ಉನ್ನತ ಮಟ್ಟದ ಗುಣ ಸ್ವಭಾವಗಳಲ್ಲಿ ಸೇರಿವೆ. ಆ ಮೂಲಕ ಕ್ಷಮಿಸುವ ಸಹನೆ ವಹಿಸುವ ಅಲ್ಲಾಹನ ಆದೇಶವನ್ನು ಶಿರಸಾ ಪಾಲಿಸುತ್ತಾನೆ.
ಪ್ರತೀಕಾರ ಮಾಡಲು ಶಕ್ತನಿದ್ದ ಸಂದರ್ಭದಲ್ಲಿ ಕ್ಷಮಿಸುವ ಗುಣಕ್ಕೆ ಇಸ್ಲಾಮಿನಲ್ಲಿ ಮಹತ್ತರ ಪಾತ್ರವಿದೆ.

“ನಾವು ಭೂಮಿ-ಆಕಾಶಗಳನ್ನೂ ಅವುಗಳಲ್ಲಿ ಇರುವುದೆಲ್ಲವನ್ನೂ ಪರಮ ಸತ್ಯವಾಗಿಯೇ ವಿನಾ ಸೃಷ್ಟಿಸಲಿಲ್ಲ ಮತ್ತು ತೀರ್ಮಾನದ ಗಳಿಗೆಯು ಖಂಡಿತವಾಗಿಯೂ ಬರಲಿದೆ. ಆದುದರಿಂದ ಓ ಪೈಗಂಬರರೇ, ನೀವು (ಇವರ ಅಸಭ್ಯ ವರ್ತನೆಗೆ ಪ್ರತಿಯಾಗಿ) ಸೌಜನ್ಯ ಪೂರ್ಣವಾಗಿ ವರ್ತಿಸಿರಿ.”
(ಅಲ್ ಹಿಜ್ರ್: 85)

ಆದ್ದರಿಂದ ಸತ್ಯವಿಶ್ವಾಸಿಗಳು ಮಾಡುವಂತಹ ಸಹನೆ ಮತ್ತು ಕ್ಷಮಾಗುಣ ಅವರ ಅಂತರಾಳದ ಉತ್ಕೃಷ್ಟ ಗುಣಗಳನ್ನು ಪ್ರತಿಫಲಿಸುತ್ತದೆ. ಆದರೆ ಇದು ಹೊರಗೆ ಕಂಡು ಬರುವಂತೆ ಅವರ ದೌರ್ಬಲ್ಯವಲ್ಲ. ಬದಲಾಗಿ ಅವರ ಮನೋದಾರ್ಢ್ಯತೆಯ ಪ್ರತಿಫಲನವಾಗಿದೆ.

ಕುರ್‌ಆನ್ ಹಾಗೂ ಪ್ರವಾದಿ ವಚನಗಳಲ್ಲಿ ಅನೇಕ ಕಡೆ ಈ ಗುಣವನ್ನು ಹೊಗಳುವ ಪ್ರಸ್ತಾಪವನ್ನು ನೋಡಬಹುದು. ಇದು ಜೀವನದಲ್ಲಿ  ಅಳವಡಿಸಲು ನಮಗೆ ಪ್ರೇರಕವಾಗಿದೆ. ನಮ್ಮೊಂದಿಗೆ ಅನ್ಯಾಯದಿಂದ ವರ್ತಿಸಿದವರೊಂದಿಗೆ ಕ್ರಮ ಕೈಗೊಳ್ಳಲು ಸಾಮಾರ್ಥ್ಯ ಇದ್ದೂ ಅವರೊಂದಿಗೆ ಕ್ಷಮೆಯ ವರ್ತನೆ ಪ್ರವಾದಿವರ್ಯರ(ಸ) ಗುಣವಾಗಿದೆ.

ತನ್ನನ್ನು ಕುಟುಂಬದಿಂದ ಬೇರ್ಪಡಿಸಿ ಪಾಳು ಬಾವಿಗೆ ತಳ್ಳಿದ   ಸಹೋದರರೊಂದಿಗೆ ಪ್ರವಾದಿ ಯೂಸುಫ್(ಅ) ಸಹನೆಯಿಂದ ವರ್ತಿಸಿದ್ದನ್ನು ಕುರ್‌ಆನ್ ಹೀಗೆ ಪ್ರಸ್ತಾಪಿಸಿದೆ-

ಆಗ ಅವರು, “ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆಯೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಎಲ್ಲರಿಗಿಂತಲೂ ಮಿಗಿಲಾದ ದಯಾಮಯನಾಗಿರುತ್ತಾನೆ.” (ಯೂಸುಫ್:92)

ಪ್ರವಾದಿವರ್ಯ(ಸ)ರಲ್ಲಿಯೂ ಈ ಗುಣ ಪ್ರಕಟವಾಗಿದೆ. ಕುರೈಶರ ವಿರುದ್ದ ಜಯ ಸಾಧಿಸಿದಾಗ ಪ್ರವಾದಿವರ್ಯರು(ಸ) ಅವರಿಗೆ ಕ್ಷಮೆ ನೀಡಿದರು. ಜರೀರ್ ಬಿನ್ ಅಬ್ದುಲ್ಲಾ(ರ)ರವರಿಂದ ವರದಿಯಾಗಿದೆ. ಪ್ರವಾದಿವರ್ಯರು(ಸ) ಹೇಳಿದರು, “ಬಿಡುಗಡೆಗೊಂಡ ಕುರೈಶರು ಸ್ವತಂತ್ರಗೊಳಿಸಲ್ಪಟ್ಟ ಲಖೀಫಿಗಳು ಇಹದಲ್ಲಿಯೂ ಪರದಲ್ಲಿಯೂ ಆಪ್ತ ಮಿತ್ರರಾಗುತ್ತಾರೆ. ಜೊತೆಗೆ ಮುಹಾಜಿರೂ ಅನ್ಸಾರಿಗಳೂ ಪರಸ್ಪರ ಆಪ್ತ ಮಿತ್ರರಾಗಿದ್ದಾರೆ.
(ಮುಸ್ಲಿಮ್ ನಿಬಂಧನೆಯ ಪ್ರಕಾರ ಇದು ಸಹೀಹ್ ಆದ ವರದಿ) ಮಕ್ಕಾ ವಿಜಯದ ಸಂದರ್ಭ ಬಂಧಿಸದೆ ಸ್ವತಂತ್ರ ಗೊಂಡು  ಬಿಡುಗಡೆಗೊಳಿಸಲ್ಪಟ್ಟ ಕುರೈಶರು ಎಂಬ ಪದ ಬಳಸಲಾಗಿದೆ.

ಮತ್ತೊಂದು ಪ್ರವಾದಿ ವಚನ ಹೀಗಿದೆ: ಉಕ್ಬತುಲ್ ಆಮೀರ್(ರ)ರವರಿಂದ ವರದಿ- “ಒಮ್ಮೆ ಪ್ರವಾದಿವರ್ಯ(ಸ)ರನ್ನು ಭೇಟಿಯಾದಾಗ  ಅವರ ಹಸ್ತಲಾಘವ ಮಾಡಿ “ಪ್ರವಾದಿಗಳೇ ಶ್ರೇಷ್ಠವಾದ ಕರ್ಮಗಳ ಬಗ್ಗೆ ನನಗೆ ಹೇಳಿಕೊಡುವಿರಾ? ಎಂದು ಕೇಳಿದಾಗ ಹೇಳಿದರು,  “ನಿನ್ನೊಡನೆ ಸಂಬಂಧ ಕಳಚಿದವನ ಜೊತೆ ಸಂಬಂಧ ಬೆಳೆಸಿರಿ. ನಿಮಗೆ ಉಪಕಾರ ತಡೆದವನಿಗೆ ಉಪಕಾರ ಮಾಡಿರಿ. ನಿಮ್ಮೊಂದಿಗೆ ಅನ್ಯಾಯದಿಂದ ವರ್ತಿಸಿದ್ದರೆ ಅದನ್ನು ನಿರ್ಲಕ್ಷಿಸಿರಿ.” (ಅಹ್ಮದ್)

ಕ್ಷಮಿಸಿರಿ ಎಂದರೆ ತಪ್ಪುಗಳನ್ನು ಕ್ಷಮಿಸುವುದಾಗಿದೆ. ಶಿಕ್ಷೆಯ ಕ್ರಮ ಕೈಗೊಳ್ಳುವ ಪ್ರಕ್ರಿಯೆಯ ಶಕ್ತಿಯಿದ್ದೂ ಅದರಿಂದ ದೂರವಿದ್ದುಕೊಂಡರೆ ಅಲ್ಲಿ ಕ್ಷಮೆ ಉದ್ಬವವಾಗುತ್ತದೆ. ಕ್ಷಮಿಸುವವನು ಪ್ರತಾಪಿಯೂ ಶ್ರೇಷ್ಟನೂ ಆಗಿರುತ್ತಾನೆ.  ತನಗೆ ಕಿರುಕುಳ ನೀಡಿದವನ ವಿರುದ್ಧ ಕ್ರಮಕೈಗೊಳ್ಳುವುದು ನ್ಯಾಯವಾದರೂ ಕ್ಷಮಿಸುವುದು ಶ್ರೇಷ್ಠ ಗುಣವಾಗಿದೆ.

ಅಲ್‌ಹಿಜ್ರ್ ಸೂಕ್ತದಲ್ಲಿಯೂ ಇದನ್ನು  ಬಹಳ ಗೌರವಯುತವಾಗಿ ಪ್ರಸ್ತಾಪಿಸಲಾಗಿದೆ-
ಪ್ರತೀಕಾರವಿದ್ದೂ ಕ್ಷಮಿಸುವ ಗುಣ ಸಭ್ಯರ ಗುಣವಾಗಿದೆ. ಯಾಕೆಂದರೆ ಅವರು ಜೀವನದ ವಾಸ್ತವಿಕತೆಗಳನ್ನು ಅರ್ಥೈಸಿದ, ಸತ್ವ ಪರೀಕ್ಷೆಗಳ ಬಗ್ಗೆ ಪ್ರಜ್ಞೆಯುಳ್ಳವರಾಗಿದ್ದಾರೆ. ಇತರರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿದ್ದಾಗಲೂ ಮಾನವೀಯ ನೆಲೆಯಲ್ಲಿ ಸುಮ್ಮನಿರುವುದು ಮಹತ್ತರವಾದ ಗುಣವಾಗಿದೆ. ತಪ್ಪು ಸಂಭವಿಸಿದಾಗ ಅದನ್ನು ಒಪ್ಪಿಕೊಂಡು ಅದನ್ನು ಹೇಳುವವರು ನಿಶ್ಚಯವಾಗಿಯೂ  ಕ್ಷಮೆಗೆ ಅರ್ಹರಾಗಿರುತ್ತಾರೆ.  

ಇತಿಹಾಸದ ಪುಟಗಳಲ್ಲಿ
ಪ್ರವಾದಿಗಳ ಮತ್ತು ಸಜ್ಜನ ಪೂರ್ವಜರ ಇತಿಹಾಸದಲ್ಲಿ ಕ್ಷಮಾಗುಣ ಅತ್ಯುನ್ನತ ಉದಾಹರಣೆಗಳನ್ನು ಕಾಣಬಹುದು. ಅದರಲ್ಲಿ ಕೆಲವು ಈ ಕೆಳಗಿದೆ.

ಕುರೈಶರ ನಿರಂತರ ದೌರ್ಜನ್ಯ ಮರ್ದನಗಳು ಇಸ್ಲಾಮಿನ ವಿರುದ್ಧ ನಡೆಸಿದ ಯುದ್ದಗಳ ನಂತರ ಹಿಜಿರಾ ಎಂಟನೇ ವರ್ಷದಲ್ಲಿ ಪ್ರವಾದಿವರ್ಯರ(ಸ) ಸೇನೆಯು ಮಹಾ ಸೈನ್ಯವನ್ನು ಸೋಲಿಸಿತು. ಆ ವೇಳೆ ಪ್ರವಾದಿವರ್ಯ(ಸ) ರೊಂದಿಗಿನ ಅವರ ದುರ್ವರ್ತನೆಗಳನ್ನು ಪ್ರಸ್ತಾಪಿಸದೆ ಎಲ್ಲರನ್ನೂ ಕ್ಷಮಿಸಿದರು. ಓರ್ವ ವ್ಯಕ್ತಿಯ ಮೇಲೆ ಅವರು ಮಾಡಿದ ದುಷ್ಕರ್ಮಗಳ ಬದಲಾಗಿ ಅವರೊಂದಿಗೆ ಮಾಡಿದ ಕ್ಷಮಾಗುಣ ನಮ್ಮನ್ನು ಚಕಿತಗೊಳಿಸಿತು. ಅವರು ದೇವದೂತರಾಗಿದ್ದರು. ಅವರು ಜಗದ ಮಾರ್ಗದರ್ಶಕರಾಗಿದ್ದರು.

ಪ್ರವಾದಿ ಯೂಸುಫ್(ಅ) ತನ್ನ ಸಹೋದರರ ಜೊತೆ ವರ್ತಿಸಿದ ರೀತಿಯೂ ಮಾದರಿಯಾಗಿದೆ. ತನ್ನ ತಂದೆಯಿಂದ ದೂರ ಮಾಡಿ ಪಾಳು ಬಾವಿಗೆ ತಳ್ಳಿದ ಸಹೋದರರ ಜೊತೆ ಪ್ರತೀಕಾರದ ಶಕ್ತಿಯಿದ್ದೂ ಅವರನ್ನು ಕ್ಷಮಿಸಿದರು.

ಆಗ ಅವರು, “ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆಯೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಎಲ್ಲರಿಗಿಂತಲೂ ಮಿಗಿಲಾದ ದಯಾಮಯನಾಗಿರುತ್ತಾನೆ.” (ಯೂಸುಫ್: 92)

ಒಮ್ಮೆ ಪ್ರವಾದಿವರ್ಯರು(ಸ) ಮರದ ಬುಡದಲ್ಲಿ ಮಲಗಿ ನಿದ್ರಿಸಿದ್ದರು. ಆಗ ಸತ್ಯ ನಿಷೇಧಿಯೋರ್ವ ಬಂದು ದಾಳಿ ಮಾಡಲು ಯತ್ನಿಸಿ ಪ್ರವಾದಿವರ್ಯರ(ಸ) ಜೊತೆ “ಮುಹಮ್ಮದ್, ಈಗ ನಿನ್ನನ್ನು ಕಾಪಾಡುವವರು ಯಾರು?” ಎಂದು ಕೇಳಿದ. ಆಗ ಪ್ರವಾದಿವರ್ಯರು (ಸ) ಶಾಂತಚಿತ್ತದಿಂದ ನೀಡಿದ ಉತ್ತರ “ಅಲ್ಲಾಹ್” ಎಂದಾಗಿತ್ತು. ಆಗ ಆತ ನಡುಗಿದನು, ಆತನ ಕೈಯಿಂದ ಖಡ್ಗ ಜಾರಿ ಕೆಳಗೆ ಬಿತ್ತು. ಕೂಡಲೇ ಅದನ್ನು ಎತ್ತಿದ ಪ್ರವಾದಿವರ್ಯರು(ಸ) “ಈಗ ನಿನ್ನನ್ನು ಕಾಪಾಡಲು ಯಾರಿದ್ದಾರೆ?” ಎಂದು ಕೇಳಿದರು. ಆಗ ಆ ವ್ಯಕ್ತಿ “ನನ್ನನ್ನು ಕ್ಷಮಿಸಿರಿ” ಎಂದನು. ನಂತರ ಪ್ರವಾದಿವರ್ಯರು(ಸ) ಆತನನ್ನು ಕ್ಷಮಿಸಿದರು.

ಒಮ್ಮೆ ಮುಆದ್ ಬಿನ್ ಸಈದ್ ತನ್ನ ಬಳಿಯಿದ್ದ ಯುದ್ಧ ಖೈದಿಗಳ ತಂಡವೊಂದನ್ನು ಕೊಲ್ಲಲು ನಿರ್ಧರಿಸಿದರು. ಆಗ ಅವರಲ್ಲಿ ಓರ್ವ ಬಂದು “ನಾವು ನಿಮ್ಮ ಬಂಧಿಗಳಾಗಿದ್ದೇವೆ. ನಾವು ಹಸಿವು ದಾಹದಿಂದ ಬಳಲಿದ್ದೇವೆ. ಈ ವೇಳೆ ನಮ್ಮನ್ನು ಕೊಲ್ಲಬೇಡಿರಿ” ಎಂದು  ಹೇಳಿದರು. ಆಗ ಅವರಿಗೆ ನೀರು ಮತ್ತು ಆಹಾರವನ್ನು ನೀಡಲಾಯಿತು. ದಾಹ ಹಸಿವು ತಣಿಸಿದ ಬಳಿಕ ಅವರು “ತಾವು ನಮಗೆ  ಆಹಾರ, ನೀರು ಒದಗಿಸಿದಿರಿ. ನಾವು ಈಗ ನಿಮ್ಮ ಅತಿಥಿಗಳು. ನೀವು ಅತಿಥಿಗಳ ಜೊತೆ ಹೇಗೆ ವರ್ತಿಸುತ್ತೀರಿ? ಎಂದು ಕೇಳಿದಾಗ ಅವರು ನಾನು ನಿಮಗೆ ಕ್ಷಮೆ ನೀಡಿದ್ದೇನೆ ಎಂದುತ್ತರಿಸಿದರು.

ಅಬೂದರ್(ರ) ತನ್ನ ಗುಲಾಮ “ನೀನು ಯಾಕೆ ಒಂಟೆಯ ಆಹಾರದ ಸ್ಥಳಗಳಿಗೆ ಆಡನ್ನು ಮೇಯಲು ಬಿಟ್ಟೆ” ಎಂದು ಕೇಳಿದರು.  “ನಿಮ್ಮನ್ನು ಕೋಪಗೊಳಿಸಲಿಕ್ಕಾಗಿ” ಎಂದನು. ಆಗ ಅಬೂದರ‍್ರ್ (ರ) ಹೇಳಿದರು, “ಇರಲಿ ಹಾಗಾದರೆ
ಕೋಪದೊಂದಿಗೆ ಅದರ ಪ್ರತಿಫಲವನ್ನೂ ನೀಡುತ್ತೇನೆ. ಅಲ್ಲಾಹನ ಮಾರ್ಗದಲ್ಲಿ ನಿನ್ನನ್ನು ನಾನು ಸ್ವತಂತ್ರಗೊಳಿಸಿದ್ದೇನೆ.”

ಒಮ್ಮೆ ಅಬೂ ಹುರೈರಾ(ರ)ರನ್ನು ತೀವ್ರವಾಗಿ ಓರ್ವರು ವಿಮರ್ಶಿಸಿದರು. ಬಳಿಕ ಅವರು ಮೌನರಾದಾಗ ಮುಗಿಯಿತಾ ಎಂದು ಅಬೂ ಹುರೈರ ಕೇಳಿದರು. ಆಗ ಆತ “ಮುಗಿಯಿತು, ಬೇಕಾದರೆ ಇನ್ನೂ ಹೇಳಬಹುದು” ಎಂದು ಹೇಳಿದ. ಆಗ ಅವರನ್ನು ಅಬೂಹುರೈರಾ  ಹತ್ತಿರ ಕರೆದರು. “ಈಗ ಏನು ಮಾಡಬಹುದು ಎಂಬ ಆತಂಕ ಆ ವ್ಯಕ್ತಿಯ ಮನದಲ್ಲಿ ಮೂಡಿತು. ವುಝೂ ನಿರ್ವಹಿಸಲು ನೀರು  ತರಲು ಹೇಳಿದರು. ವುಝೂ ನಿರ್ವಹಿಸಿ ಕಿಬ್ಲಾದತ್ತ ಮುಖ ಮಾಡಿ ಹೀಗೆ ಪ್ರಾರ್ಥಿಸಿದರು, “ಅಲ್ಲಾಹನೇ ನಿನ್ನ ದಾಸ ನನ್ನನ್ನು  ಆಕ್ಷೇಪಿಸಿದ್ದಾನೆ. ನನ್ನ ಕುರಿತು ನನಗೆ ತಿಳಿಯದ್ದನ್ನು ಹೇಳಿದ್ದಾನೆ. ಇವರು ಹೇಳಿದ್ದು ಸತ್ಯವೆಂದಾದರೆ ನನ್ನನ್ನು ಕ್ಷಮಿಸು. ಇನ್ನು ಆತ  ಹೇಳಿದ್ದು ಸುಳ್ಳೆಂದಾದರೆ ಅವನನ್ನು ಕ್ಷಮಿಸು’ ಇದನ್ನು ಆಲಿಸಿದ ಆ ವ್ಯಕ್ತಿ ಮೊಣಕಾಲಲ್ಲಿ ನಿಂತು ಅಬೂಹುರೈರಾ(ರ)ರ ಹಣೆಯನ್ನು  ಚುಂಬಿಸಿದರು.

ಕ್ಷಮಾಗುಣದ ಪ್ರಯೋಜನಗಳು
ಇಸ್ಲಾಮ್ ಪ್ರತೀಕಾರಕ್ಕೆ (ಖಿಸಾಸ್) ಅನುಮತಿಸಿದೆ. ಆದರೆ ಪ್ರತೀಕಾರಕ್ಕಿಂತ ಶ್ರೇಷ್ಠವಾದುದು ಕ್ಷಮಾಗುಣವಾಗಿದೆ ಎಂದು ಅಲ್ಲಾಹನು ಹೇಳಿದ್ದಾನೆ. ಯಾಕೆಂದರೆ ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಅದರಿಂದ ಸಾಕಷ್ಟು ಪ್ರಯೋಜನವಿದೆ. ಅದರಲ್ಲಿ ಕೆಲವನ್ನು ಪ್ರಸ್ತಾಪಿಸುತ್ತೇನೆ.

ಖಿಸಾಸ್‌ನಲ್ಲಿ ಸಾಧ್ಯವಾಗದ ಸಂಸ್ಕರಣೆಯು ಕ್ಷಮೆಯಿಂದ ಸಾಧ್ಯವಾಗುತ್ತದೆ. ಕ್ಷಮಿಸುವವರಿಗೆ ಈ ಲೋಕದಲ್ಲಿ ಲಭಿಸುವ ಪ್ರತಿಫಲಕ್ಕಿಂತ  ಶ್ರೇಷ್ಠ ಪ್ರತಿಫಲ ಪರಲೋಕದಲ್ಲಿ ಅಲ್ಲಾಹನು ವಾಗ್ದಾನ ಮಾಡಿದ್ದಾನೆ.. ಕ್ಷಮಿಸುವುದರಿಂದ ಓರ್ವನು ಪ್ರತಾಪವಂತನಾಗುತ್ತಾನೆ. ಒಳಿತಿನಿಂದ ಕೆಡುಕನ್ನು ಅಳಿಸುವ ಮಹತ್ತರವಾದ ಅಲ್ಲಾಹನ ಆದೇಶದ ಶಿರಸಾ ಪಾಲಕನಾಗುತ್ತಾನೆ. ಅದು ಶತ್ರುತ್ವವನ್ನು ಶೀಥಿಲಗೊಳಿಸುತ್ತದೆ. ತಪ್ಪು  ಮಾಡಿದವನಿಗೆ ಆತ್ಮವಿಮರ್ಶೆಗೆ ಅವಕಾಶ ಮಾಡಿಕೊಂಡುತ್ತದೆ. ದ್ವೇಷಿಗಳು ಪರಸ್ಪರ ಆಪ್ತ ಮಿತ್ರರಾಗುತ್ತಾರೆ. ಆ ಮೂಲಕ ಅಲ್ಲಾಹನ  ಪ್ರೀತಿಗೆ ಪಾತ್ರರಾಗುತ್ತಾರೆ.  ಆಂತರಿಕವಾದ ದೃಢವಿಶ್ವಾಸದಿಂದ ಈ ಗುಣ ಸಿದ್ದಿಸುತ್ತದೆ. ಈಮಾನ್ ತುಂಬಿದ ಮನದಲ್ಲಿ ಶಿರ್ಕ್  ಉದ್ಭವಿಸದು. ಛಿದ್ರತೆ ಭಿನ್ನಮತ ಶತ್ರುಗಳಿಗೆ ದಾರಿ ಮಾಡಿಕೊಡುತ್ತದೆ.
ಈ ಗುಣ ಹೊಂದಿದವನು ಅಲ್ಲಾಹನ ಆದೇಶ ಪಾಲಿಸುತ್ತಾನೆ. ಕ್ಷಮೆಯು ಆಕಾಶ ಭೂಮಿಯಷ್ಟು ವಿಶಾಲವಾದ ಸ್ವರ್ಗದ ಗುಣವಾಗಿದೆ.  ಹೃದಯ ವೈಶಾಲ್ಯತೆಯು ಅಸೂಯೆಯಿಂದ ಶತ್ರುಗಳಿಂದ ಮನಸ್ಸು ಮಲಿನಗೊಳ್ಳುವುದರಿಂದ ತಡೆಯುತ್ತದೆ. ಕ್ಷಮಿಸುವುದು ಪಾಪ ಮಾಡಿದವ ಜೊತೆ ಕರುಣೆ ತೋರಿಸುವುದು ಮಾನವೀಯ ಗುಣವಾಗಿದೆ.

ಮಾನಸಿಕ ದೌರ್ಬಲ್ಯ ಮತ್ತು ಕ್ಷಮಾಗುಣ
ಪಾಪ ಮಾಡಿದವನಿಗೆ ಒಂದು ಪಾಠ ಕಲಿಸದಿದ್ದರೆ ಆತ ಅದನ್ನು ಪುನರಾವರ್ತಿಸುತ್ತಾನೆಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದ್ದರಿಂದ ಮಾನಸಿಕ ದೌರ್ಬಲ್ಯದಿಂದ ಕ್ಷಮಾ ಗುಣ ಹುಟ್ಟುತ್ತದೆ ಎಂಬುದು ಅವರ ಭಾವನೆ. ಆದರೆ ವಾಸ್ತವದಲ್ಲಿ ತಪ್ಪು ಮಾಡಿದ ಸಂದರ್ಭ, ನ್ಯಾಯವನ್ನು ಪರಿಗಣಿಸಿದಾಗ ಇದು ಘಟಿಸುತ್ತದೆ. ನಮ್ಮ ಭಾಗದಿಂದ ಆಗುವ ತಪ್ಪುಗಳಿಗೆ ಇದರಿಂದ ತಡೆಯಾಗುತ್ತದೆ. ಪ್ರತೀಕಾರ, ವಿದ್ವೇಷ ಮುಂತಾದ ಕೆಟ್ಟ ಗುಣಗಳನ್ನು ತೊರೆದು ನಮ್ಮ ಕಡೆಯಿಂದ ಉಂಟಾಗುವ ಪಾಪಗಳಿಗೆ ಕ್ಷಮಾಗುಣದಿಂದ ತಡೆ ಹಾಕಬಹುದು. ನಮ್ಮೊಳಗಿನ ನೋವುಗಳನ್ನು ವಾಸಿ ಮಾಡಬಹುದು. ಇದು ಕೋಪವನ್ನು ನಿಯಂತ್ರಿಸುವ ಮಾರ್ಗವಾಗಿದೆ.

ಪ್ರತೀಕಾರದ ಕ್ರಮ ಮತ್ತು ಕ್ಷಮೆ
ವಿಪರೀತ ಕೋಪ ಮನವನ್ನು ಕತ್ತಲುಗೊಳಿಸುತ್ತದೆ. ಫೋನ್ ಸಂದೇಶ, ಅನಗತ್ಯ ಚರ್ಚೆ ಪ್ರತೀಕಾರದ ಅಗ್ನಿಗೆ ಕಾವು ಕೊಡುತ್ತದೆ. ಹೀಗಿರುವ ಸಂದರ್ಭಗಳಲ್ಲಿ ಕ್ಷಮಾಗುಣದ ಸತ್ಯವಿಶ್ವಾಸಿಯು ವಿಚಾರಗಳನ್ನು ಚೆನ್ನಾಗಿ ಗ್ರಹಿಸಿ ವಿವೇಕವಂತನಾಗಿ ವರ್ತಿಸುತ್ತಾನೆ.

ಕ್ಷಮಾಶೀಲನನ್ನು ಪರೀಕ್ಷೆಯ ಸಂದರ್ಭದಲ್ಲಿ ಸಹನಾಶೀಲನನನ್ನು ಕೋಪದ ಸಂದರ್ಭದಲ್ಲಿ ಯಾವುದೇ ಪುರಾವೆಯಿಲ್ಲದೆ ಪತ್ತೆಹಚ್ಚಬಹುದು. ಇಸ್ಲಾಮ್ ಮರ್ದಿತನಿಗೆ ಅಕ್ರಮವೆಸಗಿದವನ ವಿರುದ್ಧ ಪ್ರತೀಕಾರಕ್ಕೆ ಇಸ್ಲಾಮ್ ಅವಕಾಶ ನೀಡಿದೆ. ಆದರೆ ಅಲ್ಲಾಹನ  ಬಳಿಯಲ್ಲಿ ಉನ್ನತ ದರ್ಜೆ ಪಡೆಯಲು ಕ್ಷಮಾಗುಣದ ಅಗತ್ಯವಿದೆ.